ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿರುವ ಹೊಸ ಕ್ರಮಗಳು ಆರ್ಥಿಕ ಚಟುವಟಿಕೆ ಉತ್ತೇಜಿಸಲು, ಉತ್ಪಾದನೆ ಮತ್ತು ರಫ್ತು ಹೆಚ್ಚಿಸಲು ಮತ್ತು ಉದ್ಯೋಗ ಸೃಷ್ಟಿಸಲು ನೆರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
ಈ ನಿರ್ಧಾರಗಳು ಸಾರ್ವಜನಿಕ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸುತ್ತದೆ, ವಿಶೇಷವಾಗಿ ಕಡಿಮೆ ಸೇವೆ ಇರುವ ಪ್ರದೇಶಗಳಲ್ಲಿ, ವೈದ್ಯಕೀಯ ಮೂಲಸೌಕರ್ಯದಲ್ಲಿ ಖಾಸಗಿ ಹೂಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ನಿರ್ಣಾಯಕ ಮಾನವ ಸಂಪನ್ಮೂಲವನ್ನು ಹೆಚ್ಚಿಸುತ್ತದೆ ಎಂದು ಮೋದಿ ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.
ಮಕ್ಕಳಿಗೆ ಆರೋಗ್ಯ ಸೌಲಭ್ಯಗಳನ್ನು ಬಲಪಡಿಸುವುದರ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ. ಹಲವು ಉಪ ಕ್ರಮಗಳೊಂದಿಗೆ ರೈತರ ವೆಚ್ಟ ಕಡಿಮೆ ಮಾಡಿ, ಆದಾಯ ಹೆಚ್ಚಿಸಲು ಮತ್ತು ಕೃಷಿ ಚಟುವಟಿಕೆಗಳ ಹೆಚ್ಚಿನ ಸ್ಥಿತಿಸ್ಥಾಪಕತ್ವ, ಸುಸ್ಥಿರತೆಯನ್ನು ಬೆಂಬಲಿಸಲು ಪ್ರಾಮುಖ್ಯತೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಸಣ್ಣ ಮತ್ತು ಸ್ವಯಂ ಉದ್ಯಮಿಗಳ ವ್ಯವಹಾರ ಚಟುವಟಿಕೆ ಅಸ್ತಿತ್ವ ಮಾತ್ರವಲ್ಲದೇ ಅದನ್ನು ಮತ್ತಷ್ಟು ಮುಂದುವರೆಸಲು ಬೆಂಬಲ ನೀಡಲಾಗಿದೆ. ಆರ್ಥಿಕ ನೆರವು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಆರ್ಥಿಕ ಚಟುವಟಿಕೆ ಮತ್ತು ಉದ್ಯೋಗ ಸೃಷ್ಟಿಗೆ ನೆರವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕೋವಿಡ್-19 ನಿಂದ ಹಾನಿಗೊಳಗಾದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು, ಆರೋಗ್ಯ ಮೂಲಸೌಕರ್ಯಗಳನ್ನು ಸುಧಾರಿಸಲು 1.1 ಲಕ್ಷ ಕೋಟಿ ಸಾಲ ಖಾತ್ರಿ ಯೋಜನೆ ಸೇರಿದಂತೆ ಹಲವು ಕ್ರಮಗಳನ್ನೊಳಗೊಂಡ ಪ್ಯಾಕೇಜ್ ನ್ನು ಸೀತಾರಾಮನ್ ಪ್ರಕಟಿಸಿದ್ದಾರೆ.