ಕಾಸರಗೋಡು: ಯುವಜನತೆಯನ್ನು ಆವರಿಸುತ್ತಿರುವ ಮದ್ಯ, ಮಾದಕಪದಾರ್ಥ ವ್ಯಸನ ವಿರುದ್ಧ ಹೋರಾಟವನ್ನೇ ಬದುಕಿನ ಲಹರಿಯಾಗಿಸಿದ ರಘುನಾಥನ್ ಇತರರಿಗೆ ಮಾದರಿಯಾಗಿದ್ದಾರೆ.
ಅಬಕಾರಿ ಇಲಾಖೆಯ ಪ್ರಿವೆಂಟೀವ್ ಅಧಿಕಾರಿ ಎನ್.ಜಿ.ರಘುನಾಥನ್ ಅವರು ಮಾದಕಪದಾರ್ಥ ವ್ಯಸನ ವಿರುದ್ಧ ಮಿಷನ್ ಆಗಿರುವ "ವಿಮುಕ್ತಿ"ಯ ಕಾಸರಗೋಡು ಜಿಲ್ಲಾ ಸಂಚಾಲಕರಾಗಿ ನಡೆಸುತ್ತಿರುವ ಚಟುವಟಿಕೆಗಳು ಗಮನಾರ್ಹ ಪರಿಣಾಮ ನೀಡುತ್ತಿವೆ.
2007 ರಿಂದ ಇವರು ನಡೆಸಿಕೊಂಡು ಬಂದ 12ಕ್ಕೂ ಅಧಿಕ ಜನಜಾಗೃತಿ ಕಾರ್ಯಕ್ರಮಗಳು ಈ ನಿಟ್ಟಿನಲ್ಲಿ ಮೊದಲ ಸಾಲಿನಲ್ಲಿವೆ. ಮಾದಕ ಪದಾರ್ಥ ವ್ಯಸನ ವಿರುದ್ಧ ಶನಿವಾರ ಮಾತ್ರ ಅವರು ನಡೆಸಿದುದು 12 ಜನಜಾಗೃತಿ ತರಗತಿಗಳು ಎಂಬುದು ಸಣ್ಣ ವಿಚಾರವಲ್ಲ. ವಿಭಿನ್ನ ಸ್ವಭಾವ, ಸ್ವರೂಪಗಳಲ್ಲಿ ಜಾಗತಿಕ ಮಟ್ಟದಲ್ಲಿ ಮಾದಕಪದಾರ್ಥ ವ್ಯಸನ ಸೃಷ್ಟಿಸುತ್ತಿರುವ ಅಪಾಯ ಮತ್ತು ದುರಂತಗಳ ವಿರುದ್ಧ ಶಾಲೆ, ಕಾಲೇಜುಗಳ ಸಹಿತ ವಿವಿಧೆಡೆ ಅವರು ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ.
2001 ರಲ್ಲಿ ಅಬಕಾರಿ ಇಲಾಖೆಯಲ್ಲಿ ನಾಗರೀಕ ಅಬಕಾರಿ ಅಧಿಕಾರಿ(ಸಿವಿಲ್ ಎಕ್ಸೈ ಸ್ ಆಫೀಸರ್ ) ಯಾಗಿ ಸೇವೆ ಆರಂಭಿಸಿರುವ ರಘುನಾಥನ್ ಅವರು ಸದ್ರಿ ಪ್ರಿವೆಂಟೀವ್ ಅಧಿಕಾರಿಯಾಗಿದ್ದಾರೆ. 2007ರಲ್ಲಿ ಇಲಾಖೆಯ ಸದ್ ಸೇವನ ಪ್ರಶಸ್ತಿಗಳಿಸಿದ್ದಾರೆ. 2016ರಲ್ಲಿ ರಾಷ್ಟ್ರೀಯ ಯುವಜನ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ಯುವಜನ ಆಯೋಗದ ಅಂಗೀಕಾರ ಪಡೆದಿದ್ದಾರೆ. ಜಿಲ್ಲಾ ಪಂಚಾಯತ್ ಸಹಿತ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳು ಅನೇಕ ಪುರಸ್ಕಾರಗಳನ್ನು ನೀಡಿವೆ.
ಇವರು ನೀಲೇಶ್ವರದ ಚಾಯೋತ್ ನಿವಾಸಿಯಾಗಿದ್ದಾರೆ. ಇವರ ಪತ್ನಿ ಸುನಿತಾ, ಮಕ್ಕಳು ಡಾ.ಅರ್ಪಣ, ಅರ್ಜುನ್.