ನವದೆಹಲಿ, ಜೂನ್ 03: ವಾಟ್ಸಾಪ್ ಒತ್ತಾಯಪೂರ್ವಕವಾಗಿ ಬಳಕೆದಾರರ ಅನುಮತಿ ಪಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ದೂರಿದೆ.
ಕೇಂದ್ರದ ನೂತನ ನೀತಿಯಿಂದ ಬಳಕೆದಾರರ ಖಾಸಗಿತನಕ್ಕೆ ಧಕ್ಕೆಯಾಗಲಿದೆ ಎಂದು ವಾಟ್ಸಾಪ್ ಹೇಳಿದ್ದು, ಕೇಂದ್ರ ಸರ್ಕಾರದ ಆದೇಶದ ಅನ್ವಯ ದೇಶದಲ್ಲಿನ ವಾಟ್ಸಾಪ್ ಕುಂದುಕೊರತೆ ಮತ್ತು ಸಂಪರ್ಕ, ಕಾರ್ಯಾಚರಣೆ ಅಧಿಕಾರಿಗಳ ವಿವರವನ್ನು ಸಲ್ಲಿಸಿತ್ತು.
ಈ ಕುರಿತು ದೆಹಲಿ ಹೈಕೋರ್ಟ್‌ನಲ್ಲಿ ಕೇಂದ್ರ ಹೊಸ ಅಫಿಡವಿಟ್ ಒಂದನ್ನು ಸಲ್ಲಿಸಿದ್ದು, ಹೊಸ ಖಾಸಗಿತನ ನೀತಿಗೆ ಬಳಕೆದಾರರ ಒಪ್ಪಿಗೆ ಪಡೆದುಕೊಳ್ಳಲು ವಾಟ್ಸಾಪ್ ಟ್ರಿಕ್ಸ್ ಬಳಸುತ್ತಿದೆ ಎಂದು ಹೇಳಿದೆ.
ಕೇಂದ್ರ ಮತ್ತು ವಾಟ್ಸಾಪ್ ನಡುವಣ ಜಟಾಪಟಿ ಮೇ 26ರಿಂದ ಆರಂಭವಾಗಿದ್ದು, ಕೇಂದ್ರ ಸರ್ಕಾರದ ನೂತನ ಸಾಮಾಜಿಕ ತಾಣ ನೀತಿಗೆ ವಿರೋಧ ವ್ಯಕ್ತಪಡಿಸಿ, ವಾಟ್ಸಾಪ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಹೊಸ ನಿಯಮದ ಪ್ರಕಾರ ತನ್ನ ವೇದಿಕೆಯಲ್ಲಿ ಸಂದೇಶ ಕಳುಹಿಸಿದ ಮೂಲಗಳ ಜಾಡು ಹಿಡಿಯಬೇಕಾಗುತ್ತದೆ. ಇದು ಬಳಕೆದಾರರ ಖಾಸಗಿತನಕ್ಕೆ ಹಾನಿ ಮಾಡಲಿದೆ ಎಂದು ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್ ತನ್ನ ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಿದೆ.
'ಚಾಟ್‌ಗಳ ಜಾಡು ಪತ್ತೆ ಮಾಡಿ ಎಂದು ಸೂಚಿಸುವುದು ವಾಟ್ಸಾಪ್‌ನಲ್ಲಿ ಕಳುಹಿಸುವ ಪ್ರತಿ ಸಂದೇಶದ ಬೆರಳಚ್ಚಿನ ಗುರುತು ಸಂಗ್ರಹಿಸಿ ಇರಿಸಿ ಎಂದು ಹೇಳುವಂತಾಗಿದೆ. ಇದು ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ ನಿಯಮವನ್ನು ಉಲ್ಲಂಘಿಸಲಿದೆ ಹಾಗೂ ಜನರ ಖಾಸಗಿತನದ ಮೂಲಭೂತ ಹಕ್ಕನ್ನು ಕಡೆಗಣಿಸಿದಂತಾಗಲಿದೆ' ಎಂದು ವಾಟ್ಸಾಪ್ ಹೇಳಿಕೆ ನೀಡಿದೆ.
'ನಮ್ಮ ಬಳಕೆದಾರರ ಖಾಸಗಿತನವನ್ನು ಕಸಿದುಕೊಳ್ಳುವುದನ್ನು ವಿರೋಧಿಸಲು ಅಗತ್ಯವಿರುವ ಜಗತ್ತಿನ ನಾಗರಿಕ ಸಮಾಜ ಹಾಗೂ ಪರಿಣತರನ್ನು ನಾವು ನಿರಂತರವಾಗಿ ಸಂಪರ್ಕಿಸುತ್ತಿರುತ್ತೇವೆ.
ಇನ್ನೊಂದೆಡೆ ನಾವು ಜನರನ್ನು ಸುರಕ್ಷಿತವಾಗಿಡುವ ಜತೆಯಲ್ಲಿ ನಮಗೆ ಲಭ್ಯವಿರುವ ಕಾನೂನಾತ್ಮಕ ಮನವಿಗಳಿಗೆ ಸ್ಪಂದಿಸುವ ಪರಿಹಾರಾತ್ಮಕ ಕಾರ್ಯಗಳನ್ನು ಸಹ ಭಾರತ ಸರ್ಕಾರದೊಂದಿಗೆ ಮುಂದುವರಿಸುತ್ತಿದ್ದೇವೆ' ಎಂದು ಅದು ತಿಳಿಸಿದೆ.