ಉಪ್ಪಳ: ಕೊಂಡೆವೂರಿನ "ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠ"ದ ಆವರಣದಲ್ಲಿ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಗಿಡ ನೆಟ್ಟು ವೃಕ್ಷಾರೋಪಣ ಮಾಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.
ಈ ಸಂದರ್ಭ ಶ್ರೀಗಳವರು ತಮ್ಮ ಸಂದೇಶದಲ್ಲಿ ಪರಿಸರ ಕಲುಷಿತವಾಗಿ ನಮ್ಮ ಉಸಿರಾದ ಆಮ್ಲಜನಕಕ್ಕಾಗಿ ಇಂದು ಒದ್ದಾಡುವ ಸಂಕಷ್ಟವನ್ನು ಕೊರೊನಾ ಮಹಾಮಾರಿಯ ಭೀಕರತೆಯನ್ನು ನೋಡಿಯಾದರೂ ನಮಗೆ ಅರಿವಾಗಿರಬೇಕು. ಆಮ್ಲಜನಕವನ್ನು ಹೊರಸೂಸುವ ಪರಿಸರದ ಹಸಿರು ಸಂಪತ್ತನ್ನು ಮರೆತ ನಾವು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಶಾಲಾವಿದ್ಯಾರ್ಥಿಗಳು "ನಾ ಬೆಳೆದಂತೆ ನಾನು ನನ್ನ ಮರ" ಬೆಳೆಸಿ ವಿಷಮುಕ್ತ ಹಸಿರು ಪರಿಸರ, ತನ್ಮೂಲಕ ಆರೋಗ್ಯವಂತ ಪರಿಸರ ನಿರ್ಮಾಣ ಮಾಡುವ ಸಂಕಲ್ಪಗೈಯೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಮಿತಿ ಅಧ್ಯಕ್ಷ ರಾಮಚಂದ್ರ ಚೆರುಗೋಳಿ, ಕಾರ್ಯದರ್ಶಿ ಜಯಶೀಲಾ ಟೀಚರ್, ಉಪಾಧ್ಯಕ್ಷರುಗಳಾದ ಜಯಲಕ್ಷ್ಮೀ ಕಾರಂತ್, ಸುಧಾಕರ ಮಾಸ್ತರ್ ಮತ್ತು ಜಗದ್ಗುರು ಶ್ರೀ ನಿತ್ಯಾನಂದ ಚಾರಿಟೇಬಲ್ ಟ್ರಸ್ಟ್‍ನ ವಿಶ್ವಸ್ಥ ಮೋಹನದಾಸ ಕೊಂಡೆವೂರು ಇವರುಗಳು ಉಪಸ್ಥಿತರಿದ್ದರು.