ಕಾಸರಗೋಡು: ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿ ಗುರಿಯಾಗಿಸಿ ಯೋಜನೆಗಳ ರಚನೆಗಾಗಿ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಆನ್ ಲೈನ್ ಸಂವಾದ ನಡೆಸಲು ತೀರ್ಮಾನಿಸಲಾಗಿದೆ.
ಕಾಸರಗೋಡು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.
ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಮೂಲಕ ಸಂವಾದ ನಡೆಸಲಾಗುವುದು. ಜುಲೈ 2ನೇ ವಾರದಿಂದ ವಾರಕ್ಕೊಮ್ಮೆ ಈ ಸಂವಾದ ನಡೆಸಲಾಗುವುದು. ಸಚಿವ ಸಹಿತ ಗಣ್ಯರೂ ಈ ಕಾರ್ಯಕ್ರಮದಲ್ಲಿ ಭಾಗಿಗಳಾಗುವರು. ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲನ್ ಆನ್ ಲೈನ್ ಸಂವಾದವನ್ನು ಉದ್ಘಾಟಿಸುವರು. ಹೂಡಿಕೆದಾರರ ಅಭಿಪ್ರಾಯ ಸಹಿತ ಸಂವಾದದಲ್ಲಿ ಮೂಡಿಬರಲಿವೆ. ಇವುಗಳ ಹಿನ್ನೆಲೆಯಲ್ಲಿ ಸಿದ್ಧಗೊಳ್ಳುವ ಯೋಜನೆಗಳನ್ನು ಶೀಘ್ರದಲ್ಲಿ ನಡೆಯಲಿರುವ ಹೂಡಿಕೆದಾರರ ಸಂಗಮ ಕಾರ್ಯಕ್ರಮದಲ್ಲಿ ಮಂಡಿಸಲಾಗುವುದು.
ಕಲಿಕೆಗೆ ಸೌಲಭ್ಯಗಳಿಲ್ಲದೆ ಇರುವ ಪರಿಶಿಷ್ಟ ಜಾತಿ-ಪಂಗಡದ ಮಕ್ಕಳಿಗೆ ಡಿಜಿಟಲ್ ಉಪಕರಗಳನ್ನು ಒದಗಿಸಲು ಸಭೆ ನಿರ್ಧರಿಸಿದೆ. ಮೊಟಕುಗೊಂಡಿರುವ ಕುಡಿಯುವ ನೀರಿನ ಯೋಜನೆಗಳ ಪುನಶ್ಚೇತನಕ್ಕೆ ಯೋಜನೆಗಳನ್ನು ರಚಿಸಲಾಗುವುದು. ಬ್ಲೋಕ್ ಪಂಚಾಯತ್ ಮಟ್ಟದಲ್ಲಿ ಈ ಸಂಬಂಧ ಮಾತುಕತೆ ನಡೆಸಲಾಗುವುದು. ಪರಪ್ಪ, ನೀಲೇಶ್ವರ ಬ್ಲೋಕ್ ಪಂಚಾಯತ್ ಗಳಲ್ಲಿ ಜುಲೈ 11 ರಂದು, ಕಾಞಂಗಾಡು, ಕಾರಡ್ಕ ಬ್ಲೋಕ್ ಗಳಲ್ಲಿ ಜು.12ರಂದು, ಕಾಸರಗೋಡು, ಮಂಜೇಶ್ವರ ಬ್ಲೋಕ್ ಪಂಚಾಯತ್ ಗಳಲ್ಲಿ ಜುಲೈ 13ರಂದು ಮಾತುಕತೆ ನಡೆಯಲಿವೆ.
ತ್ರಿಸ್ತರ ಪಂಚಾಯತ್ ಗಳ ಜಂಟಿ ಯೋಜನೆಗಳ ಸಂಬಂಧ ಶೀಘ್ರ ಸಭೆ ನಡೆಸಲು ತೀರ್ಮಾನಿಸಲಾಗಿದೆ. ನಬಾರ್ಡ್ ಯೋಜನೆಯಲ್ಲಿ ಪೆರಿಯದಲ್ಲಿ ನಿರ್ಮಿಸಲಾಗುವ ವ್ಯಾಪಾರ ಕೇಂದ್ರಕ್ಕಾಗಿ ಡಿ.ಪಿ.ಆರ್. ಸಿದ್ಧಪಡಿಸಲಾಗಿದೆ. 868 ಮಾದರಿ ಅಂಗಡಿಗಳನ್ನು ಇಲ್ಲಿ ನಿರ್ಮಿಸಲಾಗುವುದು. ನಬಾರ್ಡ್ ನಿಧಿ ಬಳಸಿ ಮಾದರಿ ಯೋಜನೆಯ ರೂಪದಲ್ಲಿ ಜಿಲ್ಲಾ ಪಂಚಾಯತ್ ನಲ್ಲಿ ಕಟ್ಟಡ ನಿರ್ಮಿಸಲು ಸಭೆ ತೀರ್ಮಾನಿಸಿದೆ.
ಸಭೆಯಲ್ಲಿ ಉಪಾಧ್ಯಕ್ಷ ಷಾನವಾಝ್ ಪಾದೂರು, ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಕೆ.ಶಕುಂತಲಾ, ನ್ಯಾಯವಾದಿ ಎಸ್.ಎನ್.ಸರಿತಾ, ಷಿನೋಜ್ ಚಾಕೋ, ಗೀತಾಕೃಷ್ಣನ್, ಸದಸ್ಯರು, ಬ್ಲೋಕ್ ಪಂಚಾಯತ್ ಅಧ್ಯಕ್ಷರುಗಳು ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಪಿ.ನಂದಕುಮಾರ್ ಸ್ವಾಗತಿಸಿದರು.