ಮುಂಬೈ: ಕಳೆದ ವರ್ಷದಿಂದ ದೇಶದಲ್ಲಿ ತೀವ್ರವಾಗಿ ವ್ಯಾಪಿಸಿರುವ ಕೊರೊನಾವೈರಸ್ ಸಾಂಕ್ರಾಮಿಕ ರೋಗವನ್ನು ನಿಗ್ರಹಿಸಲು ಮುಂದೆ ಬಂದಿರುವ ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯು ಕೋವಿಡ್-19 ಚಿಕಿತ್ಸೆಗೆ ಹೊಸ ಔಷಧಿ ಬಳಕೆ ಸಾಧ್ಯತೆ ಹಾಗೂ ಅಗ್ಗದ ಟೆಸ್ಟಿಂಗ್ ಕಿಟ್‌ಗಳ ಅನ್ವೇಷಣೆಯಲ್ಲಿದೆ.
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ದೇಶದ ಅಧಿಕ ಮೌಲ್ಯದ ಸಂಸ್ಥೆಯಾಗಿರುವ ರಿಲಯನ್ಸ್ ತನ್ನ ವಾರ್ಷಿಕ ವರದಿಯಲ್ಲಿ ಕೋವಿಡ್-19ಗೆ ಪರಿಹಾರವಾಗಿ ಲಾಡಿಹುಳು ನಿವಾರಕ ಔಷಧಿ ನಿಕ್ಲೋಸಮೈಡ್ ಬಳಕೆಯ ಕುರಿತು ಅನ್ವೇಷಣೆಯಲ್ಲಿ ತೊಡಗಿಸಿಕೊಂಡಿದೆ.
ರೋಗ ನಿರ್ಣಯ ಕಿಟ್‌ಗಳಾದ 'ಆರ್-ಗ್ರೀನ್' ಮತ್ತು 'ಆರ್-ಗ್ರೀನ್ ಪ್ರೊ' ಅನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಅನುಮೋದಿಸಿದೆ. ಅಲ್ಲದೆ ಮಾರುಕಟ್ಟೆಯ ಐದನೇ ಒಂದರಷ್ಟು ದರದಲ್ಲಿ ಸ್ಯಾನಿಟೈಸರ್ ತಯಾರಿಸುವ ಪ್ರಕ್ರಿಯೆ ವಿನ್ಯಾಸಗೊಳಿಸಿದೆ ಎಂದು ವರದಿಯಲ್ಲಿ ತಿಳಿಸಿದೆ.
ದೇಶದಲ್ಲಿ ಇದುವರೆಗೆ 2.84 ಕೋಟಿ ಮಂದಿ ಕೋವಿಡ್ ಸೋಂಕಿಗೆ ತುತ್ತಾಗಿದ್ದು, 3,37,900 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲೀಗ ಎರಡನೇ ಅಲೆ ವ್ಯಾಪಿಸಿದ್ದು, ಮೂರನೇ ಅಲೆ ವ್ಯಾಪಿಸುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಭಾರತೀಯ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಕೊರತೆಯನ್ನು ಪರಿಹರಿಸಲು ರಿಲಯನ್ಸ್ ಪ್ರಯತ್ನಿಸುತ್ತಿದೆ. ಇದು ನಿಮಿಷಕ್ಕೆ ಐದರಿಂದ ಏಳು ಲೀಟರ್ ಸಾಮರ್ಥ್ಯವಿರುವ ವೈದ್ಯಕೀಯ ದರ್ಜೆಯ ಆಮ್ಲಜನಕ ಜನರೇಟರ್‌ಗಳನ್ನು ವಿನ್ಯಾಸಗೊಳಿಸುತ್ತಿದೆ ಎಂದು ವರದಿಯು ತಿಳಿಸಿವೆ.
ಏಪ್ರಿಲ್‌ನಲ್ಲಿ ಎರಡನೇ ಅಲೆಯು ದೇಶದಲ್ಲಿ ವ್ಯಾಪಿಸಿದಾಗ ಆಮ್ಲಜನಕ ಕೊರತೆ ಎದುರಾಗಿತ್ತು. ವೈದ್ಯಕೀಯ ದರ್ಜೆಯ ಆಮ್ಲಜನಕ ಉತ್ಪಾದಿಸಲು ರಿಲಯನ್ಸ್ ಸಂಸ್ಥೆಯು ಜಾಮ್‌ನಗರದಲ್ಲಿನ ತನ್ನ ಅತಿದೊಡ್ಡ ತೈಲ ಸಂಸ್ಕರಣಾ ಪ್ರದೇಶವನ್ನು ಬಳಸಿಕೊಳ್ಳುತ್ತಿದೆ.
ಅಲ್ಲದೆ ಕಳೆದ ವರ್ಷ ಕೋವಿಡ್ ಮುಂಚೂಣಿಯ ಸೇನಾನಿಗಳಿಗೆ ಪಿಪಿಇ ಕಿಟ್ ತಯಾರಿಸಲು ಒಂದು ಘಟಕವನ್ನು ಸ್ಥಾಪಿಸಿತ್ತು.