ನ್ಯೂಯಾರ್ಕ್: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯಾಗಿ ಅಂಟಾನಿಯೋ ಗುಟೆರಸ್ 2ನೇ ಅವಧಿಗೆ ಆಯ್ಕೆಯಾಗಿದ್ದಾರೆ.
193 ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಗುಟೆರಸ್ ಅವರನ್ನು ಮರು ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಗುಟೆರಸ್ 2ನೇ ಅವಧಿ ಜನವರಿ 1, 2022ರಿಂದ ಆರಂಭಗೊಳ್ಳಲಿದೆ. 72 ವರ್ಷದ ಅಂಟಾನಿಯೋ ಗುಟೆರಸ್ ಮರು ಆಯ್ಕೆಯನ್ನು ವಿಶ್ವಸಂಸ್ಥೆ ಅಸೆಂಬ್ಲಿ ಅಧ್ಯಕ್ಷ ವೋಲ್ಕಾನ್ ಬೊಜ್ಕಿರ್ ಘೋಷಿಸುತ್ತಿದ್ದಂತೆ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಅಭಿನಂದನೆ ಸಲ್ಲಿಸಿದರು.
ಭಾರತದ ಬೆಂಬಲ
ಗುಟೇರಸ್ ಮರು ಆಯ್ಕೆಯನ್ನು ಭಾರತ ಕೂಡ ಬೆಂಬಲಿಸಿತ್ತು. ಜೂನ್ 8 ರಂದು ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿ 15 ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಗುಟೆರಸ್ ಅವರನ್ನು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮರು ಆಯ್ಕೆ ಮಾಡಲು ಶಿಫಾರಸು ಮಾಡಲಾಗಿತ್ತು. ಇದೀಗ ಮತ್ತೆ 5 ವರ್ಷಗಳ ಕಾಲ ಗುಟೆರಸ್ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ. 2017ರ ಜನವರಿ 1ರಂದು ಅಯಂಟಾನಿಯೋ ಗುಟೆರಸ್ ವಿಶ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿಯಾಗಿ ಮೊದಲ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದರು. ಮೊದಲ ಅವಧಿ ಡಿಸೆಂಬರ್ 31, 2021ಕ್ಕೆ ಕೊನೆಗೊಳ್ಳಲಿದೆ. ಜನವರಿ 1, 2022ರಿಂದ 2ನೇ ಅವಧಿ ಆರಂಭಗೊಳ್ಳಲಿದ್ದು, ಡಿಸೆಂಬರ್ 31, 2026ಕ್ಕೆ ಅಂತ್ಯಗೊಳ್ಳಲಿದೆ.
ಕಳೆದ ಸಾಲಿನಲ್ಲಿ ಹಲವು ಪಾಠ ಕಲಿತಿದ್ದೇವೆ
ಇದೇ ವೇಳೆ 2ನೇ ಬಾರಿಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಗುಟೆರಸ್, 'ಸಾಂಕ್ರಾಮಿಕ ರೋಗ, ಕಳೆದ ಸಾಲಿನಲ್ಲಿ ಎದುರಿಸಿದ ಸವಾಲುಗಳಿಂದ ಹಲವು ಪಾಠಗಳನ್ನು ಕಲಿತಿದ್ದೇವೆ. ಏಕಾಂಗಿಯಾಗಿ ಏನೂ ಸಾಧಿಸಲು ಸಾಧ್ಯವಿಲ್ಲ. ನಾವು ಒಗ್ಗಟ್ಟಾಗಿ ನಿಲ್ಲಬೇಕಿದೆ. ನಮ್ಮೊಳಗೆ ನಂಬಿಕೆಯನ್ನು ಮರುಸ್ಥಾಪಿಸಬೇಕಿದೆ ಎಂದು ಹೇಳಿದರು.