ಮಂಗಳೂರು: ಕ್ಲಬ್‌ಹೌಸ್‌ನಲ್ಲಿ ನಡೆದ ಆಡಿಯೋ ಚರ್ಚೆ ಈಗ ಹೊಸ ವಿವಾದದ ಕಿಡಿ ಹೊತ್ತಿಸಿದೆ. ತುಳುನಾಡು Vs ಕರುನಾಡು ಎಂಬ ಚರ್ಚೆ ವಿಷಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವಾಸ ಹೋಗುವುದನ್ನು ಇತರ ಜಿಲ್ಲೆಯವರು ಕಡಿಮೆ ಮಾಡಬೇಕು. ಆಗ ಮಾತ್ರ ಕರಾವಳಿಗರ ಸೊಕ್ಕು ಮುರಿಯಲು ಸಾಧ್ಯ ಅಂತಾ ಕ್ಲಬ್‌ಹೌಸ್‌ನಲ್ಲಿ ಒಬ್ಬ ಅಭಿಪ್ರಾಯ ಮಂಡನೆ ಮಾಡಿದ್ದು, ಇದು ವಿವಾದವನ್ನು ಸೃಷ್ಟಿಸಿದೆ.
ಕ್ಲಬ್‌ಹೌಸ್‌ನ ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪರ- ವಿರೋಧದ ಚರ್ಚೆಗಳು ನಡೆಯುತ್ತಿದೆ. ಕ್ಲಬ್‌ಹೌಸ್ ಚರ್ಚೆಯಲ್ಲಿ ಬೆಂಗಳೂರು ಮೂಲದ ಓರ್ವ ವ್ಯಕ್ತಿ, "ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲು ಪ್ರವಾಸ ಹೋಗುವುದನ್ನು ಕಡಿಮೆ ಮಾಡಬೇಕು. ಧರ್ಮಸ್ಥಳ, ಸುಬ್ರಹ್ಮಣ್ಯ ಕಡೆಗೆ ಹೋಗಲೇಬಾರದು. ಆಗ ಮಾತ್ರ ಕರಾವಳಿಗರ ಸೊಕ್ಕು ಮುರಿಯಲು ಸಾಧ್ಯವಾಗುತ್ತದೆ,'' ಎಂದು ಹೇಳಿದ್ದಾನೆ.
"ಟಿವಿ ಚಾನೆಲ್‌ಗಳಲ್ಲೂ ಮಂಗಳೂರಿನ ಕಡೆಯವರೇ ಅತೀ ಹೆಚ್ಚು ಜನರಿದ್ದಾರೆ. ಅನುಶ್ರೀ ಬರುವ ಮುಂಚೆ ಎಲ್ಲ ನಮ್ಮ ಕಡೆಯವರೇ ಇದ್ದರು. ಅನುಶ್ರೀ ಬಂದ ಮೇಲೆ ಎಲ್ಲಾ ಮಂಗಳೂರಿನ ಕಡೆಯವರೇ ತುಂಬಿ ಹೋಗಿದ್ದಾರೆ. ಟಿವಿಗಳಲ್ಲಿ ಅವರನ್ನು ಬೆಳೆಸುವುದನ್ನು ಕಡಿಮೆ ಮಾಡಬೇಕು,'' ಅಂತಾ ಹೇಳಿದ್ದಾನೆ.
ಅಲ್ಲದೇ "ಧರ್ಮಸ್ಥಳಕ್ಕೆ ಹೋಗುವ ಬದಲು ತಮ್ಮ ಊರಿನಲ್ಲೇ ಮಂಜುನಾಥ ಸ್ವಾಮಿ ದೇವಸ್ಥಾನ ಕಟ್ಟಿಸಬೇಕು," ಎಂದು ಹೇಳಿದ್ದು, ಕರಾವಳಿಯನ್ನು ಅವಹೇಳನ ಮಾಡಿದ ಈತನ ವಾದಕ್ಕೆ ಭಾರೀ ಆಕ್ರೋಶ ಕೇಳಿ ಬಂದಿದ್ದು, ಕ್ಷಮೆಯಾಚನೆಗೆ ಒತ್ತಾಯಿಸಲಾಗಿದೆ.
"ಕ್ಲಬ್‌ಹೌಸ್‌ನ್ನು ಉತ್ತಮ ವಿಚಾರಗಳ ಅಭಿಪ್ರಾಯ ಮಂಡನೆಗೆ ಬಳಸಬೇಕೇ ಹೊರತು, ನಮ್ಮ ನಮ್ಮ ನಡುವಲ್ಲೇ ಕಂದಕ ಸೃಷ್ಟಿಸುವಂತಹ ವಿಚಾರಕ್ಕೆ ಅಲ್ಲ," ಅಂತಾ ಕೆಲ ಜನರು ಬುದ್ಧಿವಾದ ಹೇಳಿದ್ದಾರೆ.