ಮುಂಬೈ: ಕೇಂದ್ರ ಸರ್ಕಾರದ ಕೋವಿಡ್ ನಿರ್ವಹಣೆಯ ರೀತಿಯನ್ನು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್ ತೀವ್ರವಾಗಿ ಟೀಕಿಸಿದ್ದಾರೆ.
ರಾಷ್ಟ್ರೀಯ ಸೇವಾ ದಳ ಜೂ.04 ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅಮಾರ್ತ್ಯ ಸೇನ್, ಕೇಂದ್ರ ಸರ್ಕಾರ ಕೋವಿಡ್-19 ಸೋಂಕು ಹರಡುವಿಕೆ ತಡೆಯುವುದರ ಬದಲು ತನ್ನ ಕೆಲಸಗಳಿಗೆ ಕೀರ್ತಿ ಸಂಪಾದನೆಗೆ ಮುಂದಾಯಿತು, ಇದು ಕೇಂದ್ರ ಸರ್ಕಾರದ ಛಿದ್ರ ಮನಸ್ಥಿತಿಗೆ ಕಾರಣವಾಗಿ, ಹಲವಾರು ಸಮಸ್ಯೆಗಳಿಗೆ ಮೂಲವಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಔಷಧ ಉತ್ಪಾದಕ ಸಾಮರ್ಥ್ಯ ಹಾಗೂ ಇಲ್ಲಿನ ಜನರಲ್ಲಿರುವ ರೋಗನಿರೋಧಕತೆ ಕೋವಿಡ್-19 ನ್ನು ಎದುರಿಸುವುದಕ್ಕೆ ಸರ್ವಸಮರ್ಥ ರಾಷ್ಟ್ರವಾನ್ನಾಗಿಸಿತ್ತು, ಆದರೆ ಸರ್ಕಾರ ಅದನ್ನು ಸಮರ್ಥವಾಗಿ ನಿಭಾಯಿಸಲಿಲ್ಲ ಎಂದು ಅವರು ಟೀಕಿಸಿದ್ದಾರೆ.
ಭಾರತದಲ್ಲಿ ಕೋವಿಡ್-19 ಎರಡನೇ ಅಲೆ ತೀವ್ರವಾಗಿ ಬಾಧಿಸುತ್ತಿದ್ದು, 4 ಲಕ್ಷದವರೆಗೂ ಪ್ರಕರಣಗಳು ವರದಿಯಾಗಿ ದಿನವೊಂದಕ್ಕೆ 4,500 ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಅಮಾರ್ತ್ಯ ಸೇನ್ ಈ ಹೇಳಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಗೆಲ್ಲುವುದಕ್ಕೂ ಮುನ್ನವೇ ವಿಜಯೋತ್ಸವ ಆಚರಣೆ ಮಾಡಿದ್ದು, ಈ ಬಿಕ್ಕಟ್ಟಿಗೆ ಕಾರಣ ಎಂದು ಅಮಾರ್ತ್ಯ ಸೇನ್ ವಿಶ್ಲೇಷಿಸಿದ್ದು, ಕೇಂದ್ರ ಸರ್ಕಾರ ಸೋಂಕು ತಡೆಗಟ್ಟುವುದರ ಬದಲು ತನ್ನ ಕೆಲಸಗಳಿಗೆ ಕೀರ್ತಿ ಸಂಪಾದನೆಯ ಮೇಲೆಯೇ ಗಮನ ಹೆಚ್ಚು ಹರಿಸಿತು. ಇದು ಸರ್ಕಾರದ ನೀತಿಗಳಲ್ಲಿ ಗೊಂದಲ ಸೃಷ್ಟಿಸಿ ಛಿದ್ರ ಮನಸ್ಥಿತಿಗೆ ಕಾರಣವಾಯಿತು ಎಂದಿದ್ದಾರೆ.
ಹಾರ್ವರ್ಡ್ ವಿವಿಯ ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿದ್ದ ಅಮಾರ್ತ್ಯ ಸೇನ್ "ಒಳ್ಳೆಯ ಕೆಲಸ ಮಾಡುವವರು ಎಂದಿಗೂ ಅದಕ್ಕೆ ಕೀರ್ತಿ ಸಂಪಾದನೆ ಮಾಡಲು ಹೋಗುವುದಿಲ್ಲ" ಎಂಬ ಅರ್ಥಶಾಸ್ತ್ರಜ್ಞ ಆಡ್ಯಾಮ್ ಸ್ಮಿತ್ ಅವರ ಉಕ್ತಿಯನ್ನು ಉಲ್ಲೇಖಿಸಿದ್ದು, ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.