ತಿರುವನಂತಪುರ: ಕೋವಿಡ್ ಸಕಾರಾತ್ಮಕ ದರ ಗ್ರಹಿಸಿದ ಮಟ್ಟದಲ್ಲಿ ಕಡಿಮೆಯಾಗದ ಕಾರಣ, ರಾಜ್ಯದಲ್ಲಿ ಹೆಚ್ಚಿನ ರಿಯಾಯಿತಿಗಳನ್ನು ಘೋಷಿಸಲು ಕಾಲ ಸನ್ನಿಹಿತವಾಗಿಲ್ಲ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಕೋವಿಡ್ ಪರಿಶೀಲನಾ ಸಭೆಯಲ್ಲಿ ಈಗಿರುವ ನಿಬರ್ಂಧಗಳನ್ನು ಮುಂದುವರಿಸಲು ನಿರ್ಧರಿಸಿದೆ. ಮಂಗಳವಾರ ನಡೆಯುವ ಸಭೆಯಲ್ಲಿ ವಿನಾಯಿತಿಗಳ ಕುರಿತು ಮರು ಪರಿಶೀಲನೆ ನಡೆಸಲಾಗುವುದು.
ಆರಾಧನಾಲಯಗಳಲ್ಲಿ ಪೂಜೆ/ಪ್ರಾರ್ಥನೆಗೆ ಭಾನುವಾರ ಅನುಮತಿ ನೀಡಲಾಗಿದೆ. ಇದೇ ವೇಳೆ, ಕೇವಲ 15 ಮಂದಿಗೆ ಮಾತ್ರ ಏಕಕಾಲದಲ್ಲಿ ಆರಾಧನಾ ಕೇಂದ್ರ ಪ್ರವೇಶಿಸಲು ಅವಕಾಶವಿತ್ತು. ಮುಂದಿನ ಆದೇಶದ ವರೆಗೆ ಇದು ಯಥಾ ರೀತಿ ಮುಂದುವರಿಯಲಿದೆ. ಕೋವಿಡ್ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಭಾನುವಾರವೂ ಸಂಪೂರ್ಣ ಲಾಕ್‍ಡೌನ್ ಮುಂದುವರಿಯಲಿದೆ ಎಂದು ಸರ್ಕಾರ ತಿಳಿಸಿದೆ.
ಟಿಪಿಆರ್ ದರ ರಾಜ್ಯದಲ್ಲಿ ಶೇಕಡಾ 10 ಕ್ಕಿಂತ ಹೆಚ್ಚಿದೆ ಮತ್ತು ವಾರಾಂತ್ಯದ ಲಾಕ್ ಡೌನ್ ನ್ನು ಗಮನದಲ್ಲಿಟ್ಟುಕೊಂಡು ರಿಯಾಯಿತಿಗಳನ್ನು ನೀಡದಿರಲು ಸರ್ಕಾರ ನಿರ್ಧರಿಸಿದೆ. ಟಿಪಿಆರ್ ಶೇಕಡಾ ಎಂಟು ಕ್ಕಿಂತ ಕಡಿಮೆಯಾಗುವವರೆಗೂ ಪ್ರಸ್ತುತ ನಿರ್ಬಂಧಗಳು ಮುಂದುವರಿಯುತ್ತವೆ ಎಂದು ವರದಿಯಾಗಿದೆ.
ಮುಂದಿನ ಮಂಗಳವಾರ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ವಿನಾಯಿತಿಗಳನ್ನು ಮುಂದುವರಿಸಬೇಕೆ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಕಳೆದ ಸೋಮವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಟಿಪಿಆರ್ 10 ಕ್ಕಿಂತ ಹೆಚ್ಚಿತ್ತು. ದಿನಕ್ಕೆ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇನ್ನೂ ಕುಸಿತ ಕಂಡಿಲ್ಲ. ಮತ್ತು ಚಿಕಿತ್ಸೆಗೆ ಒಳಗಾಗುವ ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ವಿನಾಯಿತಿಗಳನ್ನು ನೀಡದಿರಲು ಸರ್ಕಾರ ನಿರ್ಧರಿಸಿದೆ.
ಕೇರಳದಲ್ಲಿ ನಿನ್ನೆ 12,118 ಮಂದಿ ಜನರಲ್ಲಿ ಸೋಂಕು ದೃಢಪಟ್ಟಿತ್ತು. ಪರೀಕ್ಷಾ ಸಕಾರಾತ್ಮಕ ದರ 10.66 ಶೇ. ಆಗಿತ್ತು. 118 ಮಂದಿ ಸೋಂಕಿನಿಂದ ಮೃತಪಟ್ಟಿದ್ದರು. ಒಟ್ಟು ಸಾವಿನ ಸಂಖ್ಯೆ 12,817 ಕ್ಕೆ ಏರಿಕೆಯೂ ಆಗಿದೆ. ಒಟ್ಟು 1,01,102 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 27,63,616 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.