ನವದೆಹಲಿ: ಸಿಎ ಪರೀಕ್ಷೆಗಳನ್ನು ಬರೆಯಬೇಕಿರುವ ಅಭ್ಯರ್ಥಿಗಳು ಅಥವಾ ಅವರ ಕುಟುಂಬದ ಸದಸ್ಯರು ಕೋವಿಡ್ 19 ಸಾಂಕ್ರಾಮಿಕದಿಂದ ಬಳಲುತ್ತಿದ್ದರೆ ಅಂಥವರಿಗೆ ಪರೀಕ್ಷೆಯಿಂದ ಹೊರಗುಳಿಯಲು ಸುಪ್ರೀಂಕೋರ್ಟ್ ಬುಧವಾರ ಅನುಮತಿ ನೀಡಿದೆ.
ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ದಿನೇಶ್ ಮಾಹೇಶ್ವರಿ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದೆ.
ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಪರೀಕ್ಷೆ ನಡೆಸಲು ಕೈಗೊಂಡಿರುವ ಕ್ರಮಗಳು ಸಾಕಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗಮನಿಸಿದ್ದು, ಕುಟುಂಬದ ಸದಸ್ಯರಿಗೆ ಕೋವಿಡ್ 19 ಇರುವುದಾಗಿ ನೋಂದಾಯಿತ ವೈದ್ಯರು ಪ್ರಮಾಣ ಪತ್ರ ನೀಡಿದ್ದರೆ ಅಂತಹ ಅಭ್ಯರ್ಥಿಗಳು ಆರ್‌ಟಿ-ಪಿಸಿಆರ್ ಪರೀಕ್ಷೆ ವರದಿ ಹಾಜರುಪಡಿಸಬೇಕಾದ ಅಗತ್ಯವಿಲ್ಲ ಎಂದು ಪೀಠ ಸ್ಪಷ್ಟವಾಗಿ ಹೇಳಿದೆ.
'ಕುಟುಂಬ ಸದಸ್ಯರು ಅಥವಾ ಅಭ್ಯರ್ಥಿ ಕೋವಿಡ್ 19 ಸಾಂಕ್ರಾಮಿಕದಿಂದ ಬಳಲುತ್ತಿದ್ದರೆ ಆ ಅಭ್ಯರ್ಥಿ ಪರೀಕ್ಷೆಗೆ ಹಾಜರಾಗಲು ಅಥವಾ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹ ಅಭ್ಯರ್ಥಿ ಪರೀಕ್ಷೆಯಿಂದ ಹೊರಗುಳಿಯಲು ಅವಕಾಶವಿದೆ. ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿದ ಕಾರಣಕ್ಕೆ ಪರೀಕ್ಷೆಗೆ ಹಾಜರಾದಂತೆ ಆಗುವುದಿಲ್ಲ. ಅಂತಹ ಅಭ್ಯರ್ಥಿಗೆ ಹಳೆಯ ಮತ್ತು ಹೊಸ ಪಠ್ಯಕ್ರಮದ ಮುಂದಿನ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗುವುದು' ಎಂದು ಪೀಠ ತಿಳಿಸಿದೆ.
ಆರ್‌ಟಿ-ಪಿಸಿಆರ್ ವರದಿಯಲ್ಲಿ ನೆಗೆಟಿವ್ ಇದ್ದರೂ ಕೆಲವರು ಕೋವಿಡ್ 19 ಲಕ್ಷಣಗಳಿಂದ ಬಳಲುತ್ತಿರುವ ಅಂಶಗಳನ್ನು ಗಮನಿಸಿದ ಸುಪ್ರೀಂ, 'ಆರ್‌ಟಿ-ಪಿಸಿಆರ್ ವರದಿಯೇ ಎಲ್ಲದಕ್ಕೂ ಮಾನದಂಡವಲ್ಲ, ಕೋವಿಡ್ ಅಥವಾ ಕೋವಿಡ್ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ನುರಿತ, ಅನುಭವಿ ವೈದ್ಯರು ಪ್ರಮಾಣ ಪತ್ರ ನೀಡಬಹುದು' ಎಂದು ಇದೇ ಸಂದರ್ಭದಲ್ಲಿ ಹೇಳಿದೆ.
ಅರ್ಜಿದಾರರೊಬ್ಬರ ಪರ ಹಾಜರಾಗಿದ್ದ ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ, ಆರ್‌ಟಿ-ಪಿಸಿಆರ್ ವರದಿಯ ವಿಷಯ ಉಲ್ಲೇಖಿಸಿ, 'ಪರೀಕ್ಷೆಗೆ ಹಾಜರಾಗಲು ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣಿಸಬೇಕಾದ ಅಭ್ಯರ್ಥಿಗಳು ಈ ಹಿಂದೆ ಕೋವಿಡ್ 19ನಿಂದ ಬಳಲುತ್ತಿರಬಹುದು, ಅಂತಹ ಅಭ್ಯರ್ಥಿಗಳಲ್ಲಿ ಕೆಲವರು ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ' ಎಂದು ಸುಪ್ರೀಂಕೋರ್ಟ್ ಗಮನಕ್ಕೆ ತಂದರು.
ಅಭ್ಯರ್ಥಿಗಳಿಗೆ ಪರೀಕ್ಷೆಯಿಂದ ಹೊರಗುಳಿಯುವ ಆಯ್ಕೆ, ಪರೀಕ್ಷೆ ಮುಂದೂಡುವುದು ಮತ್ತು ಈ ವರ್ಷ ಪರೀಕ್ಷಾ ಕೇಂದ್ರಗಳ ಸಂಖ್ಯೆಯಲ್ಲಿ ಹೆಚ್ಚಳ ಸೇರಿ ವಿವಿಧ ಪರಿಹಾರ ಕ್ರಮಗಳನ್ನು ಕೋರಿ ಅಭ್ಯರ್ಥಿಗಳ ಒಂದು ಗುಂಪು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.