ತಿರುವನಂತಪುರ: ಸಿಪಿಐ ರಾಜ್ಯ ನಾಯಕರೋರ್ವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಪಕ್ಷದ ರಾಜ್ಯ ಪರಿಷತ್ ಸದಸ್ಯ ವಿ.ಪಿ.ಉನ್ನಿಕೃಷ್ಣನ್ ಪಿಣರಾಯಿ ವಿಜಯನ್ ವಿರುದ್ದ ಟೀಕೆಗಳನ್ನು ಮಾಡಿರುವುದಾಗಿ ತಿಳಿದುಬಂದಿದೆ. ಪಕ್ಷವು ಎರಡನೇ ಬಾರಿಯೂ ಆಡಳಿತ ಚುಕ್ಕಾಣಿ ಹಿಡಿದಿರುವ ಯಶಸ್ಸು ಓರ್ವನೇ ವ್ಯಕ್ತಿಯ ಅರ್ಹತೆಯಿಂದ ಸಾಧಿಸಲಾಗಿಲ್ಲ. ಅದರಲ್ಲಿ ಎಡರಂಗದ ಪೂರ್ಣ ಪ್ರಮಾಣದ ಏಕತೆ ಮತ್ತು ಶ್ರಮ ಇತ್ತೆಂದು ಉನ್ನಿಕೃಷ್ಣನ್ ಹೇಳಿರುವರು. ತಿರುವನಂತಪುರಂನ ವೆಂಜರಮ್ಮೂಡಿನಲ್ಲಿ ಸಿಪಿಎಂನಿಂದ ಸಿಪಿಐಗೆ ಬಂದವರಿಗೆ ನೀಡಿದ ಸ್ವಾಗತದಲ್ಲಿ ಅವರು ಮಾತನಾಡುತ್ತಿದ್ದರು.
ಕೇರಳದಲ್ಲಿ ನಿರಂತರ ಆಡಳಿತವು ಎಡರಂಗದ ಉತ್ಕøಷ್ಟತೆ ಮತ್ತು ಸಂಘಟಿತ ಯತ್ನದಿಂದಾದುದು. ರಾಜ್ಯದಲ್ಲಿ ಪಕ್ಷವೊಂದು ಎರಡನೇ ಬಾರಿಗೆ ಆಯ್ಕೆಯಾಗಿರುವುದೂ ಇದೇ ಮೊದಲಲ್ಲ. ಸಿ.ಅಚ್ಚುತ ಮೆನನ್ ಆಳ್ವಿಕೆಯಲ್ಲಿ ಕೇರಳದಲ್ಲಿ ಮೊದಲ ಬಾರಿಗೆ ನಿರಂತರ ಆಡಳಿತ ಸಾಧ್ಯವಾಗಿತ್ತು. ಕೇರಳದಲ್ಲಿ ನಿರಂತರವಾಗಿ ಆಡಳಿತ ನಡೆಸಿದ ಮೊದಲ ಪಕ್ಷ ಸಿಪಿಐ. ಈಗಿನ ಆಡಳಿತದ ಬಗ್ಗೆ ಹೆಮ್ಮೆ ಪಡುತ್ತಿರುವಾಗ, ಐತಿಹಾಸಿಕ ವಾಸ್ತವವನ್ನು ಮರೆಯಬಾರದು ಎಂದು ಉನ್ನಿಕೃಷ್ಣನ್ ಹೇಳಿದರು.
ಸಿಪಿಐನ ಶ್ರೇಷ್ಠತೆಗಾಗಿ ಮಾತನಾಡಬೇಕೆಂದು ಹೇಳಲಾಗಿದ್ದರೂ, ಅದು ಸಿಪಿಎಂ ಮತ್ತು ಮುಖ್ಯಮಂತ್ರಿಗಳಿಗೆದುರಾಗಿ ಹೊರಹೊಮ್ಮಿದ್ದು ಆಂತರಿಕ ಕಿತ್ತಾಟದ ಸ|ಊಚನೆ ಎಡನ್ನಲಾಗಿದೆ. ಈ ಬಗ್ಗೆ ಯಾವುದೇ ಸಿಪಿಎಂ ಮುಖಂಡರು ಇನ್ನೂ ಪ್ರತಿಕ್ರಿಯಿಸಿಲ್ಲ. ಪಿಣರಾಯಿ ವಿಜಯನ್ ಅವರ ವೈಯಕ್ತಿಕ ಪ್ರಭಾವವೇ ಅವರ ಗೆಲುವಿಗೆ ಕಾರಣ ಎಂಬ ವ್ಯಾಪಕ ಪ್ರಚಾರದ ಹಿನ್ನೆಲೆಯಲ್ಲಿ ಸಿಪಿಐ ನಾಯಕನ ಹೇಳಿಕೆ ಮಹತ್ವ ಪಡೆದಿದೆ.