ನವದೆಹಲಿ: ರಾಜ್ಯಗಳಿಗೆ ಪೂರೈಸಬೇಕಾಗಿದ್ದ ನಿಗದಿತ ಪ್ರಮಾಣದ ಕೋವಿಡ್-19 ನಿರೋಧಕ ಲಸಿಕೆಗಳನ್ನು ಜೂನ್ 21ರೊಳಗೆ ಸರಬರಾಜು ಮಾಡಲಾಗಿದ್ದು, ಯಾವುದೇ ಬಾಕಿ ಉಳಿದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಂಗಳವಾರ ತಿಳಿಸಿದೆ.
18 ವರ್ಷದಿಂದ 44 ವರ್ಷದೊಳಗಿನ ವಯಸ್ಸಿನವರಿಗೆ ಉಚಿತ ಲಸಿಕೆಗಳನ್ನು ಹಾಕಲು ದೆಹಲಿಗೆ ಕೇಂದ್ರ ಸರ್ಕಾರವು ಲಸಿಕೆ ಸರಬರಾಜು ಮಾಡಿಲ್ಲ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಇದರ ಬೆನ್ನಲ್ಲೇ ಆರೋಗ್ಯ ಸಚಿವಾಲಯವು ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಜೂನ್ 21ರೊಳಗೆ ಲಸಿಕಾ ತಯಾರಿಕಾ ಸಂಸ್ಥೆಗಳು ನೇರ ಖರೀದಿಯ ಮೂಲಕ ದೆಹಲಿಗೆ 5.6 ಲಕ್ಷ ಡೋಸ್‌ಗಳನ್ನು ಪೂರೈಸಿವೆ ಎಂದೂ ಸಚಿವಾಲಯವು ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರವು ಖರೀದಿಸಿರುವ ಲಸಿಕೆಗಳಲ್ಲಿ ಹೆಚ್ಚುವರಿಯಾಗಿ 8.8 ಲಕ್ಷದಷ್ಟು ಲಸಿಕೆಗಳನ್ನು ದೆಹಲಿಗೆ ಉಚಿತವಾಗಿ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ. ಜೂನ್ ಅಂತ್ಯದ ವೇಳೆಗೆ ಅಷ್ಟೂ ಪ್ರಮಾಣದ ಲಸಿಕೆಗಳು ಪೂರೈಕೆಯಾಗಲಿವೆ. ಜೂನ್ 22ರ ವೇಳೆಗೆ ದೆಹಲಿಯಲ್ಲಿ 9.9ಲಕ್ಷಕ್ಕೂಹೆಚ್ಚಿನ ಲಸಿಕೆಗಳು ಬಳಕೆಯಾಗದೇ ಉಳಿದಿವೆ ಎಂದೂ ಸಚಿವಾಲಯವು ವಿವರಿಸಿದೆ.