HEALTH TIPS

ಕಾಸರಗೋಡಿನ ಕಡುಗಲಿ ಕಯ್ಯಾರ ಕಿಞ್ಞಣ್ಣ ರೈ:ಇಂದು ಜನುಮ ದಿನ

 ದುಡಿತವೇ ನನ್ನ ದೇವರು, ಲೋಕ ದೇವಕುಲ,

ಬೆವರೆ ಹೂ ಹಣ್ಣು ಕಾಯ್, ಕಣ್ಣೀರೆ ತೀರ್ಥಂ;
ಎನ್ನೊಂದಿಗರ ಬಾಳ ಸಾವುನೋವಿನ ಗೋಳ
ಉಂಡಿಹೆನು ಸಮಪಾಲ – ನನಗದೆ ಪ್ರಸಾದಂ”.

– ಇದು ಗಡಿನಾಡ ಕವಿ ಎಂದೇ ಖ್ಯಾತಿವೆತ್ತ, ಇಂದಿಗೂ ಕಾಸರಗೋಡು ಹೆಸರಿನೊಂದಿಗೆ ಇಡೀ ಕನ್ನಡ ನಾಡೇ ನೆನೆಯುವ ಕಯ್ಯಾರ ಕಿಞ್ಞಣ್ಣ ರೈಗಳ ದೃಢವೃತ.

‘ಕಾಸರಗೋಡು ಕನ್ನಡನಾಡು’ – ಎಂಬ ಏಕೀಕರಣದ ಈ ಕೂಗಿಗೆ ಕನ್ನಡಿಗರ ಕಣ್ಣಿಗೆ ಕಟ್ಟುವ ಎರಡು ಅಕ್ಷರಗಳೆಂದರೆ ಪೈ ಮತ್ತು ರೈ. ಮೊದಲನೆಯದು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳು; ಎರಡನೆಯವರು ಕಯ್ಯಾರ ಕಿಞ್ಞಣ್ಣ ರೈ ಅವರು. ಕಿಞ್ಞಣ್ಣ ರೈಗಳದ್ದು, ಗಟ್ಟಿ ಶರೀರ, ಶಾರೀರದ ವ್ಯಕ್ತಿತ್ವ. ಸದಾ ಕನ್ನಡಕ್ಕಾಗಿ ಮೀಡಿವ ಗಡಸು ಧ್ವನಿಯ, ‘ಕಾಸರಗೋಡು ಕನ್ನಡನಾಡಿನ ಅವಿಭಾಜ್ಯ ಅಂಗ’ ಎಂಬ ಕನವರಿಕೆಯ ಕನ್ನಡಪರ ಹೋರಾಟಗಾರರು. ಕಯ್ಯಾರ ಕಿಞ್ಞಣ್ಣ ರೈ ಅವರು ಕೇವಲ ಹೋರಾಟಗಾರಷ್ಟೆ ಅಲ್ಲ; ಕವಿ, ಕಲಿ, ಕೃಷಿಕ, ಶಿಕ್ಷಕ, ಪತ್ರಕರ್ತ ಕೂಡ.


ಕಯ್ಯಾರರ ಜೀವನ ಸಾಧನೆಯ ಅಡಿಯಲ್ಲಿ ಎದ್ದುಕಾಣುವಂಥದ್ದು ಅವರ ಕಾವ್ಯಪ್ರಪಂಚ. ಅವರ ಸಾಹಿತ್ಯನಿರ್ಮಿತಿ ವೈವಿಧ್ಯಮಯವಾಗಿದ್ದರೂ ಮುಖ್ಯವಾಗಿ ಕಯ್ಯಾರರು ಕವಿ – ಗಡಿನಾಡ ಕವಿ – ಎಂದೇ ಗುರುತಿಸಿಕೊಂಡವರು. ನವೋದಯದಿಂದ ನವ್ಯದವರೆಗೂ ನಾಡು ಪ್ರೀತಿಯ ಕಹಳೆ ಊದಿದ ಕಯ್ಯಾರರ ಕಾವ್ಯಗಳು ವಿಸ್ತಾರವಾದದ್ದು ಮತ್ತು ವೈವಿಧ್ಯಪೂರ್ಣವಾದದ್ದು. ಅವರನ್ನು ‘ಕರಾವಳಿಯ ಆಧುನಿಕ ಮಹಾಕವಿ’ ಎಂದವರೂ ಉಂಟು. ಕಯ್ಯಾರರ ಕವನಗಳಲ್ಲಿ ಮಿಡಿಯುವ ಪ್ರಾಸಾಧಿಕತೆ, ಪ್ರಾಮಾಣಿಕತೆ, ಓಜಸ್ಸು, ಆದರ್ಶ, ಜೀವನಮೌಲ್ಯಗಳು ಅವರ ಕೃತಿಗಳನ್ನು ಎತ್ತರದಲ್ಲಿ ನಿಲ್ಲಿಸಿವೆ. ಅವರÀ ಕವಿತೆಗಳಲ್ಲಿ ನಿಗೂಢತೆ, ಅನಗತ್ಯ ವ್ಯಂಗ್ಯ, ಕೀಳು ಅಭಿರುಚಿಗಳು ಕಾಣಸಿಗುವುದಿಲ್ಲ. ಅವರ ಕಾವ್ಯಸೃಷ್ಠಿಯ ನಿಲವು – ಕಾವ್ಯವು ಮನೋವಿಲಾಸಕ್ಕಿಂತ ಹೆಚ್ಚಾಗಿ ಮನೋವಿಕಾಸಕ್ಕೆ ದಾರಿ ಮಾಡಿಕೊಡಬೇಕು ಎಂಬುದೇ ಆಗಿತ್ತು. ಹೀಗಾಗಿಯೇ ಅವರ ಕಾವ್ಯಗಳಲ್ಲಿ ಬಹಳ ಮುಖ್ಯವಾಗಿ ಬಿಂಬಿತವಾಗುತ್ತಿದ್ದುದು ನಾಡಿನ ಸ್ಥಿತಿ(ದೀನಸ್ಥಿತಿ)ಯ ಚಿತ್ರಣವೇ, ಹೊರತು ಹಾಸ್ಯ ಅಥವಾ ಪ್ರಣಯ ರಸಗಳಲ್ಲ.

ಕಿಞ್ಞಣ್ಣ ರೈ ಅವರು ತುಳುನಾಡಿನ (ದಕ್ಷಿಣ ಕನ್ನಡದ) ಆಧುನಿಕ ಕನ್ನಡ ಕಾವ್ಯೇತಿಹಾಸದಲ್ಲಿ ಬ್ರಾಹ್ಮಣೇತರ ಸಮಾಜದಿಂದ ಬಂದ ಮೊದಲ ಕವಿ. ವಿದ್ಯಾರ್ಥಿಯಾಗಿದ್ದಾಗಲೇ ಅವರು ಬರೆದ ‘ನೀನು ನನ್ನ ಭಾವನೆಯಲಿ’ ಎಂಬ ಕವನ ಮಂಗಳೂರಿನ ‘ಸ್ವದೇಶಾಭಿಮಾನ’ ಪತ್ರಿಕೆಯಲ್ಲಿ ಪ್ರಕಟವಾಯಿತು. ಇದು ಅವರ ಮೊದಲ ಕವನ. ಅದು ಅಚ್ಚಾಗಿರುವುದನ್ನು ತಿಳಿದ ರೈಗಳಿಗೆ ಖುಷಿಯೋ ಖುಷಿ – ‘ಅಚ್ಚಾಗಿ ಬರುವಾಗ ಹುಚ್ಚಾಗಿ ಹೋಗಿಹೆನು ನೆಲವ ಬಿಟ್ಟೇರಿಹೆನು ಬಾನಿನೆಡೆಗು’- ಎಂದಿದ್ದರು. ಮುಂದೆ ‘ಜಯಕರ್ನಾಟಕ’, ‘ರಾಷ್ಟ್ರಬಂಧು’, ‘ಸ್ವದೇಶಾಭಿಮಾನಿ’ ಮತ್ತಿತರ ಪತ್ರಿಕೆಗಳಲ್ಲಿ ರೈಗಳ ಪ್ರಾರಂಭದ ಕವಿತೆಗಳು ಪ್ರಕಟವಾದವು. ಹೀಗೆ ಕವಿತಾರಚನೆಯ ಗೀಳು ಅವರನ್ನು ಅಂಟಿಕೊಂಡಿತು.

“ಜನಾಂಗವನ್ನು ಹುರಿದುಂಬಿಸುವ ಪ್ರವಾದಿಯಂತೆ ಕಯ್ಯಾರರು ಆತ್ಮವಾಣಿಯನ್ನು ಕನ್ನಡಿಸುತ್ತಾರೆ. ಉಪನಿಷತ್ತಿನ ಸಂದೇಶವನ್ನು ಕನ್ನಡದಲ್ಲಿ ಮೂಡಿಸುವಲ್ಲಿ ಅವರ ಶ್ರಮಸಿದ್ಧಿ ಅನನ್ಯ. ಕಾವ್ಯದ ಎಲ್ಲಾ ಬಗೆಯ ಎತ್ತರಗಳಲ್ಲಿ ಅನಾಯಾಸ ವಿಹರಿಸಬಲ್ಲ ಅಪೂರ್ವ ವಿರಳಾತಿವಿರಳ ಕವಿಪಂಕ್ತಿಯಲ್ಲಿ ಕಯ್ಯಾರರಿಗೆ ಅನನ್ಯ ಸ್ಥಾನವಿದೆ.” –    ಶ್ರೀ ಬನ್ನಂಜೆ ಗೋವಿಂದಾಚಾರ್ಯ

ಶ್ರೀಮುಖ:

ಕಿಞ್ಞಣ್ಣ ರೈಗಳು ತಮ್ಮ ಹದಿನೆಂಟು-ಇಪ್ಪತ್ತೆಂಟರ ನಡುವಿನ ಪ್ರಾಯದಲ್ಲಿ ಬರೆದ ಕವನಗಳ ಸಂಗ್ರಹವಾದ ‘ಶ್ರೀಮುಖ’ (1943), ಅವರ ಮೊದಲ ಕವನ ಸಂಕಲನ. ಇದರಲ್ಲಿ ಸ್ವಾನುಭವದಿಂದ ಹೊಮ್ಮಿದ ರಾಷ್ಟ್ರೀಯ ನಿಷ್ಠೆಯೇ ಪ್ರಧಾನವಾದ ಕವಿತೆಗಳಿವೆ, ಅವರ ಪ್ರಾದೇಶಿಕತೆ, ರಾಷ್ಟ್ರೀಯತೆ ಹಾಗೂ ಅಂತರರಾಷ್ಟ್ರೀಯತೆಗಳ ಮಿಶ್ರದನಿಗಲನ್ನು ಕಾಣಬಹುದು.

‘ಆರ್ಯರೋ ಮೊಗಲರೋ ಕ್ರೈಸ್ತರೋ ತಡೆಯೇನು?
ಎಲ್ಲರೂ ಬರಲೆಂದು ಸ್ವಾಗತಿಸಿದೆ;
ಜಾತಿಮತ ಬೇರೆನದೆ ಬಣ್ಣನುಡಿ ಬದಲೆನದೆ
ಭೇದವೆಣಿಸದೆ ತಾಯೆ! ನೀ ಸಲಹಿದೆ.

– ಎಂದು ಆರಂಭವಾಗುವ ಈ ಸಂಕಲನ ರೈಗಳ ಸಾಮರಸ್ಯಾಸಕ್ತಿಯ ಬೀಜರೂಪವಾಗಿ ಕಾಣುತ್ತದೆ. ವಿಶ್ವಸಂತತಿಯನ್ನೆಲ್ಲ ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೆಂದೇ ಭಾವಿಸಿ ಭಾರತಮಾತೆ ಅವರನ್ನು ಸಮಾನವಾಗಿ ಸಲಹುವ, ಸಲಹಿದ ಕಲ್ಪನೆಯನ್ನು ಸಾರುವ ಈ ಕವನ ಒಮ್ಮತದ ಎಕಪಂಥ ಹಿಡಿದು ಒಗ್ಗಟ್ಟಿನಲ್ಲಿ ಸಾಗುವ ಪ್ರತಿಜ್ಞೆಯೊಂದಿಗೆ ಕೊನೆಗೊಳ್ಳುತ್ತದೆ.

ರಾಷ್ಟ್ರೀಯತೆ, ಗಾಂಧಿವಾದ, ಧರ್ಮನಿರಪೇಕ್ಷತೆ, ರಾಷ್ಟ್ರವಿಭಜನೆ ಕುರಿತ ಸಂಕಟ – ಈ ಪ್ರಧಾನ ಆಶಯದಿಂದ 1949ರಲ್ಲಿ ಪ್ರಕಟವಾದ ‘ಐಕ್ಯಗಾನ’ ಕವನಸಂಕಲನಕ್ಕೆ ಐತಿಹಾಸಿಕ ಮಹತ್ತ ್ವವಿದೆ. ಈ ಸಂಕಲನದಲ್ಲಿರುವ  ಸ್ವಾತಂತ್ರ್ಯದ ಆದರ್ಶದಲ್ಲಿ ಮೊಳಗಿದ ‘ಐಕ್ಯಗಾನ’ ಎಂಬ ಹೆಸರಿನ ಕವನ ಕೈಯಾರರ ಪ್ರಸಿದ್ಧ ಕವನಗಳಲ್ಲಿ ಒಂದಾಗಿದೆ.

ಐಕ್ಯವೊಂದೇ ಮಂತ್ರ, / ಐಕ್ಯದಿಂದೆ ಸ್ವತಂತ್ರ, / ಐಕ್ಯಗಾನದಿ ರಾಷ್ಟ್ರ ತೇಲುತಿರಲಿ! / ‘ಭಾರತದಿ ಮಮಜನ್ಮ / ಸ್ವಾತಂತ್ರ್ಯವೇ ಧರ್ಮ’ / – ಒಕ್ಕೋರಲಿನುದ್ಘೋಷ ಕೇಳುತಿರಲಿ! ಎಂಬ ಅವರ ಆಶಯ ಕವನದಲ್ಲಿ ಪ್ರತಿಬಿಂಬಿತವಾಗುತ್ತದೆ.


ದೂರವಾಗದ ವೇದನೆ:

ಹನ್ನೆರಡು ವರ್ಷಗಳ ಅನಂತರ 1961ರಲ್ಲಿ ಪ್ರಕಟವಾದ ಅವರ ಮೂರನೇ ಕವನಸಂಕಲನ ‘ಪುನರ್ನವ’ದಲ್ಲಿ, ಅವರ ಬಾಳುವೆಯಲ್ಲಿ ಹಾಗೂ ಅವರು ಬಾಳಿಬಂದ ನೆಲದಲ್ಲುಂಟಾದ ಕೆಲವು ಆಘಾತಗಳ ನೋವನ್ನು ಇದರಲ್ಲಿ ಕಾಣಬಹುದು.
ಕಾಸರಗೋಡು ಕನ್ನಡನಾಡು ಎಂಬ ಕಯ್ಯಾರರ ಜೀವದನಿಗೆ ಆಘಾತದಂತೆ ರಾಜ್ಯ ಮರುವಿಂಗಡನೆಯ ಸಮಯದಲಿ ಕನ್ನಡದ ನೆಲವಾಗಿದ್ದ ಕಾಸರಗೋಡು ಕೇರಳಕ್ಕೆ ಸೇರಿದಾಗ ಅವರು ಕನ್ನಡ ನಾಡಿನಿಂದ, ಕಾಡಿನಿಂದ, ಗೂಡಿನಿಂದ, ಕಡಲಿನಿಂದ, ಸಿಡಿಲಿನಿಂದ ಮೇಲೆದ್ದುಬಂದು ಗುಡುಗಿ ಈ ಬೇಗೆಯನ್ನಾರಿಸುವಂತೆ ಆರ್ತನಾದ ಮಾಡಿ ಕೂಗಿ ಕರೆದದ್ದು ಹೀಗೆ:

“ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ
ಎಲ್ಲರೂ ಎದ್ದೆದ್ದು ಓಡಿ ಬನ್ನಿ
ಕನ್ನಡದ ಗಡಿ ಕಾಯೆ, ಕನ್ನಡದ ನುಡಿ ಕಾಯೆ
ಕಾಯಲಾರೆವೆ ಸಾಯೆ!, ಓ ಬನ್ನಿ ಬನ್ನಿ.”

ಆದರೆ ಆ ಬೆಂಕಿ ಇಂದಿಗೂ ಆರಿಲ್ಲ. ಆ ವೇದನೆ ಇಂದಿಗೂ ಕಯ್ಯಾರರನ್ನು ಕಾಡುತ್ತಲೇ ಇದೆ.ಭಾಷಾವಾರು ಪ್ರಾಂತ ರಚನೆಯಲ್ಲಿ ಕೇರಳಕ್ಕೆ ಸೇರಿದ ಕಾಸರಗೋಡಿನ ಬಹುಸಂಖ್ಯಾತ ಜನರ ಭಾಷೆ ಕನ್ನಡ ಅಥವಾ ತುಳು. ಗಡಿನಾಡಿನಲ್ಲಿ ಕಳೆದ ಐವತ್ತರವತ್ತು ವರ್ಷಗಳಿಂದ ಕಯ್ಯಾರರು ಕಾಸರಗೋಡಿನಲ್ಲೇ ಕಾದಿದ್ದಾರೆ; ಕನ್ನಡದ ಅಂಕಿತಕ್ಕಾಗಿ ಕೂತಿದ್ದಾರೆ. ಈ ಕಟ್ಟಾಳಿನ ಕೈ ಈಗ ಬಳಲಿದೆ; ಅವರ ಮಾತು-ಮೌನದ ಹಿಂದೆ ನೋವಿದೆ. ರಾಜಕೀಯ ಕುಟಿಲ ನೀತಿಯ ವಿರುದ್ಧ ದ್ವೇಷವಿದೆ, ವೇದನೆಯಿದೆ.

“ಕವಿ ಕಲಿ ಕನ್ನಡದ ಧೀಮಂತ ಹೋರಾಟಗಾರ ಕಯ್ಯಾರ 50 ವರ್ಷಗಳಿಂದಲೂ ಹಾಡಿದ್ದಾರೆ. ಒಂದು ತತ್ತ್ವಕ್ಕೆ, ವಿಚಾರಕ್ಕೆ, ಆದರ್ಶಕ್ಕೆ ರೈಯವರಂತೆ ತಮ್ಮನ್ನು ಅರ್ಪಿಸಿಕೊಂಡವರು ಯಾವ ನಾಡಿನಲ್ಲೇ ಆಗಲಿ ಎಷ್ಟು ಮಂದಿ ಸಿಗುತ್ತಾರೆ? ಅವರು ಶ್ರೇಷ್ಠ ಕವಿಗಳು, ಶ್ರೇಷ್ಠ ಶಿಕ್ಷಕರು, ಶ್ರೇಷ್ಠ ಹೋರಾಟಗಾರರು, ಶ್ರೇಷ್ಠ ಪಂಡಿತರು.” –    ಶ್ರೀ ಪಾಟೀಲ ಪುಟ್ಟಪ್ಪ

‘ಕೊರಗ’ :
‘ಕೊರಗ’ (1981), ರೈಗಳ ಸೃಜನಶೀಲತೆ ನಿಂತ ನೀರಾಗಿಲ್ಲ ಎಂಬುದನ್ನು ಸಾಬೀತುಪಡಿಸಿದ ಕವನ ಸಂಕಲನ. ಇದು ತುಳುನಾಡಿನ ಅತ್ಯಂತ ಹಿಂದುಳಿದ ಅಸ್ಪøಶ್ಯ, ಆದಿವಾಸಿ ಜನಾಂಗ ‘ಕೊರಗ’ರನ್ನು ಅಧ್ಯಯನ ನಡೆಸಿದ ರಚಿಸಿದ ಕವನ. ‘ನಾಡನ್ನಾಳುವ ಮಂದಿ ವೇದಶುದ್ಧ ಸಮಾಜ, ಮುಖಕೆ ಉಗುಳುವ ತೆರದಿ ಇವನ ಪೀಳಿಗೆಗೆಸೆದ ಹೆಸರು ಕೊರಗ!’ ಎಂದು ಜಾತಿಯ ಏಣಿಶ್ರೇಣಿಯ ಸಮಾಜದಲ್ಲಿರುವ ಕ್ರೌರ್ಯ-ವೈರುಧ್ಯಗಳನ್ನು ಕಯ್ಯಾರರು ಇಲ್ಲಿ ವಿಡಂಬಿಸುತ್ತಾರೆ. ಈ ಕವನ ಹಿಂದುಳಿದ ಕೊರಗ ಜನಾಂಗದವರನ್ನು ಕುರಿತಿದ್ದರೂ ಇದು ಎಲ್ಲ ಕಾಲದ ಶೋಷಿತರ ಪರವಾದ ಕವನವಾಗಿದೆ ಎಂದರೂ ತಪ್ಪಾಗದು. ಬುದ್ಧ, ಕ್ರೈಸ್ತ, ಮಹಮ್ಮದ, ಜಿನದೇವ, ಜರತುಷ್ಟ, ಪ್ಲೇಟೊ, ಟಾಲಿಸ್ಟಾಯ್, ಸಾಕ್ರಟೀಸ್‍ರಂತಹ ಶಕಪುರುಷರು ಅಂದಿನಿಂದ ಇದನ್ನೇ ಬೋಧಿಸಿದರೂ ಇವ ಇಂದಿಗೂ ಕೊರಗ ಎನ್ನುವ ರೈಗಳು, ಶೋಷಣೆಯ ಸಾಮಾಜಿಕ ದಾರುಣ ಸ್ಥಿತಿ ಇರಕೂಡದು ಎಂಬ ಆಶಯದಿಂದ ‘ದೇವಸುತನೀತ ಮನುಕುಲದ ಮೂಲದ ಮನುಜ/ ಇವನೆ ಹರಿಜನ ನರಜನರಿಗೆಲ್ಲ ಮೊದಲಿಗನು’ ಎನ್ನುತ್ತಾರೆ. ಕವನದ ಕೊನೆಯಲ್ಲಿ ಪ್ರತಿಯೊಬ್ಬರೂ ಪರಮಾತ್ಮನ ಭಾಗವೇ ಆದ ಆತ್ಮ ಎಂದು ಭಗವದ್ಗೀತೆಯನ್ನು ಉಲ್ಲೇಖಿಸಿ ಸಮಾನತೆಯ ಆಶಯವನ್ನು ಸಾರುತ್ತಾರೆ.

ಕಾವ್ಯೋಪನಿಷತ್: ‘ಪಂಚಮೀ’
ಉಪನಿಷತ್ತುಗಳನ್ನು ಅಧ್ಯಯನ ಮಾಡಬೇಕೆಂದು ಹಂಬಲಿಸಿದ (ಬಂಟ ಸಮಾಜದ) ಕಯ್ಯಾರರಿಗೆ ಇದನ್ನು ಪದ್ಯರೂಪದಲ್ಲೇಕೆ ಭಾಷಾಂತರಿಸಬಾರದು ಎಂಬ ತುಡಿತ ಹುಟ್ಟಿಕೊಂಡಿತು. ಈಶೋಪನಿಷತ್ತನ್ನು ಅನುವಾದಿಸಿ, ಪ್ರಸ್ಥಾನತ್ರಯಿಗಳನ್ನು ಕನ್ನಡಿಸಿದ ಖ್ಯಾತಿಯ ಮಂಗಳೂರು ಶ್ರೀರಾಮಕೃಷ್ಣಾಶ್ರಮದ ಅಂದಿನ ಮುಖ್ಯಸ್ಥ ಸ್ವಾಮೀ ಆದಿದೇವಾನಂದರಿಗೆ ತೋರಿಸಿ, ಅವರ ಮೆಚ್ಚುಗೆಯ ಮಾತುಗಳಿಂದ ಪ್ರೇರಿತರಾದ ಕಯ್ಯಾರರು  ನಂತರ ಉಪನಿಷತ್ತುಗಳನ್ನು ಅನುವಾದಿಸದೆ ವಿಶ್ರಮಿಸಲಿಲ್ಲ. ಆ ಅನುವಾದಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದವು.

1885ರಲ್ಲಿ ಉಪನಿಷತ್ತುಗಳ (ಈಶ, ಕಠ, ಕೇನ, ಮುಂಡಕ, ಪ್ರಶ್ನ) ಕಾವ್ಯಾನುವಾದ ‘ಪಂಚಮೀ’ ಪ್ರಕಟವಾಯಿತು. ಇದು ಕಯ್ಯಾರರ ಬಹುಪ್ರಸಿದ್ಧ ಹಾಗೂ ಜನಪ್ರೀಯ ಕೃತಿಗಳಲ್ಲೊಂದು. ಆದಿಶಂಕರಾಚಾರ್ಯರ ಚಿಂತನಗಳ ಪ್ರಭಾವವೇ ಕಯ್ಯಾರರಿಗೆ ಈ ಕಾವ್ಯೋಪನಿಷತ್ ರಚನೆಗೆ ಮೂಲ ಪ್ರೇರಣೆ. ಹದಿನೆಂಟು ಮಂತ್ರಗಳಲ್ಲಿರುವ ಈಶಾವಾಸ್ಯ; ನಚಿಕೇತ-ಯಮರ ಆತ್ಮಜ್ಞಾನ ಸಂಭಾಷಣೆಯ ರೂಪದಲ್ಲಿರುವ ಕಠ; ಗುರು-ಶಿಷ್ಯರೊಳಗಿನ ಬ್ರಹ್ಮವಿದ್ಯಾ ಸಂವಾದ ರೂಪದ ಕೇನ; ‘ಪರಾ’ ವಿದ್ಯೆಯ ಮಹತ್ತ್ವ್ವವನ್ನು ತಿಳಿಸುವ ಮುಂಡಕ; ಶಿಷ್ಯರ ಪ್ರಶ್ನೆಗಳಿಗೆ ಗುರು ಪಿಪ್ಪಲಾಗಿ ಕೊಡುವ ಉತ್ತರಗಳ ರೂಪದ ಪ್ರಶ್ನ; – ಹೀಗೆ ಮೂಲದಲ್ಲಿ ಗದ್ಯರೂಪದಲ್ಲಿರುವ ಈ ಐದು ಉಪನಿಷತ್‍ಗಳನ್ನು ಕಯ್ಯಾರರು ಪದ್ಯರೂಪದಲ್ಲಿ ಭಾಷಾಂತರಿಸಿದ್ದಾರೆ.

ಶಾಂತಿ ಮಂತ್ರವಲ್ಲದೆ ಒಟ್ಟು ಹದಿನೆಂಟು ಮಂತ್ರಗಳಿರುವ  ಈಶಾವಾಸ್ಯೋಪನಿಷತ್ತು, ಗಾತ್ರದಲ್ಲಿ ಉಪನಿಷತ್ತುಗಳಲ್ಲೇ ಕಿರಿದಾದುದು. ಆದರೆ ಆಳ-ವಿಸ್ತಾರಗಳಲ್ಲಿ ಅರ್ಥಗಾಂಭೀರ್ಯದಲ್ಲಿ ಪ್ರಾತತ್ವದಲ್ಲಿ ಅತ್ಯಂತ ಹಿರಿದಾದುದು. ಇದರಲ್ಲಿ ಅಡಕವಾಗಿರುವ ತತ್ತ್ವ್ವಗಳು ಸರ್ವಾಂಗಪರಿಪೂರ್ಣವಾದುದು. ತ್ಯಾಗವೇ ನಿಜವಾದ ಭೋಗವೆಂಬ ಈಶೋಪನಿಷತ್ತಿನ ಬೋಧನೆ ಮಹಾತ್ಮ ಗಾಂಧಿ, ವಿನೋಬಾ ಭಾವೆಯಂತಹವರಿಗೂ ಜೀವನದ ದಿಕ್ಪಥÀಗಳಾಗಿದ್ದವು ಎಂದರೆ ತಪ್ಪಾಗದು. ಈ ಉಪನಿಷತ್ತಿನ 15ನೇ ಮಂತ್ರವು ಮಹಾಮಂತ್ರವೆನಿಸಿದೆ.

ಹೇ ಪೂಷಣನೆ, ಹಿರಣ್ಮಯ ಪಾತ್ರದಿಂದಲದೊ
ಸತ್ಯದಾ ಮುಖ ಮುಚ್ಚಿಹೋಗಿರುವುದು;
ಎಚ್ಚರದಿ ನೀನು ಮುಚ್ಚಳವನ್ನು ತೆಗೆವುದೊ
ಸತ್ಯಕಾಮಗೆ ಎನಗೆ ಕಾಣಲಹುದು

ಎಂದು ಕಯ್ಯಾರರು ಅನುವಾದಿಸಿದ್ದಾರೆ. ಅಂದರೆ ಲೋಕದಲ್ಲಿ ಸತ್ಯವು ಹುದುಗಿಕೊಂಡಿದೆ. ಅದನ್ನು ಮೋಹವೆಂಬ ಬಂಗಾರದ ಮುಚ್ಚಳ ಆವರಿಸಿಕೊಂಡಿರುವುದು. ನಮಗೆ ಸತ್ಯದ ದರ್ಶನವಾಗಬೇಕು. ಅದಕ್ಕಾಗಿ ಬಂಗಾರದ ಮುಚ್ಚಳವನ್ನು ತೆಗೆಯಬೇಕೆಂಬ ಪ್ರಾರ್ಥನೆ ಇಲ್ಲಿದೆ. ಅಂದರೆ ಲೌಕಿಕವಾದ ಮೋಹವನ್ನು ಕಳಚಿ ಅಲೌಕಿಕವಾದ ಬ್ರಹ್ಮಾನಂದವನ್ನು ಬಯಸುವ ಬೇಡಿಕೆ ಇದಾಗಿದೆ.

“ರೈ ಅವರನ್ನು ಅರಿಯದ ಕಾವ್ಯರಸಿಕರು ಯಾರಿದ್ದಾರೆ. ಆಧುನಿಕ ಕನ್ನಡ ರಸಪ್ರಪಂಚದಲ್ಲಿ; ರಾಜಕೀಯ, ಪ್ರಾಂತೀಕರಣ, ಶಿಕ್ಷಣ, ರಾಷ್ಟ್ರೀಯತೆ, ವಾದ, ವಿವಾದ, ಜನಜಾಗೃತಿ ಈ ಷಡಂಗಗಳನ್ನು ಸಮನ್ವಯಿಸಿಕೊಂಡ ಸಾಹಿತ್ಯ ಸಾಧನೆ ಕವಿವರ್ಯ ರೈ ಅವರದು. ಕರಾವಳಿಯ ಆಧುನಿಕ ಮಹಾಕವಿಯೆನ್ನಬಹುದು ಕಯ್ಯಾರರನ್ನು.” –    ಶ್ರೀ ಗೌರೀಶ ಕಾಯ್ಕಿಣಿ

ಗದ್ಯರೂಪದಲ್ಲಿರುವ ಇಂತಹ ಸಂಕೀರ್ಣರೂಪದ ಉಪನಿಷದ್ವಾಕ್ಯಗಳನ್ನು ಕಯ್ಯಾರರು ಬಹಳ ಸರಳವಾಗಿ, ಸಂಕ್ಷಿಪ್ತವಾಗಿ ಹಾಗೂ ಅರ್ಥಗರ್ಭಿತವಾಗಿ ಕನ್ನಡಕ್ಕೆ ಕಾವ್ಯಮಯವಾಗಿ ಅನುವಾದಿಸಿದ್ದಾರೆ. ಈ ಕಾವ್ಯೋಪನಿಷತ್ ‘ಪಂಚಮೀ’ ಕನ್ನಡಸಾಹಿತ್ಯದಲ್ಲೇ ಒಂದು ವಿಶಿಷ್ಟ ಬರಹ ಎನ್ನಬಹುದು.  ಉಪನಿಷತ್ತಿನ ಈ ಕನ್ನಡಾನುವಾದಲ್ಲಿನ ಕಾವ್ಯರಚನಾ ಕಾರ್ಯವನ್ನು ಬನ್ನಂಜೆ ಗೋವಿಂದಾಚಾರ್ಯರು ಶ್ಲಾಘಿಸಿದ್ದು ಹೀಗೆ: “ತೀರ ಗಹನವಾದ ಉಪನಿಷದ್‍ಪ್ರಪಂಚವನ್ನು ಕಯ್ಯಾರರ ‘ಪಂಚಮೀ’ ಲಲಿತ ಕನ್ನಡದಲ್ಲಿ ಸರಳಗೊಳಿಸಿ ನಮ್ಮ ಮುಂದಿಡುತ್ತದೆ. ಕಯ್ಯಾರರದು ತೀರ ಹಳಗನ್ನಡವೂ ಅಲ್ಲ, ಹೊಸಗನ್ನಡವೂ ಅಲ್ಲ – ನಡುಗನ್ನಡ. ಉಪನಿಷತ್ತುಗಳ ಸಂಸ್ಕೃತವೂ ಅಷ್ಟೇ; ಋಗ್ವೇದದ ಪ್ರಾಚೀನ ಸಂಸ್ಕೃತವೂ ಅಲ್ಲ. ಮಹಾಕಾವ್ಯಗಳ ನವೀನ ಸಂಸ್ಕೃತವೂ ಅಲ್ಲ. ನಡುಗಾಲದ ಸಂಸ್ಕೃತ. ಸಂಸ್ಕೃತ ಪದಗಳು ಅನುವಾದಕ್ಕೆ ಒಗ್ಗುವಂಥವು; ಉಪನಿಷತ್ತಿನ ಭಾಷೆಯಂತೂ ತೀರ ಅರ್ಥಗರ್ಭಿತ. ಅದನ್ನು ಪದಶಃ ಇನ್ನೊಂದು ಭಾಷೆಯಲ್ಲಿ  ಸೆರೆಹಿಡಿಯುವುದು ಅಸಾಧ್ಯ. ಅಂತಹ ಸಂದರ್ಭಗಳಲ್ಲಿ ಕಯ್ಯಾರರು ಮೂಲಪದಗಳನ್ನೆ ಉಳಿಸಿಕೊಂಡು ಬಿಡುತ್ತಾರೆ. ಪದ್ಯಗಳ ಭಾವಕ್ಕೆ ತಕ್ಕಂತೆ ಲಯದ ನಡೆಯನ್ನು ಬದಲಿಸುವ ಕಯ್ಯಾರರ ತಂತ್ರ ಯಶಸ್ವಿ. ‘ಪೀತೋದಕಾ ಜಗ್ಧತೃಣಾ| ದುಗ್ಧದೋಹಾ ನಿರಿಂದ್ರಿಯಾಃ| ಅನಂದಾ ನಾಮ ತೇ ಲೋಕಾಸ್ತಾನ್ ಸ ಗಚ್ಛತಿ ತಾ ದದತ್’  ಮೂಲದ ಈ ಅನುಷ್ಟುಪ್ ಪದ್ಯ ಕಯ್ಯಾರರ ಕನ್ನಡದಲ್ಲಿ ಹೀಗೆ ರೂಪುಗೊಂಡಿದೆ – ‘ನೀರು ಹೀರಿ ಹುಲ್ಲನು ಮೇದು, ನೆರೆ ಹಾಲು ಹಿಂಡುವಂತೆ ಜರಡು| ಹಸುವ ನೀವ ನರನಾವನವ ಪೊಗುವ| ನಂದವಿರತದ ಜಗ ಬರಡು’ ಎಂದು. ಮೂಲದ ನಿರಿಂದ್ರಿಯಾಃ  ಎಂಬ ನಾಕಕ್ಷರದ ಎಲ್ಲ ಭಾವಗಳÀನ್ನು ಕನ್ನಡದ ‘ಜರಡು’ ಎಂಬ ಮೂರಕ್ಷರದಲ್ಲಿ ಸೆರೆಹಿಡಿದ ಸೊಬಗು ಅನ್ಯಾದೃಶ್ಯವಾದದ್ದು. ಪದ್ಯದಲ್ಲಿ ಪ್ರಾಸ ಅರ್ಥಕ್ಕೆ ಪೋಷಕವಾಗಿ ಬಂದಾಗ ಹೇಗೆ ಒಪ್ಪ ನೀಡುತ್ತದೆ ಎನ್ನುವುದಕ್ಕೂ ಇದೊಂದು ಉದಾಹರಣೆ. ಊಧ್ರ್ವಮೂಲಮಧಃಶಾಖಂ ಏಷೋಶ್ವತ್ಥಃ ಸನಾತನಃ’  – ತಲೆಕೆಳಗಾದ ಈ ವಿಶ್ವಾಶ್ವತ್ಥ ಕಯ್ಯಾರರ ಕೈಯಲ್ಲಿ ಹೀಗೆ ರೂಪುಗೊಂಡಿದೆ: ‘ಬೇರು ಬಿಟ್ಟಿದೆ ಮೇಗೆ ಗೆಲ್ಲು ಹಬ್ಬಿದೆ ಕೆಳಗೆ| ಅಶ್ವತ್ಥವಿದು ಸನಾತನವೆಂಬುದು ವೈ.’”

ಅವರ ಸಾಹಿತ್ಯಿಕ ರಚನೆಗಳಲ್ಲಿ ಗದ್ಯ, ಪದ್ಯ ಸಾಹಿತ್ಯ ವಿಮರ್ಶೆಗಳು, ನಾಟಕ, ಶಿಶುಸಾಹಿತ್ಯ, ವ್ಯಾಕರಣ –ಮುಂತಾದ ವಿವಿಧ ಪ್ರ್ರಾಕಾರಗಳನ್ನು ಕಾಣಬಹುದು. ಕಯ್ಯಾರರು ಮಲಯಾಳಂನಿಂದ ಭಾಷಾಂತರಿಸಿರುವ ‘ಕುಮಾರನ್ ಆಶಾನರ ಮೂರು ಕಥೆಗಳು’ (1973) ಹಾಗೂ ಪಿ.ಕೆ. ಪರಮೇಶ್ವರನ್ ನಾಯರ್ ಬರೆದ ‘ಮಲಯಾಳಂ ಸಾಹಿತ್ಯ ಚರಿತ್ರೆ’ (1976) ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾಗಿವೆ.  ಅವರ ಅನೇಕ ಸಾಹಿತ್ಯಕೃತಿಗಳು ಮಲೆಯಾಳಂ, ಹಿಂದಿ, ಇಂಗ್ಲಿಷ್ ಭಾಷೆಗಳಿಗೆ ಭಾಷಾಂತರಗೊಂಡಿದೆ. ಅವರ ‘ಮಹಾಕವಿ ಗೋವಿಂದ ಪೈ’ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ; ‘ಚೇತನ’, ‘ಶತಮಾನದ ಗಾನ’, ‘ಶ್ರೀಮುಖ’, ‘ಪುನರ್ನವ’, ‘ಕೊರಗ’À ಕೃತಿಗಳು ಕೇರಳದ ವಿಶ್ವವಿದ್ಯಾಲಯದಲ್ಲಿ; ಹಾಗೂ ಪಠ್ಯಪುಸ್ತಕಗಳ ರಾಷ್ಟ್ರೀಕರಣಕ್ಕಿಂತ ಹಿಂದೆ ಹೈದರಾಬಾದ್, ಕೊಡಗು, ದಕ್ಷಿಣ ಕನ್ನಡ ಭಾಗಗಳಲ್ಲಿ ಅವರ ‘ನವೋದಯ ವಾಚನಮಾಲೆ’ – ಮುಂತಾದವು ಜನಪ್ರಿಯ ಪಾಠ್ಯವಾಗಿ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸಿದ್ದವು.

ರಾಷ್ಟ್ರೋತ್ಥಾನ ಸಾಹಿತ್ಯದ ‘ಭಾರತ-ಭಾರತಿ ಪುಸ್ತಕ ಸಂಪದಮಾಲೆ’ ಯಲ್ಲಿ ‘ಪರಶುರಾಮ’ ಎಂಬ ಪುಸ್ತಕವನ್ನು ಕಯ್ಯಾರರು ಬರೆದಿದ್ದಾರೆ. ವಸಾಹತುಶಾಹಿಯ ವಿರುದ್ಧದ ರಾಷ್ಟ್ರೀಯ ಚಳವಳಿಯಲ್ಲಿ ಹೋರಾಡಿದ ರಾಜಕೀಯ, ಸಾಂಸ್ಕøತಿಕ ರಂಗದ 22 ಮಹನೀಯರ ಸಂಕ್ಷಿಪ್ತ ಜೀವನಚರಿತ್ರೆಗಳಿರುವ ‘ರತ್ನರಾಶಿ’ ಹಾಗೂ ‘ಜೈಮಿನಿ ಭಾರತ’ದ ಕಥೆಯ ಸಮಗ್ರತೆಯ ಧಾಟಿಯಲ್ಲೇ ಮೂಡಿಬಂದ ಗದ್ಯಾನುವಾದ ‘ಲಕ್ಷ್ಮೀಶನ ಕಥೆಗಳು’ ಸೇರಿದಂತೆ ಇನ್ನೂ ಕೆಲ ಅವರ ಸಾಹಿತ್ಯಕೃತಿಗಳು ಪ್ರಾಥಮಿಕದಿಂದ ಸ್ನಾತಕೋತ್ತರ ತರಗತಿಗಳವರೆಗೆ ಪಠ್ಯಗಳಾಗಿದ್ದವು.

ಜನನ :
ಕಯ್ಯಾರ ಕಿಞ್ಞಣ್ಣ ರೈ ಜನಿಸಿದ್ದು, 1915ರ ಜೂನ್ 8ರಂದು; – ಅವರೇ ಹೇಳಿಕೋಳ್ಳುವಂತೆ, ‘ಕ್ರಾಂತಿಕಾಲದ ಕುಮಾರಕನಾಗಿ ಹುಟ್ಟಿದೆನು ಮೊದಲಿನ ಮಹಾಯುದ್ಧ ಮಸಗುವಂದು’ – ಕಾಸರಗೋಡಿನ ಪೆರಡಾಲ ಗ್ರಾಮದ ಕಯ್ಯಾರದಲ್ಲಿ. ಅವರ ತಂದೆ ದುಗ್ಗಪ್ಪ ರೈ, ತಾಯಿ ದೇಯಕ್ಕ. ಕಿಞ್ಞಣ್ಣ ರೈಗಳು ಬೇಟೆ, ಕಂಬಳ-ಕೋಲ, ಚಂಡೆ-ಮದ್ದಳೆಯ ಮಿಳಿತದ ತಾಳಮದ್ದಳೆ-ಯಕ್ಷಗಾನದ ಸುಗ್ಗಿನಲ್ಲಿ, ನಿತ್ಯ ರಾಮಾಯಣ-ಮಹಾಭಾರತ ಪಾರಾಯಣ ಕೇಳುತ್ತ; ಸರಸ್ವತಿಯೇ ಎದ್ದು ಕುಣಿಯುವಂತೆ ಅಜ್ಜ ಶಂಕರ ಆಳ್ವರು ಓದುತ್ತಿದ್ದ ಜೈಮಿನಿಯನ್ನು ಗುನುಗುನಿಸುತ್ತ, ಅಳಿಯಕಟ್ಟಿನ ಬಂಟ ಸಮುದಾಯದ ಕೃಷಿಕ ಕುಟುಂಬದಲ್ಲಿ ಕಿಞ್ಞಣ್ಣ ರೈಗಳ ಜನನವಾಯಿತು. ಇಂತಹ ಸಾತ್ತ್ವಿಕ ವಾತಾವರಣದಲ್ಲಿ ಬೆಳೆದುದರಿಂದ ರೈಯವರನ್ನು ಪರಂಪರಾಗತ ಸಂಸ್ಕೃತಿಯಲ್ಲಿ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿತು.

“ಪ್ರಾಮಾಣಿಕತೆ, ನಿಷ್ಕಾಪಟ್ಯ, ದಿಟ್ಟತನ, ಸ್ಪಷ್ಟತೆ, ಲಯ ಮಾಧುರ್ಯ, ಭಾವಚಿಂತನಗಳ ಹಾಳಿತ ಸಮ್ಮಿಳನ ಕಯ್ಯಾರ ಕವಿತೆಗಳ ಜೀವಾಳ. ಸಹ್ಯಾದ್ರಿಯ ಔನ್ನತ್ಯವೂ, ಸಾಗರದ ಗಾಂಭೀರ್ಯವೂ, ವನಸೌಂದರ್ಯದ ವೈವಿಧ್ಯವೂ ನೆಲದ ಕಂಪೂ ಇವುಗಳಲ್ಲಿ ಮೇಳೈಸಿವೆ.” –    ಡಾ|| ದೇಜಗೌ

“ಮನಸ್ಸಿನ ಬಾಗಿಲನ್ನು ತೆರೆದುಕೊಂಡರೆ ರೈಯವರ ಅದ್ಭುತ ಅದಮ್ಯ ಚೈತನ್ಯಯುಕ್ತ ಸ್ಫೂರ್ತಿ ದಾಯಕ ನಿಸರ್ಗಜನ್ಯ ಕಾವ್ಯ ಪ್ರತಿಭೆಯನ್ನು ಕಾಣಬಹುದು. ಅವರು ಕನ್ನಡ ಧ್ವಜವನ್ನು ಎತ್ತಿ ಹಿಡಿದ ಹಿರಿಯಣ್ಣ.” –    ಪ್ರೊ|| ಜಿ. ಎಸ್. ಸಿದ್ಧಲಿಂಗಯ್ಯ

“ರೈಯವರ ಕಾವ್ಯ ಸಂದೇಶ ನಮ್ಮ ಜನಕ್ಕೆ ಬಹಳ ಹಿಂದೆಯೇ ತಲಪಿದೆ. ಅವರ ದುಡಿಮೆಗೆ ಮೂರು ಮುಖ್ಯ ಕ್ಷೇತ್ರಗಳು, ಶಿಕ್ಷಣ, ಕಾವ್ಯ, ರಾಜಕೀಯ; ಮೂರರಲ್ಲಿಯೂ ಅವರ ಯಶಸ್ಸು ದೊಡ್ಡದು; ರೈ ನಮ್ಮ ಸಂಪತ್ತು.” – ಡಾ|| ಹಾ. ಮಾ. ನಾ.

ಕಯ್ಯಾರರ ಆರಂಭದ ವಿದ್ಯಾಭ್ಯಾಸ ಬದಿಯಡ್ಕದ ಪ್ರಾಥಮಿಕ ಶಾಲೆ ಮತ್ತು ಅಗಲ್ಪಾಡಿಯ ಸಂಸ್ಕೃತ ಶಾಲೆಗಳಲ್ಲಿ ನಡೆಯಿತು. ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು, ಮಂಗಳೂರಿನ ಮಿಶನ್ ಹೈಸ್ಕೂಲುಗಳಲ್ಲಿ ವಿದ್ಯಾಭ್ಯಾಸ ಪೂರೈಸಿದರು. ಸಂಸ್ಕೃತವೆಂದರೆ, ಅದು ಬ್ರಾಹ್ಮಣರ ಭಾಷೆ ಎಂದು ದೂರವಿದ್ದ ಕಾಲದಲ್ಲಿ ಸಂಸ್ಕೃತಾಭ್ಯಾಸ ಮಾಡಿ ಅರಗಿಸಿಕೊಂಡರು. ತರಗತಿಯಲ್ಲಿ ತಾನೊಬ್ಬನೇ ಬ್ರಾಹ್ಮಣೇತರನಾದರೂ ಅಧ್ಯಾಪಕರ ಪ್ರೀತಿಯಿಂದ, ಛಲದಿಂದ ಸಂಸ್ಕೃತ ಕಲಿತು ಬಂಟನ ಬಾಯಲ್ಲೂ ಸಂಸ್ಕೃತ ಶ್ಲೋಕಗಳು ಸಲೀಸಾಗಿ ಹೊರಬರುವಂತೆ ಮಾಡಿಕೊಂಡವರು ಕಯ್ಯಾರರು. 1920ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಮನ್ನಣೆ ಪಡೆದ ನೀರ್ಚಾಲಿನ ಮಹಾಜನಪಾಠಶಾಲೆ (ಕಾಲೇಜು)ಯಲ್ಲಿ ಸಂಸ್ಕೃತ-ಕನ್ನಡ ಉಭಯ ಭಾಷೆಗಳಿಗೆ ಸಮಾನ ಪ್ರಾಧಾನ್ಯವಿರುವ ‘ಎ’ ವಿದ್ವಾನ್ ತರಗತಿಯನ್ನು ಸೇರಿ 1935ರಲ್ಲಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾದರು. ತಮ್ಮ ಸ್ನಾತಕ, ಸ್ನಾತಕೋತ್ತರ ಪದವಿಗಳನ್ನು ಖಾಸಗಿ ಅಧ್ಯಯನದ ಮೂಲಕ ಪÀÇರೈಸಿದರು.

ಪತ್ರಿಕೋದ್ಯಮ :
ಸಂಸ್ಕೃತ-ಕನ್ನಡ ವಿದ್ವಾನ್ ಆದ ಕೈಯ್ಯಾರರು ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸಕ್ಕಾಗಿ ಮಂಗಳೂರಿನ ಬಾಸ್ಸೆಲ್ ಹೈಸ್ಕೂಲ್ ಸೇರಿದರು. 1935ರಲ್ಲಿ ಎಸ್.ಎಸ್.ಎಲ್.ಸಿ. ಮುಗಿಸಿದ ರೈ, ತಮ್ಮ ಯೌವ್ವನೋದಯದ ಚಟುವಟಿಕೆಗಳ ಕೇಂದ್ರವಾಗಿಸಿಕೊಂಡದ್ದು ಮಂಗಳೂರನ್ನು. ಈ ಅವಧಿಯಲ್ಲಿ ಅವರು ಹೊಟ್ಟೆಪಾಡಿಗಾಗಿ ಆಯ್ದುಕೊಂಡದ್ದು ಪತ್ರಿಕೋದ್ಯೋಗ. ದೇಶ ಪಾರತಂತ್ರದ ಕುಣಿಕೆಯಲ್ಲಿ ಒದ್ದಾಡುತ್ತಿದ್ದ ಅವಧಿಯಲ್ಲಿ ಜನಜಾಗೃತಿಯ ಒಂದು ಪ್ರಮುಖ ಮಾಧ್ಯಮವಾಗಿ ಪತ್ರಿಕೋದ್ಯಮ ರೂಪುಗೊಂಡಿತ್ತು. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಕಿಞ್ಞಣ್ಣ ರೈ ದೇಶಭಕ್ತಿಯ ಧÀ್ವನಿಯನ್ನು ತಮ್ಮ ಪತ್ರಿಕಾಬರಹದಲ್ಲೂ ತುಂಬಿದರು. 1938ರಿಂದ 1944ರವರೆಗೆ ಮಂಗಳೂರಿನಲ್ಲಿ ಪತ್ರಿಕೋದ್ಯೋಗಿಯಾಗಿದ್ದ ಅವರು ‘ಪ್ರಭಾತ’ ಮತ್ತು ‘ಸ್ವದೇಶಾಭಿಮಾನ’ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ ದುಡಿದರು.

ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಹುಟ್ಟಿಕೊಂಡ ಕಾವ್ಯಕೃಷಿಯ ಗೀಳು ಮಂಗಳೂರಿಗೆ ಬಂದ ನಂತರ ಒಂದು ಸ್ವರೂಪವನ್ನು ಪಡೆದುಕೊಂಡಿತು. ವೃತ್ತ್ತಿಯಲ್ಲಿ ಪತ್ರಿಕೋದ್ಯಮಿಯಾದರೂ ರೈಗಳು ಪ್ರವೃತ್ತಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಪತ್ರಿಕೋದ್ಯಮಿಯಾಗಿ ಸ್ವಾತಂತ್ರ್ಯಹೋರಾಟಕ್ಕೆ ಸ್ಫೂರ್ತಿಯುತ ಲೇಖನ, ಕವನಗಳನ್ನು ಬರೆದರು. ಇದೇ ಅವಧಿಯಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದು ಪ್ರಕಟಿಸಿದರು. ಮಂದಾರ ರಾಮಾಯಣವೂ ಸೇರಿದಂತೆ ಅನೇಕ ಮಹತ್ತ್ವದ ಕೃತಿಗಳಿಗೆ ಅವರು ಮುನ್ನುಡಿಯನ್ನೂ ಬರೆದಿದ್ದಾರೆ. ಸಮಾಜದ ಕೆಲಸಗಳಿಗೆ ಸಾಹಿತ್ಯ ಹಾಗೂ ಭಾಷೆ ಸಾಧ್ಯವಾದಷ್ಟು ಸಹಕಾರ ನೀಡಬೇಕು. ಅದು ಸಾಹಿತ್ಯ ಮತ್ತು ಸಾಹಿತ್ಯಕಾರನ ಕರ್ತವ್ಯ – ಎನ್ನುವುದು ರೈ ಅವರ ಮನದ ಇಂಗಿತ. ‘ದಕ್ಷಿಣ ಕನ್ನಡ ಜಿಲ್ಲಾ ಪತ್ರ್ರಿಕೊದ್ಯೋಗಿ ಸಂಘ’ ಸ್ಥಾಪಿಸಿ, 1943ರಲ್ಲಿ ಅದರ ಕಾರ್ಯದರ್ಶಿಯಾದರು. ಅನೇಕ ರಾಜ್ಯಮಟ್ಟದ ಪತ್ರಿಕೋದ್ಯಮ ಸಮ್ಮೇಳನಗಳನ್ನು ಯಶಸ್ವಿಯಾಗಿ ಸಂಘಟಿಸಿದ ಕೀರ್ತಿ ಕಯ್ಯಾರರದ್ದು.

ಅಧ್ಯಾಪನ ಮತ್ತು ಕೃಷಿ:
ಗಾಂಧಿ ಆದರ್ಶಗಳಿಂದ ಪ್ರಭಾವಿತರಾದ ಕಿಞ್ಞಣ್ಣ ರೈ, ‘ಹಳ್ಳಿಗಳಿಗೆ ಹೋಗಿ ಕೆಲಸ ಮಾಡಿ’ ಎಂಬ ಗಾಂಧಿ ಆಶಯದಂತೆ 1944ರಲ್ಲಿ ಮಂಗಳೂರಿನಿಂದ ಪುನಃ ಊರಿಗೆ ಬಂದು ನೆಲೆಸಲು ನಿಶ್ಚಯಿಸಿದರು. ಆಗ ಅವರ ಕೈಹಿಡಿದದ್ದು ಅಧ್ಯಾಪನ ಮತ್ತು ಬಳುವಳಿಯಾಗಿ ಬಂದ ಕೃಷಿ. ಆಕಸ್ಮಿಕವಾಗಿ ಅರಸಿಬಂದ ಅಧ್ಯಾಪನ ವೃತ್ತಿಯನ್ನು ಕಯ್ಯಾರರು ದೀರ್ಘಕಾಲ ಕೈಹಿಡಿದವರು. ಪೆರಡಾಲದ ನವಜೀವನ ಹೈಸ್ಕೂಲಿನಲ್ಲಿ 32 ವರ್ಷ ಶಿಕ್ಷಕರಾಗಿ ದುಡಿದ ಕಯ್ಯಾರ ಕಿಞ್ಞಣ್ಣ ರೈ ಅವರಿಗೆ 1969ರಲ್ಲಿ ಅಂದಿನ ರಾಷ್ಟ್ರಪತಿ ವಿ.ವಿ. ಗಿರಿ ಅವರು ‘ಶ್ರೇಷ್ಠ ಶಿಕ್ಷಕ’ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದರು. ಅವರ ಈ ಸುದೀರ್ಘ ಅಧ್ಯಾಪನ ಜೀವನದಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಕನ್ನಡದಲ್ಲಿ ಅನುತ್ತೀರ್ಣನಾಗಿಲ್ಲ ಎಂಬುದು ಕಯ್ಯಾರರ ಸಂತೃಪ್ತ ಧ್ವನಿ. ಕಯ್ಯಾರರು, ‘ಕಾಸರಗೋಡು ಜಿಲ್ಲಾ ಸೆಕೆಂಡರಿ ಶಾಲಾ ಅಧ್ಯಾಪಕ ಸಂಘ’ದ ಅಧ್ಯಕ್ಷರಾಗಿ, ಉತ್ತರ ಕೇರಳ ಅಧ್ಯಾಪಕ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದವರು.

ಅಧ್ಯಾಪನವೃತ್ತಿಯ ಜೊತೆಜೊತೆಗೆ ವಂಶದಿಂದ ಬಳುವಳಿಯಾಗಿ ಬಂದ ಕೃಷಿ ಚಟುವಟಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಂಡ ಕಯ್ಯಾರರು ನೇಗಿಲಯೋಗಿಯೂ ಹೌದು. ತಾನು ರೈತಕವಿ ಎಂದು ಅಭಿಮಾನ ಪಡುವ ಕೈಯಾರರಿಗೆ ಲೇಖನಿಯೂ ಒಂದೇ, ನೇಗಿಲೂ ಒಂದೇ. ಎರಡರಲ್ಲೂ ಆಳವಾದ ಜೀವನಶ್ರದ್ಧೆ ಇಟ್ಟವರು ಅವರು. ಮಣ್ಣಿನ ಮಗನಾಗಿ ಕರ್ತವ್ಯ ಪೂರೈಸುವ ಹುಮ್ಮಸ್ಸಿನ ಜೊತೆ ಸ್ವಾರ್ಥ-ಅನೀತಿಯ ವಿರುದ್ಧ ಸಡ್ಡುಹೊಡೆಯುವ, ಟೀಕಿಸುವ ಧೈರ್ಯವೂ ಅವರಲ್ಲಿತ್ತು.

ಕಯ್ಯಾರರು ಕನ್ನಡನಾಡಿನ ಶ್ರೇಷ್ಠವಾಗ್ಮಿಗಳಲ್ಲೂ ಒಬ್ಬರಾಗಿದ್ದರು. ಅವರ ಭಾವಪೂರ್ಣ ಸಿರಿಕಂಠದಿಂದ ಹೊರಹೊಮ್ಮುವ ಅಸ್ಖಲಿತ ವಾಕ್‍ಶಕ್ತಿ ಎಂಥ ಸಭೆಯನ್ನೂ ನಿಯಂತ್ರಿಸಬಲ್ಲದು. ಅವರ ಬರವಣಿಗೆಗಳಂತೆಯೇ ಅವರ ಭಾಷಣವೂ ನಿಸ್ಸಂದಿಗ್ಧ ಎಂದು ಹಲವರು ಮೆಚ್ಚಿಕೊಂಡಿದ್ದುಂಟು. ಕೈಯಾರರದ್ದು ತುಂಬು ಸಂಸಾರ. ಕಯ್ಯಾರ-ಉಞ್ಞಕ್ಕೆ ದಂಪತಿಗಳಿಗೆ 8 ಜನ ಮಕ್ಕಳು- ಆರು ಗಂಡು, 2 ಹೆಣ್ಣು. ಕಯ್ಯಾರರು ಹಾಕಿಕೊಟ್ಟ ಆದರ್ಶದಂತೆ ನಡೆಯುತ್ತಿರುವ ಕುಟುಂಬ ಇಂದಿಗೂ ಸುಖೀಸಂಸಾರ.

ಹೋರಾಟಗಾರ:
ಕಾಸರಗೋಡಿನೊಂದಿಗೆ ಇಂದಿಗೂ ಇಡೀ ಕನ್ನಡ ನಾಡು ನೆನಪಿಸಿಕೊಳ್ಳುವ ಹೆಸರು ಕಯ್ಯಾರ ಕಿಞ್ಞಣ್ಣ ರೈಗಳದ್ದು. ಕಿಞ್ಞಣ್ಣ ರೈಗಳು ಹೇಗೆ ಕವಿಯೋ ಹಾಗೆಯೇ ಹೋರಾಟಗಾರರು. ಅವರ ಬರವಣಿಗೆಗಳಲ್ಲಿ ಮೂಡಿರುವುದು ಅವರ ಜೀವಿತಕಾಲದ ಸಮಾಜ-ನಾಡು-ದೇಶದಲ್ಲಿನ ಸನ್ನಿವೇಶಗಳಿಂದ ಅವರು ಸ್ವತಃ ಬದುಕಿನಲ್ಲಿ ಅನುಭವಿಸಿದ ನೋವು-ನಲಿವು-ಭಾವಗಳ ಅಕ್ಷರರೂಪಗಳೇ ಆಗಿವೆ. ಅವರೊಬ್ಬ ಕವಿಯಷ್ಟೇ ಹೋರಾಟಗಾರರೂ ಆಗಿದ್ದರು.
ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯ ಚಳವಳಿಗಳಿಂದ ಕಯ್ಯಾರರು ಬಾಲ್ಯದಲ್ಲೇ ಆಕರ್ಷಿತರಾಗಿದ್ದರು. 1927ರಲ್ಲಿ ಗಾಂಧಿ ಮಂಗಳೂರಿಗೆ ಬರಲಿರುವುದನ್ನು ತಿಳಿದ, 5ನೇ ತರಗತಿಯಲ್ಲಿ ಓದುತ್ತಿದ್ದ, ರೈಗಳು ಅಧ್ಯಾಪಕರ ಸಹಕಾರದಿಂದ ‘ಸುಶೀಲಾ’ ಎಂಬ ಹಸ್ತಪತ್ರಿಕೆ ತಯಾರಿಸಿ ಗಾಂಧಿಗೆ ಸಲ್ಲಿಸಲು ಮಂಗಳೂರಿಗೆ ಬಂದು ನಿರಾಶೆಯಿಂದ ಹಿಂದಿರುಗಿದ್ದರು. 1934ರಲ್ಲಿ ಪಾದಯಾತ್ರೆಯಲ್ಲಿ ಮಂಗಳೂರಿನ ತನಕ ಬಂದಿದ್ದ ಗಾಂಧಿಜೀಯವರ ದರ್ಶನ ಮಾಡಿದ ಉತ್ಸಾಹದಲ್ಲಿ ‘ಗಾಂಧಿದರ್ಶನ’ ಎಂಬೊಂದು ಕವಿತೆಯನ್ನೂ ಬರೆದಿದ್ದರು.ವಿದ್ಯಾಭ್ಯಾಸಕ್ಕಾಗಿ ಮಂಗಳೂರಿಗೆ ಬಂದ ನಂತರ ಅಲ್ಲಿನ ಅನೇಕ ಸ್ವಾತಂತ್ರ್ಯಹೊರಾಟಗಾರರ ಸಂಪರ್ಕ  ರೈ ಅವರಿಗೆ ಲಭಿಸಿತು. ಇದರಿಂದ ಸ್ಫೂರ್ತಿಗೊಂಡ ಕಯ್ಯಾರರು 1935ರಲ್ಲಿ ಕಾಂಗ್ರೆಸ್ ಕಮಿಟಿಯ ಸದಸ್ಯರಾದರು. 1947ರ ತನಕ ನಿರಂತರ ಕಾಂಗ್ರೆಸ್ ಸದಸ್ಯನಾಗಿ ದುಡಿದರು.

ಸತ್ಯಾಗ್ರಹದಲ್ಲಿ ಭಾಗವಹಿಸಬೇಕೆಂಬ ಉತ್ಕಟ ಆಕಾಂಕ್ಷೆ ಕಯ್ಯಾರರನ್ನೂ ಕಾಡಿತ್ತು. 1940-41ರಲ್ಲಿ ಸತ್ಯಾಗ್ರಹಕ್ಕಾಗಿ ಭಾಗವಹಿಸಲು ಗಾಂಧಿಯಿಂದ ಒಪ್ಪಿಗೆ ಪತ್ರವನ್ನೂ ತಂದರು. ಆದರೆ ಕಾಂಗ್ರೆಸ್ ಮೂಲಕ ಅಧಿಕಾರಕ್ಕೆ ಹೋದವರು, ಕಾಂಗ್ರೆಸ್ ಕಮಿಟಿಯ ಮುಖ್ಯಸ್ಥರು ಮೊದಲು ಚಳವಳಿಯಲ್ಲಿ ಭಾಗವಹಿಸಬೇಕು, ನಂತರ ಇತರರ ಸರದಿ – ಎಂಬುದು ಗಾಂಧಿ ಅವರ ಆಶಯವಾಗಿತ್ತು. ಕಯ್ಯಾರರಿಗೆ ಕಾಂಗ್ರೆಸ್‍ನ ಯಾವುದೇ ಕಮಿಟಿಯ ಜವಾಬ್ದಾರಿಯಿಲ್ಲದಿರುವುದರಿಂದ ಕಾಯಬೇಕಾಯಿತು. ಆದರೆ ಕಯ್ಯಾರರ ಸರದಿ ಬರುವ ಸಮಯದಲ್ಲಿ ಕಾಸರಗೋಡು ನೆರೆ ಹಾವಳಿಗೆ ತುತ್ತಾಯಿತು. ಆ ಅವಧಿಯಲ್ಲಿ ಪತ್ರಿಕೋದ್ಯಮಿಯೂ ಆಗಿದ್ದ ಕಯ್ಯಾರರು ಜಿಲ್ಲೆಯಾದ್ಯಂತ ಸಂಚರಿಸಿ ನೆರೆಹಾವಳಿಯ ವರದಿ ಮಾಡಿದರು. ಈ ವರದಿಯ ವಿಷಯ ಮದ್ರಾಸ್ ಮೈಲ್, ಹಿಂದೂ ಪತ್ರಿಕೆಗಳಲ್ಲೂ ಪ್ರಕಟವಾಯಿತು. ಈ ನೆರೆನಿರ್ವಹಣಾ ಕಾರ್ಯದಲ್ಲಿ ಕೆಲಸ ಮಾಡುವಂತೆ ಕಯ್ಯಾರರಿಗೆ ಗಾಂಧಿ ಆದೇಶವಿತ್ತರು. ಹೀಗಾಗಿ ಸತ್ಯಾಗ್ರಹಕ್ಕೆ ಸಿದ್ಧವಾಗಿದ್ದ ಕಯ್ಯಾರರು ನೆರೆನಿರ್ವಹಣಾಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಜಿಲ್ಲೆಯ ಬೇರೆಬೇರೆ ಕಡೆ ಸಂಚರಿಸಿ ಉಡಲು ಬಟ್ಟೆ, ಉಣ್ಣಲು ಅನ್ನ ಧಾನ್ಯಗಳನ್ನು ಸಂಗ್ರಹಿಸಿ ನೆರೆಯಿಂದ ಪೀಡಿತರಾದವರ ನೆರವಿಗೆ ನಿಂತರು. ಈ ಬಗ್ಗೆ ನೆನಪಿಸಿಕೊಳ್ಳುವ ಕಯ್ಯಾರರು, “ಸೆರೆಮನೆಗೆ ಹೋಗಿದ್ದರೆ ನನಗೆ ಹೆಚ್ಚಿನ ರಾಜಕೀಯ ಪ್ರಾಶಸ್ತ್ಯ ಸಿಗುತ್ತಿತ್ತೇನೋ! ಆದರೆ ದುಃಖಿತರಾದ ನನ್ನ ಬಾಂಧವರ ಕಣ್ಣೀರನ್ನು ಒರೆಸುವ ಆ ಮಹಾಭಾಗ್ಯ ತಪ್ಪಿಯೇ ಹೋಗುತ್ತಿತ್ತು” – ಎನ್ನುತ್ತಾರೆ.

1942ರ ಸಮಯ. ಗಾಂಧಿ, ತಮ್ಮ ಎಂದಿನ ಸೌಮ್ಯತೆ ತೊರೆದು ‘ಮಾಡು ಇಲ್ಲವೇ ಮಡಿ’ ಎಂದು ಕರೆಕೊಟ್ಟಿದ್ದರು. ಗಾಂಧಿ ಕರೆಗೆ ಚಳವಳಿ ದೇಶಾದ್ಯಂತ ಪಸರಿಸಿತು. ಇದನ್ನು ಹತ್ತಿಕ್ಕುವ ಸಲುವಾಗ ಆಳುವ ಬ್ರಿಟಿಷರು ರಾಷ್ಟ್ರೀಯ ನಾಯಕರುಗಳನ್ನೆಲ್ಲ ಬಂಧಿಸಿ ಅಜ್ಞಾತವಾಸÀದಲ್ಲಿರಿಸಿತು. ಸರ್ಕಾರ, ಸತ್ಯಾಗ್ರಹಿಗಳ ಮೇಲೆ ದಬ್ಬಾಳಿಕೆಯನ್ನೂ ತೀವ್ರಗೊಳಿಸಿತು. ಆವೇಶದ ಭರದಲ್ಲಿ ಸರ್ವನಷ್ಟವಾಗದಂತೆ ತಡೆಯಲು ಕೆಲವರು ಹಿಂದುಳಿದು ಕೆಲಸ ಮಾಡುವಂತೆ ಕಾಂಗ್ರೆಸ್ ದುರೀಣರು ಆದೇಶವಿತ್ತರು. ಕಯ್ಯಾರರಿಗೂ ತೆರೆಮರೆಯಲ್ಲಿ ನಿಂತು ಕೆಲಸಮಾಡುವಂತೆ ಸೂಚನೆ ಬಂದದ್ದರಿಂದ ಈ ಬಾರಿಯೂ ಅವರು ಚಳವಳಿಯಿಂದ ದೂರವೇ ಉಳಿಯಬೇಕಾಯಿತು.

ವಿದ್ಯಾರ್ಥಿ ಯೂನಿಯನ್‍ನ ಕಾರ್ಯಕರ್ತರಾಗಿದ್ದ ಕಯ್ಯಾರರು ಮಂಗಳೂರಿನಲ್ಲಿ ಕೋರ್ಟ್ ಪಿಕೆಟಿಂಗ್  ಎಂದೇ ಹೆಸರಾದ ಜಿಲ್ಲಾ ಕೋರ್ಟಿನ ಬಹಿಷ್ಕಾರದ ರಾಷ್ಟ್ರೀಯ ಚಳವಳಿಗೆ ಯುವಕರನ್ನು, ವಿದ್ಯಾರ್ಥಿಗಳನ್ನು ಸಂಘಟಿಸಿ ಕೋರ್ಟ್‍ನ ಮುಂದೆ ಸತ್ಯಾಗ್ರಹ ನಡೆಸಿದರು. ವಿದ್ಯಾರ್ಥಿಗಳೇ ಪ್ರಮುಖ ಪಾತ್ರವಹಿಸಿದ್ದ ಈ ಚಳವಳಿಯನ್ನು ಹತೋಟಿಗೆ ತರಲು ಪೊಲೀಸರು ಅನೇಕ ವಿದ್ಯಾರ್ಥಿಗಳನ್ನು ಬಂಧಿಸಿದರು. ಕಯ್ಯಾರರನ್ನೂ ಬಂಧಿಸಲೆತ್ನಿಸಿದಾಗ ‘ತಾನು ಪತ್ರಿಕೋದ್ಯೋಗಿ; ವರದಿ ಮಾಡಲು ಬಂದಿದ್ದೇನೆ’ – ಎಂದು ಪೊಲೀಸರಿಂದ ತಪ್ಪಿಸಿಕೊಂಡಿದ್ದರು. ಕುದಿಯುತ್ತಿದ್ದ ಆವೇಶವನ್ನು ತಡೆದುಕೊಂಡೇ ಗುಪ್ತಚಟುವಟಿಕೆಯ ಮೂಲಕ ಜನಜಾಗೃತಿಯ ಕಾರ್ಯ ಮಾಡಿದ ತೃಪ್ತಿ ಕಯ್ಯಾರರಿಗಿದೆ. ‘ದೇಶದ ಸ್ವಾತಂತ್ರ್ಯವನ್ನು ಕಣ್ಣಾರೆ ಕಂಡೆನೆಂಬುದೇ ಎಲ್ಲಕ್ಕಿಂತಲೂ ಮಿಗಿಲಾದ ಸಂಪತ್ತು. ಅದಕ್ಕಾಗಿ ನಾನು ದೇವರಿಗೆ ಪರಮ ಋಣಿ’ – ಎಂದವರು ಕಯ್ಯಾರರು.

ಇತಿಹಾಸ ಕಾಲದಿಂದಲೂ ಕರ್ನಾಟಕದ ಜೊತೆಗೆ ಇದ್ದು, ಭಾಷೆ, ಸಂಸ್ಕೃತಿಗಳ ತನ್ನ ವೈಶಿಷ್ಟ್ಯವನ್ನು ಉಳಿಸಿಕೊಂಡು ತಾವು ಕರ್ನಾಟಕದವರು ಎಂದೇ ತಿಳಿದಿದ್ದ ಕಾಸರಗೋಡಿನ ಜನರಿಗೆ ರಾಜ್ಯ ಮರುವಿಂಗಡಣೆಯಲ್ಲಿ ಕೇರಳಕ್ಕೆ ಸೇರಿದಾಗ ಆಕಾಶವೇ ಕುಸಿದಂತಾಗಿತ್ತು. ಈ ಅನೀತಿಯ ವಿಂಗಡಣೆಯ ವಿರುದ್ಧ ಡಾ. ಪಿ.ಎಸ್. ಶಾಸ್ತ್ರಿ, ಡಾ. ಪಿ.ಎಸ್. ಭಟ್, ಬಿ.ಎಸ್. ಕಕ್ಕಿಲಾಯ, ಮಹಾಬಲ ಭಂಡಾರಿ ಮುಂತಾದವರ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಕಯ್ಯಾರ ಕಿಞ್ಞಣ್ಣ ರೈಗಳದೂ ಪ್ರಮುಖ ಪಾತ್ರವಿದೆ.

ಕೇಂದ್ರಸರ್ಕಾರ 1955ರಲ್ಲಿ ನೇಮಿಸಿದ ರಾಜ್ಯ ಮರುವಿಂಗಡಣಾ ಆಯೋಗದಲ್ಲಿದ್ದ ಡಾ. ಪಣಿಕ್ಕರ್‍ರ (ಡಾ. ಫಜಲ್, ಪಂಡಿತ್ ಕುಂಜ್ರು ಇನ್ನಿತರ ಸದಸ್ಯರು) ಪ್ರಭಾವದಿಂದ ಕಾಸರಗೋಡು ಕೇರಳದ ಪಾಲಾಯಿತು ಎಂಬುದು ಕಯ್ಯಾರರ ವೇದನೆ. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗವಹಿಸಿದ ಕಯ್ಯಾರರು ಕಾಸರಗೋಡು-ಕರ್ನಾಟಕ ಏಕೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಈ ಸಮಿತಿಯ ಅಹವಾಲುಗಳನ್ನು ಮನ್ನಿಸಿದ ಮಹಾಜನ ಆಯೋಗ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ತೀರ್ಪು ನೀಡಿತು. ‘ಆದರೆ ಯಾವುದೋ ಕಾಣದ ಕೈ’ ಅಥವಾ  ಸರ್ದಾರ್ ಪಣಿಕ್ಕರ್ ಕೈ, ಅನ್ಯಾಯ ಮಾಡಿತ್ತು. ಹೀಗಾಗಿ ಇಂದಿಗೂ ಕಾಸರಗೋಡು ಕೇರಳದ ಭಾಗವಾಗಿಯೇ ಉಳಿದಿದೆ.

ಕಯ್ಯಾರರ ಪಾಲಿಗೆ ಕಾಸರಗೋಡಿನ ಪ್ರಶ್ನೆ ಕೇವಲ ವ್ಯಾವಹಾರಿಕವಾದುದಾಗಿರದೆ ಜೀವವನ್ನು ಹಿಂಡುವ ಜೀವನ್ಮರಣದ ಪ್ರಶ್ನೆಯಾಗಿದೆ. ಹೀಗಾಗಿಯೇ ಅವರು ‘ಬೆಂಕಿ ಬಿದ್ದಿದೆ ಮನೆಗೆ ಬೇಗ ಬನ್ನಿ’ ಎಂದು ಕರೆ ನೀಡಿದ್ದು.

“ಕಿಞ್ಞಣ್ಣ ರೈ ಎಂಬ ಹೆಸರು ಹೊಸಗನ್ನಡ ಕವಿಗಳ ಅಗ್ರಪಂಕ್ತಿಯಲ್ಲಿದೆ. ನ್ಯಾಯಕ್ಕೆ, ಧರ್ಮಕ್ಕೆ, ಸ್ವಾತಂತ್ರ್ಯಕ್ಕೆ, ಸತ್ಯಕ್ಕೆ, ಪ್ರೇಮಕ್ಕೆ, ಶಾಂತಿಗೆ ಧಕ್ಕೆ ಬಂದಾಗ ಅವರು ಗಾಂಢೀವ ಧರಿಸುತ್ತಾರೆ. ದಲಿತ ಬಂಡಾಯ ಕಾವ್ಯಗಳನ್ನೂ ಅವರು ಬರೆದಿದ್ದಾರೆ.” –  ಡಾ|| ಚಂದ್ರಶೇಖರ ಐತಾಳ

“ಇಡೀ ಕರ್ನಾಟಕದಲ್ಲಿ ಒಂದು ವಿಷಯವನ್ನು ನಿರಂತರ ನಂಬಿ ಹೋರಾಟಕ್ಕೆ ಬದ್ಧರಾದ ಒಬ್ಬರಿದ್ದರೆ, ಕಯ್ಯಾರ ಕಿಞ್ಞಣ್ಣ ರೈಗಳು. ಕಾಸರಗೋಡು ಅವರಿಗೆ ವ್ರತ. ಭಾವಾತೀತತೆಯ ಮುಹೂರ್ತದಲ್ಲಿ ಅವರಲ್ಲಿ ಆತ್ಮಸ್ವವಾಗಿರುವ ಸಂಸ್ಕೃತ ಕನ್ನಡ ಭಾಷೆಗಳ ಓಜಸ್ಸು ಪ್ರಕಟವಾಗಿ ರಸಾನುಭವವನ್ನುಂಟು ಮಾಡುತ್ತದೆ.” –    ಪ್ರೊ|| ಕು. ಶಿ. ಹರಿದಾಸ ಭಟ್ಟ

ಗ್ರಾಮಸೇವೆ:

ಮನಸ್ಸಿರುವವನಿಗೆ ತನ್ನ ಪರಿಸರದಲ್ಲೇ ಮಾಡುವ ಅನೇಕ ಕರ್ತವ್ಯಗಳಿರುತ್ತವೆ. ಕಾಂiÀರ್iಕರ್ತನಿಗೆ ನೂರಾರು ದಿಕ್ಕುಗಳಿವೆ ಎಂಬಂತೆ ಕಯ್ಯಾರರು ತಮ್ಮ ಊರಿನ ಗ್ರಾಮಪಂಚಾಯತಿಗೆ ಅವಿರೋಧ ಆಯ್ಕೆಗೊಂಡು 15 ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಅವರು ನಡೆಸಿದ ಸಾಮಾಜಿಕ, ಸಾಂಸ್ಕøತಿಕ ವಿದ್ಯಾಸಂಬಂಧಿ ಸೇವೆಗಳೇ ಅವರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿ ನಿಂತಿವೆ. ಬದಿಯಡ್ಕ ಪಂಚಾಯತ್‍ನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವರು ಎರಡು ಹೊಸ ಶಾಲೆಗಳನ್ನು ತೆರೆಯಲು ಕಾರಣರಾದರು – ವಿದ್ಯಾಗಿರಿ ಶಾಲೆಯನ್ನು ತಮ್ಮ ಪ್ರಥಮ ಗುರು ಪಂಜಿರ್ಕೆ ಅನಂತಭಟ್ಟರ ಸ್ಮರಣಾರ್ಥ ಸ್ಥಾಪಿಸಿ, ಪಂಜಿರ್ಕೆ ಅನಂತಭಟ್ಟರ ಸ್ಮಾರಕ ಶಾಲೆ ಎಂದು ಹೆಸರಿಟ್ಟರು. ಎರಡು ಆಸ್ಪತ್ರೆಗಳನ್ನು, ಒಂದು ನರ್ಸಿಂಗ್ ಹೋಮ್‍ಅನ್ನು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಊರುಗಳಿಗೆ ಅಗತ್ಯವಾದ ಮಾರ್ಗಗಳನ್ನು ನಿರ್ಮಿಸಿದರು. ಬದಿಯಡ್ಕ ಪಂಚಾಯತಿಗೆ ನೀರಿನ ಯೋಜನೆ ಹಾಗೂ ವಿದ್ಯುಚ್ಛಕ್ತಿ; ಗ್ರಾಮೀಣ ಬಡಜನತೆಗೆ ಸರಕಾರದಿಂದ ಮಾಸಾಶನ ಕೊಡಿಸಿರುವುದು; – ಮುಂತಾದ ಅನೇಕ ಜನೋಪಯೋಗಿ ಯೋಜನೆಗಳನ್ನು ಕಲ್ಪನೆಯೂ ದುಸ್ಥರವೆನಿಸುವ ಹಲವು ದಶಕಗಳ ಹಿಂದೆಯೇ ಕೈಗೊಂಡ ಕೀರ್ತಿ ಕಯ್ಯಾರರದ್ದು. ಇದೇ ಅವಧಿಯಲ್ಲಿ ಅವರ ಪಂಚಾಯತ್, ಬಹುಮುಖ ಚಟುವಟಿಕೆಗಳನ್ನು ಗುರುತಿಸಿದ ರಾಜ್ಯ ಸರ್ಕಾರ ‘ಮಾದರಿ ಪಂಚಾಯತ್’ ಎಂದು  ಮನ್ನಣೆ ನೀಡಿ ಗೌರವಿಸಿದೆ. ಇದು ಕಯ್ಯಾರರ ಕಾರ್ಯಕ್ಕೆ ಸಿಕ್ಕ ಮನ್ನಣೆ.

ಕಯ್ಯಾರರ ಸಾಹಿತ್ಯೇತರ ಆಸಕ್ತಿಗಳು ಅವರನ್ನು ಬಿಡುವಿಲ್ಲದ ಸಾಮಾಜಿಕ ಕಾರ್ಯಕರ್ತನನ್ನಾಗಿ ಮಾಡಿದೆ. ಅವಿರೋಧ ಆಯ್ಕೆಯಾಗಿ 15ವರ್ಷ ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ, ಬದಿಯಡ್ಕ ನೇಕಾರರ ಸಂಘದ ನಿರ್ದೇಶಕ, ಬದಿಯಡ್ಕ ಸಹಕಾರಿ ಸಂಘದ ಅಧ್ಯಕ್ಷ, ಕೇರಳ ಸರಕಾರದ ಕೊರಗ ಅಭಿವೃದ್ಧಿ ಸಮಿತಿ ಮತ್ತು ಹರಿಜನ ಸೇವಕ ಸಂಘದ ಸದಸ್ಯ, ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರ ಸಮಿತಿ ಸದಸ್ಯ, ಕರ್ನಾಟಕ ಸರಕಾರದ ಕನ್ನಡ ಕಾವಲು ಸಮಿತಿಯ ಸದಸ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ,  ದಕ್ಷಿಣ ಕನ್ನಡ ಎರಡನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (1985), ಪ್ರಥಮ ಅಖಿಲ ಭಾರತ ಜನಪರ ಸಾಹಿತ್ಯ ಸಮ್ಮೇಳನದ ಅದ್ಯಕ್ಷತೆ (1988) – ಇವು ಕಯ್ಯಾರರ ಸಾಧನೆಯನ್ನೂ ಕಾರ್ಯಕ್ಷೇತ್ರ ವಿಸ್ತಾರವನ್ನೂ ಸೂಚಿಸುತ್ತವೆ.

ಎಳೆಯರಲ್ಲಿ ಜೀವನೋತ್ಸಾಹ ತುಂಬಿ!

ವಿದ್ಯಾರ್ಥಿ ದಶೆಯಲ್ಲೇ ಗಾಂಧಿ ಪ್ರಭಾವದಿಂದ ಖಾದಿ ಧರಿಸಿ, ಗುಪ್ತಸಂದೇಶವಾಹಕರಾಗಿ, ಚಳವಳಿಗಳಲ್ಲಿ ಭಾಗವಹಿಸಿದ ಕಯ್ಯಾರರಿಗೆ ಸ್ವಾತಂತ್ರ್ಯಾನಂತರದ ಭಾರತದ ನಾಯಕರುಗಳು ನಡೆದುಕೊಳ್ಳುತ್ತಿರುವುದರ ಬಗ್ಗೆ ಅಸಹನೆಯಿತ್ತು, ಹಾಗೆಂದು ಅವರು ಪೂರ್ಣ ನಿರುತ್ಸಾಹಿಯೂ ಆಗಿರಲಿಲ್ಲ. ಸ್ವಾತಂತ್ರ್ಯೋತ್ಸವದ ಸ್ವರ್ಣಮಹೋತ್ಸವ ಆಚರಿಸುತ್ತಿದ್ದಾಗ ಒಂದು ವಿಚಾರಗೋಷ್ಠಿಯಲ್ಲಿ ಬುದ್ಧಿಜೀವಿಗಳೆನಿಸಿಕೊಂಡ ಕೆಲವರು ನಿರಾಸೆ, ಅಸಹನೆ, ವಿಷಾದಗಳಿಂದ ಮಾತನಾಡುತ್ತಿರುವುದನ್ನು ಕೇಳಿದ ರೈಗಳು ತಮ್ಮ ಅಧ್ಯಕ್ಷ ಭಾಷಣದಲ್ಲಿ ನಿರಾಶೆಯ ಮಾತುಗಳು ಸಲ್ಲದು, ಉಚಿತವಲ್ಲದ್ದು ಎಂದು ಸ್ವಲ್ಪ ಕಾರವಾಗಿಯೇ ಉತ್ತರಿಸಿದ್ದರು. “ನೀವೆಲ್ಲರು ಸ್ವಾತಂತ್ರ್ಯೋತ್ತರ ದಿನಗಳಲ್ಲಿ ಹುಟ್ಟಿದವರು, ನಿಮಗೆ ಗುಲಾಮಿತನದ ಅನುಭವ ಇಲ್ಲದ್ದರಿಂದ ಇಂತಹ ನಿರಾಶೆಯ ಮಾತುಗಳನ್ನು ಆಡುತ್ತಿದ್ದೀರಿ. ಇಂತಹ ನಿರಾಶೆ ಎಳೆಯರ ಮೇಲೆ ಬೀರುವ ಪರಿಣಾಮ ಎಂತಹದ್ದು? ಇಂತಹ ವಿಷಾದದಿಂದ, ಅಸಹನೆಯಿಂದ ದೇಶ ಉಳಿಸಿಕೊಳ್ಳಲಾಗುವುದಿಲ್ಲ. ಬದಲಿಗೆ ನಿಮ್ಮ ಕೋಪವನ್ನು, ವಿಷಾದವನ್ನು ರಚನಾತ್ಮಕವಾಗಿ ಬಳಸಿಕೊಳ್ಳಿ. ಆಶಾವಾದಿಗಳಾಗಿ, ಯುವಕರಲ್ಲಿ ಜೀವನೋತ್ಸಾಹ ತುಂಬಿ” ಎಂದಿದ್ದರು ಕಯ್ಯಾರರು.

ಕಿಞ್ಞಣ್ಣ ಎಂದರೆ ತುಳುವಿನಲ್ಲಿ ಚಿಕ್ಕಣ್ಣ ಎಂದರ್ಥ. ಆದರೆ ಕಿಞ್ಞಣ್ಣ ರೈಗಳ ಕಾರ್ಯವಿಶಾಲತೆಯನ್ನೂ ಅವರ ವ್ಯಕ್ತಿತ್ವವನ್ನೂ ಬಲ್ಲ ಹಿರಿಯರು ಇದನ್ನು ಒಪ್ಪುವುದಿಲ್ಲ. ಅನೇಕ ಸಂಘ-ಸಂಸ್ಥೆ, ಸಮಿತಿಗಳಲ್ಲಿ ಸಕ್ರಿಯರಾಗಿ ದುಡಿದಿರುವ ಅವರು ಇದಕ್ಕಾಗಿ ನಾಡಿನ ಉದ್ದಗಲಕ್ಕೂ ಸಂಚರಿಸಿದ್ದಾರೆ. ಸಾಧಕನನ್ನು ಗೌರವಗಳು ಅರಸಿಕೊಂಡು ಬರುವಂತೆ ಪ್ರಥಮ ಅಖಿಲ ಭಾರತ ಜನಪರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (1988); 1997ರಲ್ಲಿ ಮಂಗಳೂರಿನಲ್ಲಿ ನಡೆದ 66ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಂತಹ ಅನೇಕ ಸಾಹಿತ್ಯಗೋಷ್ಠ್ಠಿಗಳ ಅಧ್ಯಕ್ಷತೆ ರೈಗಳ ಪಾಲಿಗೆ ಒದಗಿಬಂದಿದೆ. 1969ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1985ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನಾಡಿನ ಹಲವು ಗಣ್ಯಪುರಸ್ಕಾರಗಳು ರೈಗಳನ್ನರಸಿ ಬಂದಿವೆ.

ಕರ್ಣಾಟಕಾಂತರ್ಗತ ತುಳುನಾಡಿನ ಮಣ್ಣಿನ ಮಗನಾಗಿ ಕನ್ನಡದ ಕಟ್ಟಾಳಾಗಿ, ಸಾಹಿತಿಯಾಗಿ, ಸ್ವಾತಂತ್ರ್ಯ ಹೋರಾಟಗಾರನಾಗಿ, ಉತ್ತಮ ಅಧ್ಯಾಪಕನಾಗಿ, ಪತ್ರಿಕೋದ್ಯಮಿಯಾಗಿ, ಸಾಮಾಜಿಕ ಕಾರ್ಯಕರ್ತನಾಗಿ, ಗಡಿನಾಡು ಕಾಸರಗೋಡಿನ ಕಾವಲುಭಟನಾಗಿ 

ಕಯ್ಯಾರರ ಸಾಹಿತ್ಯ ಕೃತಿಗಳು

ಕಾವ್ಯ :

1. ಶ್ರೀಮುಖ;
2. ಐಕ್ಯಗಾನ;
3. ಪುನರ್ನವ;
4. ಮಕ್ಕಳ ಪದ್ಯಮಂಜರಿ ( ಏರಡು ಭಾಗಗಳಲ್ಲಿ);
5. ಚೇತನ;
6. ಪಂಚಮೀ;
7.ಮಹಾಕವಿ ಕುಮಾರನ್ ಆಶಾನರ ಮೂರು ಖಂಡಕಾವ್ಯಗಳು;
8. ಕೊರಗ ಮತ್ತು ಕೆಲವು ಕವನಗಳು;
9. ಶತಮಾನದ ಗಾನ;
10. ಗಂಧವತೀ;
11.ಪ್ರತಿಭಾ ಪಯಸ್ವಿನೀ;
12. ಎನ್ನಪ್ಪೆ ತುಳುವಪ್ಪೆ.

ಗದ್ಯ :

1. ರತ್ನರಾಶಿ;
2. ಲಕ್ಷ್ಮೀಶನ ಕಥೆಗಳು;
3. ಅನ್ನದೇವರು ಮತ್ತು ಇತರ ಕಥೆಗಳು;
4. ಪರಶುರಾಮ;
5. ಎ.ಬಿ. ಶೆಟ್ಟಿ (ಜೀವನ ಚರಿತ್ರೆ);
6. ಕನ್ನಡದ ಶಕ್ತಿ (ಸಂಪಾದಿತ);
7. ಕಾರ್ನಾಡು ಸದಾಶಿವ ರಾವ್ (ಜೀವನ ಚರಿತ್ರೆ);
8. ನಾರಾಯಣ ಕಿಲ್ಲೆ (ಜೀವನ ಚರಿತ್ರೆ);
9. ದುಡಿಮೆಯೇ ದೇವರು(ಆತ್ಮಕತೆ).

ಸಾಹಿತ್ಯ ವಿಮರ್ಶೆ :

1. ರಾಷ್ಟ್ರಕವಿ  ಗೋವಿಂದ ಪೈ;
2. ಗೋವಿಂದ ಪೈ ಸ್ಮøತಿ-ಕೃತಿ;
3. ಮಲಯಾಳ ಸಾಹಿತ್ಯ ಚರಿತ್ರÀಂ;
4. ಸಾಹಿತ್ಯ ದೃಷ್ಟಿ;
5. ಮಹಾಕವಿ ಗೋವಿಂದ ಪೈ.
6. ಸಂಸ್ಕೃತಿಯ ಹೆಗ್ಗುರುತುಗಳು

ವ್ಯಾಕರಣ :

ವ್ಯಾಕರಣ ಮತ್ತು ಪ್ರಬಂಧ (ನಾಲ್ಕು ಭಾಗಗಳಲ್ಲಿ -ನಾಲ್ಕು ಪುಸ್ತಕಗಳು).

ಶಿಶು ಸಾಹಿತ್ಯ :

ನವೋದಯ ವಾಚನಮಾಲೆ (ಎಂಟು ಪುಸ್ತಕಗಳು)

ನಾಟಕ :

ವಿರಾಗಿ

   (ಸಂಗ್ರಹ)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries