ಕೊಚ್ಚಿ: ನೌಕಾ ಕೇಂದ್ರ ಕಚೇರಿಯಲ್ಲಿ ಭದ್ರತಾ ಉಲ್ಲಂಘನೆಯಾದ ಆತಂಕಕಾರಿ ವಿದ್ಯಮಾನವೊಂದು ವರದಿಯಾಗಿದೆ. ಮಿಲಿಟರಿ ಸಮವಸ್ತ್ರದಲ್ಲಿ ನೌಕಾ ನೆಲೆಯೊಳಗೆ ಪ್ರವೇಶಿಸಿದ ಯುವಕನನ್ನು ನೌಕಾ ಪಡೆ ಪೋಲೀಸರು ಬಂಧಿಸಿದ್ದಾರೆ. ಉನ್ನತ ಭದ್ರತಾ ವಲಯದ ನೌಕಾ ಕೇಂದ್ರ ಕಚೇರಿಯಲ್ಲಿ ಸುಮಾರು ಒಂದೂವರೆ ಗಂಟೆ ಕಳೆದ ನಂತರ ಆತನನ್ನು ಬಂಧಿಸಲಾಗಿದೆ. ಒಳನುಗಿದ್ದ ಯುವಕ ತಿರುವನಂತಪುರ ಚಿರೈಂಕೀಳಿ ಮೂಲದವನೆಂದು ತಿಳಿದುಬಂದಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇತರ ಉನ್ನತ ಅಧಿಕಾರಿಗಳು ನಿನ್ನೆಯಷ್ಟೇ ನೌಕಾ ಕೇಂದ್ರ ಕಚೇರಿಗೆ ಆಗಮಿಸಿ ಹಿಂದಿರುಗಿದ ಬೆನ್ನಲ್ಲೇ ಯುವಕ ಈ ಪ್ರದೇಶಕ್ಕೆ ಅಕ್ರಮ ಪ್ರವೇಶಗೊಂಡನು. ಮೊದಲಿಗೆ ಯುವಕನು ಮಿಲಿಟರಿ ಸಮವಸ್ತ್ರದಲ್ಲಿ ತಿರುಗಾಡುವುದನ್ನು ಯಾರೂ ಗಮನಿಸಲಿಲ್ಲ. ನಂತರ ಆತನನ್ನು ಅಧಿಕಾರಿಗಳು ಬಂಧಿಸಿದರು.
ಯುವಕನನ್ನು ಬಂದರು ಪೋಲೀಸರಿಗೆ ಒಪ್ಪಿಸಲಾಗಿದೆ. ವಿಚಾರಣೆ ವೇಳೆ ಯುವಕ ಸೇನೆಗೆ ಸೇರುವ ಉದ್ದೇಶದಿಂದ ಬಂದಿರುವುದಾಗಿ ಪೋಲೀಸರಿಗೆ ತಿಳಿಸಿದ್ದಾನೆ. ಆತನ ಬಂಧನವನ್ನು ದಾಖಲಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ವಿಚಾರಣೆ ನಡೆಯುತ್ತಿದೆ.