ನವದೆಹಲಿ: ಕೊರೊನಾ ವೈರಸ್‌ನ ರೂಪಾಂತರಿತ ತಳಿ ಡೆಲ್ಟಾ ಪ್ಲಸ್ ಹರಡದಂತೆ ತಡೆಯಲು ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿರುವ ಜಿಲ್ಲೆಗಳಲ್ಲಿ ಅದರ ಪ್ರಸರಣ ತಡೆಗೆ ಕ್ರಮ ಕೈಗೊಳ್ಳುವಂತೆ ಹಾಗೂ ಮಾದರಿಗಳನ್ನು ಅಧ್ಯಯನಕ್ಕಾಗಿ ಕಳುಹಿಸಿಕೊಡುವಂತೆ ಆರೋಗ್ಯ ಸಚಿವಾಲಯ ಸೂಚಿಸಿದೆ.
ಡೆಲ್ಟಾ ಪ್ಲಸ್ ರೂಪಾಂತರದ ಸಂಭಾವ್ಯ ಅಪಾಯಗಳು ಮತ್ತು ಅದರ ತಡೆಗೆ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತ್, ಹರಿಯಾಣ, ಜಮ್ಮು-ಕಾಶ್ಮೀರ, ಪಂಜಾಬ್, ತಮಿಳುನಾಡು ಮತ್ತು ರಾಜಸ್ಥಾನ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
'ಪ್ರಸರಣ ತಡೆಗೆ ಹೆಚ್ಚು ಆದ್ಯತೆ ನೀಡುವುದರ ಜತೆಗೆ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಕರಣಗಳು ಪತ್ತೆಯಾದ ಜಿಲ್ಲೆಗಳಲ್ಲಿ ತಕ್ಷಣವೇ ಕಂಟೈನ್‌ಮೆಂಟ್ ವಲಯಗಳನ್ನು ಗುರುತಿಸುವುದು, ಜನಸಂದಣಿ ಸೇರದಂತೆ ತಡೆಯುವುದು, ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವುದು, ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡುವುದು ಮತ್ತು ಲಸಿಕೆ ನೀಡಿಕೆಯನ್ನು ಆದ್ಯತೆಯನ್ನಾಗಿ ಪರಿಗಣಿಸಲು ವಿನಂತಿಸಲಾಗಿದೆ' ಎಂದು ಭೂಷಣ್ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಹಾರಾಷ್ಟ್ರ, ಕೇರಳ ಮತ್ತು ಮಧ್ಯ ಪ್ರದೇಶಗಳು ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿರುವುದಾಗಿ ಕೆಲವು ದಿನಗಳ ಹಿಂದೆ ತಿಳಿಸಿದ್ದವು. ಮಹಾರಾಷ್ಟ್ರದ ಜಲ್‌ಗಾಂವ್ ಮತ್ತು ರತ್ನಗಿರಿಯಲ್ಲಿ, ಕೇರಳದ ಪಾಲಕ್ಕಾಡ್ ಮತ್ತು ಪತ್ತನಂತಿಟ್ಟದಲ್ಲಿ, ಮಧ್ಯ ಪ್ರದೇಶದ ಭೊಪಾಲ್ ಮತ್ತು ಶಿವಪುರಿಯಲ್ಲಿ ಪ್ರಕರಣಗಳು ದೃಢಪಟ್ಟಿದ್ದವು.