ಹದಿನೆಂಟು ವರ್ಷ ವಯಸ್ಸು ಮೀರಿದ ಎಲ್ಲ ಪ್ರಜೆಗಳಿಗೂ ಕೋವಿಡ್ ಲಸಿಕೆಯನ್ನು ಕೇಂದ್ರ ಸರ್ಕಾರವೇ ಉಚಿತವಾಗಿ ಒದಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಘೋಷಿಸಿದ್ದಾರೆ. ತಡವಾಗಿಯಾದರೂ ಇಂತಹುದೊಂದು ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ. ಕೋವಿಡ್ ಲಸಿಕೆಯ ಬದಲಾದ ಈ ನೀತಿಯು ಈ ತಿಂಗಳ 21ರಿಂದ ಜಾರಿಗೆ ಬರಲಿದೆ. 18-44ರ ವಯೋಮಾನ ದವರಿಗೆ ಲಸಿಕೆ ಹಾಕಿಸುವ ಹೊಣೆಯನ್ನು ರಾಜ್ಯ ಸರ್ಕಾರಗಳ ಮೇಲೆ ಹೊರಿಸಿ, ಲಸಿಕೆಗೆ ತರಹೇವಾರಿ ದರಗಳನ್ನು ಕೇಂದ್ರವು ನಿಗದಿಪಡಿಸಿತ್ತು. ಲಸಿಕೆ ನೀತಿಯ ಬಗ್ಗೆ ಸೃಷ್ಟಿಯಾಗಿದ್ದ ಗೊಂದಲವು ಈಗ ಕೇಂದ್ರ ಸರ್ಕಾರವು ಪ್ರಕಟಿಸಿರುವ ಲಸಿಕೆ ನೀತಿ ಜಾರಿಗೆ ಬಂದರೆ ನಿವಾರಣೆ ಆಗಬಹುದು ಎಂಬ ನಿರೀಕ್ಷೆ ಮೂಡಿದೆ. ಕೇಂದ್ರ ಸರ್ಕಾರವೇ ಲಸಿಕೆಯನ್ನು ಖರೀದಿಸಿ ರಾಜ್ಯ ಸರ್ಕಾರಗಳಿಗೆ ಒದಗಿಸುವ, ಏಕರೂಪದ ಲಸಿಕೆ ನೀತಿಯನ್ನು ಜಾರಿಗೆ ತರಲು ಮುಂದಾಗಿರುವುದು ಗುಣಾತ್ಮಕ ಬದಲಾವಣೆ.
ಈಗ ಜಾರಿಯಲ್ಲಿರುವ ನೀತಿಯಂತೆ, ಲಸಿಕೆ ತಯಾರಕರು ಶೇಕಡ 50ರಷ್ಟು ಲಸಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ಪೂರೈಸಿ, ಉಳಿದದ್ದನ್ನು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಲಯಕ್ಕೆ ಸಮನಾಗಿ ಒದಗಿಸಬೇಕಿತ್ತು. ತಾವು ಪಡೆಯುವ ಲಸಿಕೆಗಳಿಗೆ ರಾಜ್ಯ ಸರ್ಕಾರಗಳೇ ಹಣ ಪಾವತಿಸಬೇಕಿತ್ತು. ಹಲವು ರಾಜ್ಯ ಸರ್ಕಾರಗಳು ವಿದೇಶಿ ಕಂಪನಿಗಳಿಂದ ಲಸಿಕೆಗಳ ನೇರ ಖರೀದಿಗೂ ಯತ್ನಿಸಿದ್ದವು. ಲಸಿಕೆಗಳು ಲಭ್ಯವೇ ಇಲ್ಲದಿದ್ದ ಸಂದರ್ಭದಲ್ಲಿ 18-44ರ ವಯೋಮಾನದವರಿಗೆ ಲಸಿಕೆ ಹಾಕಿಸುವ ಹೊಣೆಯನ್ನು ರಾಜ್ಯ ಸರ್ಕಾರಗಳ ಮೇಲೆ ಹೊರಿಸಿದ್ದು ಹಲವು ಗೊಂದಲ ಮತ್ತು ತಾರತಮ್ಯಗಳಿಗೆ ಕಾರಣವಾಗಿತ್ತು. ರಾಜ್ಯಗಳಿಗೆ ಲಸಿಕೆ ಪೂರೈಕೆಯಲ್ಲಿ ವ್ಯತ್ಯಾಸವಾಗಿತ್ತು. ಹೀಗಾಗಿ ಕೋವಿಡ್ ಪ್ರಕರಣಗಳು ಹೆಚ್ಚು ಇದ್ದ ರಾಜ್ಯಗಳಲ್ಲಿ ಸಾವಿನ ಸಂಖ್ಯೆಯು ತೀವ್ರವಾಗಿ ಏರಿಕೆ ಕಂಡಿತ್ತು. ದೇಶದಾದ್ಯಂತ 7.75 ಕೋಟಿ ಡೋಸ್ ಲಸಿಕೆಗಳನ್ನು ಜನರಿಗೆ ಏಪ್ರಿಲ್‌ನಲ್ಲಿ ಹಾಕಿಸುವುದು ಸಾಧ್ಯವಾಗಿದ್ದರೂ ಮೇ ತಿಂಗಳಲ್ಲಿ ಲಸಿಕೆ ಹಾಕಿಸುವಿಕೆಯು 6 ಕೋಟಿ ಡೋಸ್‍ಗೆ ಕುಸಿದಿತ್ತು. ಇದಕ್ಕೆ, ಕೇಂದ್ರ ಸರ್ಕಾರದ ಈ ಗೊಂದಲದ ನೀತಿಯೇ ಕಾರಣವಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ಜನರಿಗೆ ಲಸಿಕೆ ಹಾಕಿಸಲಾಗಿದೆ ಎಂದು ಪ್ರಧಾನಿಯವರು ಹೇಳುತ್ತಿದ್ದರೂ, ದೇಶದ ಜನಸಂಖ್ಯೆಯಲ್ಲಿ ಈವರೆಗೆ ಶೇ 3ಕ್ಕಿಂತ ತುಸು ಹೆಚ್ಚು ಜನರಿಗೆ ಮಾತ್ರ ಪೂರ್ಣ ಲಸಿಕೆ ಹಾಕಲು ಸಾಧ್ಯವಾಗಿದೆ ಎನ್ನುವುದು ವಾಸ್ತವ. ಕೇಂದ್ರ ಸರ್ಕಾರದ ಈ ಎಡಬಿಡಂಗಿ ನೀತಿಯ ಕುರಿತು ಸಾರ್ವಜನಿಕರು ಮತ್ತು ಮಾಧ್ಯಮಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಕೂಡ ಕಟುವಾಗಿ ಟೀಕಿಸಿದ್ದು, ಹಲವು ಕಠಿಣ ಪ್ರಶ್ನೆಗಳನ್ನು ಕೇಳಿತ್ತು. ವೈದ್ಯಕೀಯ ಆಮ್ಲಜನಕದ ಕೊರತೆ ಮತ್ತು ಹಂಚಿಕೆಯಲ್ಲಿನ ತಾರತಮ್ಯದ ವಿಚಾರದಲ್ಲಿಯೂ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿತ್ತು. ಲಸಿಕೆ ನೀತಿಗೆ ಸಂಬಂಧಿಸಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಾಲಯವು ಲಸಿಕೆ ನೀತಿಯು 'ಅತಾರ್ಕಿಕ' ಎಂದಿತ್ತು. ಹಲವು ಕಟು ಪ್ರಶ್ನೆಗಳಿಗೆ ಕೇಂದ್ರ ಸರ್ಕಾರದಿಂದ ನೇರ ಉತ್ತರವನ್ನೂ ಬಯಸಿತ್ತು. ಹಾಗಾಗಿಯೇ ಪ್ರಧಾನಿ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿ, 18 ವರ್ಷ ದಾಟಿದ ಎಲ್ಲರಿಗೂ ಉಚಿತ ಲಸಿಕೆ ನೀಡುವುದಾಗಿ ಘೋಷಿಸಬೇಕಾಯಿತು.
ಈ ಹೊಸ ಲಸಿಕೆ ನೀತಿಯನ್ನು ಕಾಲಬದ್ಧವಾಗಿ ಮತ್ತು ಪರಿಣಾಮಕಾರಿಯಾಗಿ ಕೇಂದ್ರವು ಹೇಗೆ ಜಾರಿಗೆ ತರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ದೇಶದ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಲಸಿಕೆಯ ತಯಾರಿಕೆ ಮತ್ತು ವಿತರಣೆ ನಡೆಯುವ ಬಗ್ಗೆ ಈಗಾಗಲೇ ಹಲವು ಪ್ರಶ್ನೆಗಳೆದ್ದಿವೆ. ಜುಲೈ ತಿಂಗಳಿಂದ ಲಸಿಕೆಯ ತಯಾರಿಕೆ ಮತ್ತು ಪೂರೈಕೆಯನ್ನು ಹೆಚ್ಚಿಸುವುದಾಗಿ ಭಾರತದ ಎರಡೂ ಲಸಿಕೆ ತಯಾರಿಕಾ ಕಂಪನಿಗಳು ಪ್ರಕಟಿಸಿವೆ. ಈ ಮಧ್ಯೆ, ಇನ್ನೂ ಕೆಲವು ಹೊಸ ಕಂಪನಿಗಳು ದೇಶೀಯವಾಗಿ ಮತ್ತು ಕೆಲವು ವಿದೇಶಿ ಲಸಿಕೆಗಳನ್ನು ತಯಾರಿಸುವ ಪರವಾನಗಿ ಪಡೆದಿರುವ ಸುದ್ದಿಯೂ ಬಂದಿದೆ. ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಲಸಿಕೆ ವಿತರಣೆ ಯೋಜನೆಯ ಜಾರಿಯಲ್ಲಿ ಹಿನ್ನಡೆ ಅನುಭವಿಸಿರುವುದಕ್ಕೆ ರಾಜ್ಯ ಸರ್ಕಾರಗಳನ್ನು ಮತ್ತು ಬಿಜೆಪಿಗೂ ಹಿಂದೆ ಕೇಂದ್ರವನ್ನು ಆಳಿರುವ ಇತರ ಪಕ್ಷಗಳ ಸರ್ಕಾರಗಳನ್ನು ದೂಷಿಸಿರುವುದು ದುರದೃಷ್ಟಕರ. ದೇಶದ ಎಲ್ಲ ಪ್ರಜೆಗಳಿಗೂ ಉಚಿತ ಲಸಿಕೆ ಒದಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಆರಂಭದಲ್ಲೇ ವ್ಯವಸ್ಥಿತ ವಾಗಿ ಕೈಗೊಂಡಿದ್ದರೆ ಭಾರಿ ಸಂಖ್ಯೆಯ ಸಾವು ನೋವುಗಳನ್ನು ತಡೆಯಬಹುದಿತ್ತು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಲಸಿಕೆ ನೀತಿಯನ್ನು ಸರಿಪಡಿಸಲು ಕಠಿಣ ಶಬ್ದಗಳಲ್ಲಿ ನಿರ್ದೇಶಿಸಬೇಕಾದ ಪರಿಸ್ಥಿತಿಯೂ ಉಂಟಾಗುತ್ತಿರಲಿಲ್ಲ. ಅದೇನೇ ಇರಲಿ, ಈಗ ಪ್ರಕಟಿಸಿರುವ ಉಚಿತ ಲಸಿಕೆ ವಿತರಣೆಯ ಹೊಸ ನೀತಿಯನ್ನು ಸಮರ್ಪಕವಾಗಿ ಮತ್ತು ಶೀಘ್ರವಾಗಿ ಜಾರಿಗೆ ತರಬೇಕಿದೆ. ಕಾಲಮಿತಿಯಲ್ಲಿ ಗರಿಷ್ಠ ಸಂಖ್ಯೆಯ ಜನರಿಗೆ ಲಸಿಕೆಯ ಎರಡೂ ಡೋಸ್‍ಗಳನ್ನು ಹಾಕಿಸಲು ಕೇಂದ್ರ ಸರ್ಕಾರ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ. ಕೋವಿಡ್ ಮೂರನೆಯ ಅಲೆಯು ಬರುವ ಹೊತ್ತಲ್ಲಿ ಬಹುಸಂಖ್ಯೆಯ ಜನರು ಲಸಿಕೆ ಹಾಕಿಸಿಕೊಂಡು ರೋಗಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜತೆಗೂಡಿ ಕೆಲಸ ಮಾಡಬೇಕಿದೆ.