ತಿರುವನಂತಪುರ: ಮಹಿಳೆಯರ ಮೇಲಿನ ದೌರ್ಜನ್ಯವನ್ನು ತೀವ್ರವಾಗಿ ಎದುರಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಉಂಟಾದ ಸಾವುಗಳು ರಾಜ್ಯಕ್ಕಾದ ಅವಮಾನ ಎಂದು ಸಿಎಂ ಹೇಳಿದ್ದಾರೆ. ವರದಕ್ಷಿಣೆ ಕಿರುಕುಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಪೋಲೀಸರಿಗೆ ನಿರ್ದೇಶನ ನೀಡಿದರು.
ಹೊಸ ಪೋಲೀಸ್ ಕಟ್ಟಡ ನಿರ್ಮಾಣ ಶಂಕುಸ್ಥಾಪನೆ ಆನ್‍ಲೈನ್ ಮೂಲಕ ನೆರವೇರಿಸಿ ಮುಖ್ಯಮಂತ್ರಿ ಮಾತನಾಡುತ್ತಿದ್ದರು. ಇತ್ತೀಚೆಗಿನ ಕೆಲವು ವರ್ಷಗಳಿಂದ ಸ್ತ್ರೀಯರ ಮೇಲಿನ ದೌರ್ಜನ್ಯ, ಅಪಹರಣ, ಆತ್ಮಹತ್ಯೆಗಳಂತಹ ಗಂಭೀರ ವಿಚಾರಗಳು ನಮ್ಮನ್ನು ಕಳವಳಗೊಳಿಸುತ್ತಿದೆ ಎಂದರು. ಕೇರಳ ಈ ರೀತಿ ಬದಲಾಗಬೇಕಾದ ರಾಜ್ಯವಲ್ಲ. ಯಾವುದೇ ತೊಂದರೆಗಳಿದ್ದಲ್ಲಿ ನೆರವಿಗಾಗಿ ಮಹಿಳೆಯರಿಗೆ ಸಹಾಯ ವಾಣಿ ಸಂಖ್ಯೆಯನ್ನು ನೀಡಿದೆ ಎಂದರು.
ಮಹಿಳಾ ಪೋಲೀಸ್ ಅಧಿಕಾರಿಗೆ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಇದಲ್ಲದೆ, ಸಂಕಷ್ಟದಲ್ಲಿರುವ ಮಹಿಳೆಯರಿಗಾಗಿ ರಾಜ್ಯ ಪೋಲೀಸ್ ಮುಖ್ಯಸ್ಥರ ಕಚೇರಿಯಲ್ಲಿ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ ಎಂದರು.
ವರದಕ್ಷಿಣೆ ಪ್ರಕರಣಗಳನ್ನು ನಿರ್ವಹಿಸಲು ವಿಶೇಷ ನ್ಯಾಯಾಲಯಗಳಿಗೆ ಅವಕಾಶ ನೀಡುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ. ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ವಾರ್ಡ್ ಮಟ್ಟದ ವ್ಯವಸ್ಥೆ ಮತ್ತು ಜಾಗೃತಿ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು ಎಂದು ಸಿಎಂ ಹೇಳಿದರು.