ಬದಿಯಡ್ಕ: `ಕ್ಯಾಂಪ್ಕೋ ಚಿತ್ತ ಸದಸ್ಯರ ಆರೋಗ್ಯದತ್ತ' ಎಂಬ ಧ್ಯೇಯದೊಂದಿಗೆ ಕ್ಯಾಂಪ್ಕೋ ವತಿಯಿಂದ ಇತ್ತೀಚೆಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದ ಹಿರಿಯ ಕೃಷಿಕ ಜಯಪ್ರಕಾಶ ಪಜಿಲ ಅವರಿಗೆ ಧನಸಹಾಯವನ್ನು ನೀಡಲಾಯಿತು. ಕ್ಯಾಂಪ್ಕೋ ಸದಸ್ಯರ ಅಭಿವೃದ್ಧಿ ನಿಧಿಯಿಂದ ರೂ.1,87,000 ರೂಪಾಯಿ ಚೆಕ್‍ನ್ನು ಸಂಸ್ಥೆಯ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ಅವರು ಫಲಾನುಭವಿಯವರ ಮನೆಗೆ ತೆರಳಿ ಹಸ್ತಾಂತರಿಸಿ ಮಾತನಾಡಿದರು. ಹಿರಿಯರ ಕಾಲದಿಂದಲೇ ಕ್ಯಾಂಪ್ಕೋದೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡು, ನಿರಂತರವಾಗಿ ವ್ಯಾಪಾರ
ವಹಿವಾಟುಗಳನ್ನು ನಡೆಸಿಕೊಂಡು ಬಂದಿರುವ ಕಾರಣ ಇವರಿಗೆ ಉತ್ತಮ ಮೊತ್ತವು ಲಭಿಸಿದೆ. ಸದಸ್ಯರ ಆರೋಗ್ಯದ ಕುರಿತು ಕ್ಯಾಂಪ್ಕೋ ಸದಾ ಜಾಗೃತವಾಗಿದ್ದುಕೊಂಡಿದೆ ಎಂಬುದು ಇದರಿಂದ ವೇದ್ಯವಾಗುತ್ತದೆ ಎಂದರು. ಚೆಕ್ ಸ್ವೀಕರಿಸಿ ಜಯಪ್ರಕಾಶ ಪಜಿಲ ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡು ಸಂಸ್ಥೆಗೆ ಕೃತಜ್ಞತೆಯನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕ ಪದ್ಮರಾಜ ಪಟ್ಟಾಜೆ, ವಲಯ ಪ್ರಬಂಧಕ ಪ್ರದೀಪ್ ಕುಮಾರ್, ಬದಿಯಡ್ಕ ಶಾಖೆಯ ಪ್ರಬಂಧಕ ದಿನೇಶ್, ಸಿಬ್ಬಂದಿ ಸುರೇಶ್ ಕುಮಾರ್ ಶೆಟ್ಟಿ ಜೊತೆಗಿದ್ದರು.
ಅಭಿಮತ:
1973ರಿಂದ ಬದಿಯಡ್ಕದಲ್ಲಿ ಕ್ಯಾಂಪ್ಕೋ ಶಾಖೆ ಆರಂಭವಾದಂದಿನಿಂದಲೇ ತಂದೆಯವರೊಂದಿಗೆ ಶಾಖೆಗೆ ತೆರಳಿದ ನೆನಪು ಇದೆ. ಅವರ ನಡೆಯನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ಇತರ ದಲ್ಲಾಳಿಗಳು ಕೃಷಿ ಉತ್ಪನ್ನಗಳಿಗೆ ಕ್ಯಾಂಪ್ಕೋದಿಂದ ಕೊಂಚ ಅಧಿಕ ದರವನ್ನು ನೀಡುತ್ತೇನೆ ಎಂದು ಮುಂದೆ ಬಂದರೂ ಅದಕ್ಕೆ ಕಿವಿಗೊಡದೆ ನಿರಂತರವಾಗಿ ಕ್ಯಾಂಪ್ಕೋದೊಂದಿಗೆ ವಹಿವಾಟುಗಳನ್ನು ನಡೆಸಿರುವುದರ ಫಲವಾಗಿ ಕಷ್ಟಕಾಲಕ್ಕೆ ಇಂದು ಉತ್ತಮ ಮೊತ್ತವು ಲಭಿಸಿದೆ. ಸದಸ್ಯರ ಆರೋಗ್ಯದ ಬಗ್ಗೆ ಇರುವ ಉತ್ತಮ ಕಾಳಜಿಯನ್ನು ಸಂಸ್ಥೆಯು ಇನ್ನೂ ಮುಂದುವರಿಸಿಕೊಂಡು ಹೋಗಬೇಕು. ಎಲ್ಲಾ ಸದಸ್ಯರೂ ಸಂಸ್ಥೆಯೊಂದಿಗೆ ಕೈಜೋಡಿಸಿದರೆ ಸಂಸ್ಥೆಯು ನಮ್ಮನ್ನು ಕೈಹಿಡಿದು ಮೇಲೆತ್ತುವುದೆಂಬ ವಿಶ್ವಾಸವಿದೆ.
- ಜಯಪ್ರಕಾಶ ಪಜಿಲ, ಕೃಷಿಕರು.