ನವದೆಹಲಿ: ದೇಶದಲ್ಲಿ ಆತಂಕವನ್ನು ಸೃಷ್ಟಿಸಿರುವ ಕೋವಿಡ್ -19 ಸೋಂಕಿನಿಂದ ಭಾರತ ಎದುರಿಸುತ್ತಿರುವ ಸವಾಲುಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಾಳ್ಮೆಯಿಂದ ಸಮರೋಪಾದಿಯಲ್ಲಿ ಹೋರಾಡುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಅಹಮದಾಬಾದ್ ನಲ್ಲಿ ಒಂಬತ್ತು ಆಮ್ಲಜನಕದ ಘಟಕಗಳನ್ನು ವರ್ಚುವಲ್ ಸಭೆ ಉದ್ಘಾಟಿಸಿ ಮಾತನಾಡಿದ ಶಾ, ಆಮ್ಲಜನಕದ ಬೇಡಿಕೆ ಅಪಾರವಾಗಿ ಇದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಅವರು ವಿಶೇಷವಾಗಿ ಉಲ್ಲೇಖಿಸಿದ್ದಾರೆ.
ಕೋವಿಡ್ 19 ನ ಎರಡನೇ ಅಲೆಯ ಆರಂಭದ ಸಂದರ್ಭಗಳಲ್ಲಿ, ದೇಶವು ಸುಮಾರು ಒಂದು ಸಾವಿರ ಮೆಟ್ರಿಕ್ ಟನ್ ಆಮ್ಲಜನಕವನ್ನು ಉತ್ಪಾದಿಸುತ್ತಿತ್ತು. ಒಂದು ತಿಂಗಳಲ್ಲಿ ಆಮ್ಲಜನಕದ ಬೇಡಿಕೆ 10 ಸಾವಿರ ಮೆಟ್ರಿಕ್ ಟನ್ ನಷ್ಟಾಯಿತು. ಈ 10 ಪಟ್ಟು ಹೆಚ್ಚಳ ಆಮ್ಲಜನಕವನ್ನು ಪೂರೈಸುವುದು ದೊಡ್ಡ ಸವಾಲಾಗಿತ್ತು, ಆದರೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಮತ್ತು ರಾಜ್ಯವು ಸವಾಲಿಗೆ ಎದುರಾಗಿ ನಿಂತು ಕೋವಿಡ್ ವಿರುದ್ಧ ಹೋರಾಟವನ್ನು ಪ್ರಾರಂಭಿಸಿದೆ.
ಕೈಗಾರಿಕಾ ಆಮ್ಲಜನಕದ ಉತ್ಪಾದನೆಯನ್ನು ದೇಶದಾದ್ಯಂತದ ಘಟಕಗಳಲ್ಲಿ ಸ್ಥಗಿತಗೊಳಿಸಿ, ವೈದ್ಯಕೀಯ ಆಮ್ಲಜನಕ ಅಥವಾ ಮೆಡಿಕಲ್ ಆಕ್ಸಿಜನ್ ತಯಾರಿಕೆಯತ್ತ ಕೇಂದ್ರ ಗಮನ ಹರಿಸಿತ್ತು. ವಿದೇಶಗಳಿಂದ ಆಮದು ಮಾಡಿಕೊಂಡ ಕ್ರಯೋಜೆನಿಕ್ ಟ್ಯಾಂಕರ್ ಗಳನ್ನು ಆಮ್ಲಜನಕದ ಬೇಡಿಕೆ ಹೆಚ್ಚು ಇರುವಲ್ಲಿಗೆ ವಿಶೇಷ ರೈಲುಗಳ ಮೂಲಕ ಪೂರೈಸಲಾಯಿತು. ಸುಮಾರು 15 ಸಾವಿರ ಮೆಟ್ರಿಕ್ ಟನ್ ನಷ್ಟು ಆಮ್ಲಜನಕವನ್ನು ರೈಲುಗಳ ಮೂಲಕ ಸಾಗಿಸಲಾಗಿದೆ ಎಂದಿದ್ದಾರೆ.
ಕೋವಿಡ್ ಸೋಂಕಿನ ಮೊದಲ ಅಲೆಯ ನಂತರ, 162 ಪಿಎಸ್‌ಎ ಘಟಕಗಳನ್ನು ಪಿಎಂ ಕೇರ್ಸ್ ನಿಧಿಯಿಂದ ಪ್ರಧಾನಿ ಅನುಮೋದಿಸಿದ್ದು, ಹೆಚ್ಚುವರಿಯಾಗಿ 1,051 ಘಟಕಗಳಿವೆ. “ಇದರೊಂದಿಗೆ ಇನ್ನೂ 100 ಪಿಎಸ್‌ಎ ಘಟಕಗಳನ್ನು ಸಚಿವಾಲಯಗಳು ಪ್ರಾರಂಭಿಸಿದವು. ಮುಂದಿನ ದಿನಗಳಲ್ಲಿ ಇನ್ನೂ 300 ಹೆಚ್ಚುವರಿ ಘಟಕಗಳನ್ನು ಪ್ರಾರಂಭಿಸುವ ಕಾರ್ಯ ಪ್ರಕ್ರಯಿಯೆಯಲ್ಲಿದೆ ಎಂದು ತಿಳಿಸಿದ್ದಾರೆ.
ಈ ಕೋವಿಡ್ ಸಾಂಕ್ರಾಮಿಕ ರೋಗವು ನಿಧಾನವಾಗಿ ಕಡಿಮೆಯಾಗುತ್ತಿದೆ ಮತ್ತು ಆಮ್ಲಜನಕದ ಬೇಡಿಕೆಯೂ ಕಡಿಮೆಯಾಗುತ್ತಿದೆ. ಗುಣಮುಖರಾಗುತ್ತಿರುವವರ ಸಂಖ್ಯೆ ಹೊಸ ಸೋಂಕು ಪ್ರಕರಣಗಳಿಗಿಂತ ಹೆಚ್ಚಾಗುತ್ತಿವೆ ಎಂದು ಅಮಿತ್ ಶಾ ಹೇಳಿದ್ದಾರೆ.