ನವದೆಹಲಿ: ವೆಂಟಿಲೇಟರ್ ನೆರವಿನ ಅಗತ್ಯವಿರುವ ಹಾಗೂ ಆರಂಭದಲ್ಲೇ ತುರ್ತು ಹಾಗೂ ತೀವ್ರ ನಿಗಾ ಘಟಕದ ಅಗತ್ಯವಿರುವ ಕೋವಿಡ್ ಸೋಂಕಿತರನ್ನು ಗುರುತಿಸುವಂತಹ 'ಕೋವಿಡ್ ಸಿವಿಯಾರಿಟಿ ಸ್ಕೋರ್' ಎಂಬ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಸರ್ಕಾರ ಹೇಳಿದೆ.
ಈ ತಂತ್ರಾಂಶ ತೀವ್ರ ನಿಗಾ ಘಟಕ(ಐಸಿಯು), ವೆಂಟಿಲೇಟರ್ ನೆರವಿನ ಅಗತ್ಯವಿರುವ ರೋಗಿಗಳನ್ನು ಗುರುತಿಸುವಂತಹ ಪ್ಯಾರಾಮೀಟರ್‌ಗಳನ್ನು ಒಳಗೊಂಡಿದೆ. ಇದರಿಂದ ಸಕಾಲದಲ್ಲಿ ರೋಗಿಗೆ ಚಿಕಿತ್ಸೆ ದೊರೆಯುವ ಜತೆಗೆ, ತುರ್ತುಪರಿಸ್ಥಿತಿಗೆ ಹೊರಳುವುದನ್ನು ತಪ್ಪಿಸುತ್ತದೆ.
ತೀವ್ರವಾದ ಆರೈಕೆಯ ನೆರವಿನ ಅಗತ್ಯವಿಲ್ಲದವರಿಗೆ, ಆಸ್ಪತ್ರೆಗೆ ಹೋಗುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಇದರಿಂದ ಅಗತ್ಯವಿರುವವರಿಗೆ ಹೆಚ್ಚಿನ ಹಾಸಿಗೆಗಳನ್ನು ಮೀಸಲಿಡಲು ಸಹಾಯವಾಗುತ್ತದೆ' ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಈ ತಂತ್ರಾಂಶವು ಪ್ರತಿಯೊಬ್ಬ ಕೋವಿಡ್ ರೋಗಿಗಿರುವ ಲಕ್ಷಣಗಳು, ಚಿಹ್ನೆಗಳು, ಪ್ರಮುಖ ಪ್ಯಾರಾಮೀಟರ್‌ಗಳು, ಪರೀಕ್ಷಾ ವರದಿಗಳು ಮತ್ತು ಕೊಮೊರ್ಬಿಡಿಟಿಗಳನ್ನು(ಇತರೆ ರೋಗಗಳು) ಅಳೆಯುತ್ತದೆ' ಎಂದು ಹೇಳಿಕೆ ತಿಳಿಸಿದೆ.
'ಈ ತಂತ್ರಜ್ಞಾನವನ್ನು ಕೋಲ್ಕತ್ತಾದ ಬರಾಕ್‌ಪೂರದಲ್ಲಿರುವ ಸರ್ಕಾರದ ಕೋವಿಡ್ ಆರೈಕೆ ಕೇಂದ್ರ ಸೇರಿದಂತೆ, ಉಪನಗರಗಳಲ್ಲಿರುವ ಮೂರು ಸಮುದಾಯ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಬಳಸಲಾಗುತ್ತಿದೆ' ಎಂದು ಸಚಿವಾಲಯ ತಿಳಿಸಿದೆ.