ತಿರುವನಂತಪುರ: ಶಾಲಾ ವಿದ್ಯಾರ್ಥಿಗಳ ಶಿಕ್ಷಣಮೊಟಕುಗೊಳ್ಳದಿರಲಿ ಎಂದು ಪ್ರಾರಂಭಿಸಿದ ಆನ್ ಲೈನ್ ತರಗತಿಗಳನ್ನು ಬುಡಮೇಲುಗೊಳಿಸುವ ಸಮಾಜ ಘಾತುಕ ವ್ಯವಸ್ಥೆ ವಕ್ಕರಿಸಿರುವುದು ಆತಂಕಕ್ಕೆಡೆಯಾಗಿದೆ. ಆನ್‍ಲೈನ್ ತರಗತಿಗಳಲ್ಲಿ ವಂಚಕರ ಒಳನುಸುಳುವಿಕೆ ಕಂಡುಬಂದಿದೆ ಎಂದು ಕೇರಳ ಪೋಲೀಸರು ತಿಳಿಸಿದ್ದಾರೆ. ಶಾಲೆಗಳ ಆನ್‍ಲೈನ್ ತರಗತಿಗಳಲ್ಲಿ ಸೈಬರ್ ವಂಚಕರು ನುಸುಳಿ ನೃತ್ಯ ಮತ್ತು ಬೈಯ್ದಾಟದಲ್ಲಿ ಮುಳುಗಿರುವುದು ಕಂಡುಬಂದಿದೆ. ಕಳೆದ ಎರಡು ದಿನಗಳಿಂದ ನಡೆದ ಘಟನೆಯನ್ನು ಎತ್ತಿ ತೋರಿಸುವ ಮೂಲಕ ಕೇರಳ ಪೋಲೀಸರು ಈ ಬಗ್ಗೆ ಮಾಹಿತಿ ನೀಡಿದ್ದು, ಆನ್‍ಲೈನ್ ತರಗತಿಗಳ ಲಿಂಕ್ ಮತ್ತು ಪಾಸ್‍ವರ್ಡ್ ನ್ನು ಹಂಚಿಕೊಳ್ಳದಂತೆ ಪೋಲೀಸರು ಸಲಹೆ ನೀಡಿರುವರು. ಕೇರಳ ಪೋಲೀಸರ ಫೇಸ್‍ಬುಕ್ ಪುಟದ ಮೂಲಕ ಈ ಘೋಷಣೆ ಮಾಡಲಾಗಿದೆ.
ನಿನ್ನೆ ಆನ್‍ಲೈನ್ ತರಗತಿಯ ಸಂದರ್ಭದಲ್ಲಿ 'ನಕಲಿ ವಿದ್ಯಾರ್ಥಿ' ಕಪ್ಪು ಉಡುಗೆ ಮತ್ತು ಮಾಸ್ಕ್ ಧರಿಸಿ ನೃತ್ಯ ಮಾಡಿರುವುದು ಕಂಡುಬಂದಿದೆ. ಕೊಲ್ಲಂನ ಶಾಲೆಯಲ್ಲಿ ಒಂಬತ್ತನೇ ತರಗತಿಯ ಆನ್‍ಲೈನ್ ಕೋಣೆಯಲ್ಲಿರುವ ಕಾಮೆಂಟ್ ಬಾಕ್ಸ್‍ನಲ್ಲಿ ಬೈಗುಳಗಳ ಸುರಿಮಳೆಯೂ ನಡೆದಿದೆ. ಚಲನಚಿತ್ರಗಳು, ಹಾಸ್ಯ ತುಣುಕುಗಳು ಆಲ್ ಲೈನ್ ತರಗತಿಯ ಸಮಯದಲ್ಲಿ ಕಾಣಿಸಿಕೊಳ್ಳುತ್ತಿದೆ. 40 ಮಕ್ಕಳ ತರಗತಿಯಲ್ಲಿ 48 ಮಕ್ಕಳು ಇದ್ದ ಘಟನೆ ನಡೆದಿದೆ ಎಂದು ಪೋಲೀಸರು ಹೇಳುತ್ತಾರೆ.
ಆನ್‍ಲೈನ್‍ನಲ್ಲಿ ಪ್ರವೇಶ ಪಡೆದ ಮಕ್ಕಳೊಂದಿಗೆ ಶಿಕ್ಷಕರಿಗೆ ಪರಿಚಯವಿಲ್ಲದ ಕಾರಣ ಸುಳ್ಳುಗಾರರನ್ನು ಕಂಡುಹಿಡಿಯುವುದು ಕಷ್ಟ. ಪೋಷಕರ ಐಡಿ ಹೆಸರುಗಳನ್ನು ಗುರುತಿಸಲು ಸಾಧ್ಯವಿಲ್ಲ ಏಕೆಂದರೆ ಅವುಗಳನ್ನು ತರಗತಿಯಲ್ಲಿ ಬಳಸಲಾಗುತ್ತದೆ. ಆದ್ದರಿಂದ, ಆನ್‍ಲೈನ್ ತರಗತಿಗಳ ಲಿಂಕ್ ಮತ್ತು ಪಾಸ್‍ವರ್ಡ್ ಹಂಚಿಕೊಳ್ಳದಂತೆ ಮಕ್ಕಳು ಮತ್ತು ಪೋಷಕರಿಗೆ ಎಚ್ಚರಿಕೆ ವಹಿಸುವಂತೆ ಪೋಲೀಸರು ಸಲಹೆ ನೀಡಿದ್ದಾರೆ.
ಈ ಬಗ್ಗೆ ಶಾಲಾ ಅಧಿಕಾರಿಗಳು ಶಿಕ್ಷಕರು, ಮಕ್ಕಳು ಮತ್ತು ಪೋಷಕರಲ್ಲಿ ಜಾಗೃತಿ ಮೂಡಿಸಬೇಕು. ಮಕ್ಕಳ ಐಡಿಯೊಂದಿಗೆ ತರಗತಿಗೆ ಪ್ರವೇಶಿಸುವ ಮೂಲಕ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಪರಿಹರಿಸಬಹುದು. ಹೊರಗಿನವರು ತರಗತಿಗೆ ಪ್ರವೇಶಿಸುವುದನ್ನು ಗಮನಿಸಿದರೆ ದೂರುಗಳನ್ನು ಸಹ ನೀಡಬೇಕು.