ದುಬೈ: ಅಬಿಧಾಬಿ ಸರ್ಕಾರವು ಪ್ರವಾಸಿಗರಿಗೆ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದೆ. ಅವಧಿ ಮುಗಿದ ವೀಸಾ ಮತ್ತು ರೆಸಿಡೆನ್ಸಿ ವೀಸಾ ಹೊಂದಿರುವವರು ಕೂಡ ಉಚಿತ ಲಸಿಕೆ ಪಡೆಯಲು ಅರ್ಹರು ಎಂದು ಅಬುಧಾಬಿ ಮಾಧ್ಯಮ ಕಚೇರಿ ಮಾಹಿತಿ ನೀಡಿದೆ.
ಈ ಹಿಂದೆ ಕೇವಲ ಯುಎಇ ಮತ್ತು ರೆಸಿಡೆನ್ಸಿ ವೀಸಾ ಹೊಂದಿದವರಿಗೆ ಮಾತ್ರ ಉಚಿತವಾಗಿ ಲಸಿಕೆ ನೀಡಲಾಗುತ್ತಿತ್ತು, ಈ ಹೊಸ ಬದಲಾವಣೆ ಅಬುಧಾಬಿಗೆ ಮಾತ್ರ ಸೀಮಿತವಾಗಿದೆಯೇ ಅಥವಾ ಇತರೆ ಐದು ಎಮಿರೆಟ್ಸ್‌ಗೆ ಅನ್ವಯಿಸುತ್ತದೆಯೇ ಎಂಬುದರ ಬಗ್ಗೆ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಅಬುಧಾಭಿ ಅನುಮೋದನೆ ನೀಡಿರುವ ವೀಸಾ ಮತ್ತು ಪಾಸ್‌ಪೋರ್ಟ್‌ಗಳನ್ನು ಹೊಂದಿರುವವರು ಉಚಿತ ಲಸಿಕೆಗೆ ಅರ್ಹರು ಎಂದು ಅಬುಧಾಬಿ ಆರೋಗ್ಯ ಸೇವೆಗಳ ಕಂಪನಿ ಹೇಳಿದೆ.
ಭಾರತ ಸೇರಿದಂತೆ ಮೂರು ದೇಶಗಳಿಗೆ ಜೂನ್ 23ರಿಂದ ವಿಮಾನ ಹಾರಾಟ ಆರಂಭಿಸುವುದಾಗಿ ದುಬೈ ಎಮಿರೇಟ್ಸ್ ಹೇಳಿದೆ. ಕೋವಿಡ್ ಹಿನ್ನಲೆಯಲ್ಲಿ ಹಾಕಿದ್ದ ವಿಮಾನ ಸಂಚಾರ ನಿರ್ಬಂಧವನ್ನು ದುಬೈ ರದ್ದುಗೊಳಿಸಿದೆ.
ಭಾರತ, ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾಕ್ಕೆ ಜೂನ್ 23ರಿಂದ ವಿಮಾನ ಹಾರಾಟ ನಡೆಸುವುದಾಗಿ ಘೋಷಣೆ ಮಾಡಲಾಗಿದೆ. ವಿಮಾನದಲ್ಲಿ ಸಂಚಾರ ನಡೆಸಬೇಕಾದರೆ ಯುಎಇ ಮಾನ್ಯತೆ ಪಡೆದ ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು.
ದುಬೈನ ನೈಸರ್ಗಿಕ ವಿಕೋಪ ಮತ್ತು ಬಿಕ್ಕಟ್ಟು ನಿರ್ವಹಣೆಯ ಉನ್ನತ ಮಟ್ಟದ ಸಮಿತಿ ವಿಮಾನ ಸಂಚಾರಕ್ಕೆ ಅವಕಾಶ ನೀಡಿದೆ. ವಿಮಾನ ಹಾರಾಟಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ದಕ್ಷಿಣ ಆಫ್ರಿಕಾ ಮತ್ತು ನೈಜೀರಿಯಾದ ಪ್ರಯಾಣಿಕರು ಕೋವಿಡ್ ಲಸಿಕೆ ಪಡೆದಿರಬೇಕು. ಸಂಚಾರ ಆರಂಭಿಸುವ 48 ಗಂಟೆಗಳ ಮೊದಲ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು.
ಭಾರತದಿಂದ ದುಬೈಗೆ ಬರುವ ಪ್ರಯಾಣಿಕರು ಆರ್‌ಟಿಪಿಸಿಆರ್ ವರದಿ ಬರುವ ತನಕ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಬೇಕು. 24 ಗಂಟೆಯಲ್ಲಿ ವರದಿ ಕೈ ಸೇರಲಿದೆ.