ನವದೆಹಲಿ: ಮುಂದಿನ ಒಂದು ವಾರಗಳಲ್ಲಿ ಭಾರತದ ಅರ್ಧ ಭಾಗವನ್ನು ಮುಂಗಾರು ಆವರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಘರ್, ಒಡಿಶಾ, ತೆಲಂಗಾಣ, ಮಹಾರಾಷ್ಟ್ರದ ಉಳಿದ ಭಾಗ ಹಾಗೂ ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಆರು ದಿನ ಮುಂಚಿತವಾಗಿ ಮುಂಗಾರು ಆರಂಭವಾಗಲಿದೆ ಎಂದು ಗುರುವಾರ ತಿಳಿಸಿದೆ. ದೆಹಲಿಗೆ ಕೂಡ ನಿಗದಿಗಿಂತ ಮುನ್ನವೇ ಮುಂಗಾರು ಕಾಲಿಡಲಿದೆ ಎಂದಿದೆ.
"ಮುಂದಿನ 48 ಗಂಟೆಗಳಲ್ಲಿ ಮಾನ್ಸೂನ್ ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರದ ಕೆಲವು ಭಾಗಗಳನ್ನು ತಲುಪಲಿದೆ. ನಂತರದ ಎರಡು ದಿನಗಳಲ್ಲಿ, ಮುಂಗಾರು ಉತ್ತರ ಪ್ರದೇಶದ ಪಶ್ಚಿಮ ಭಾಗ ಹಾಗೂ ಉತ್ತರಾಖಂಡದ ಕೆಲವು ಭಾಗಗಳನ್ನು ಸಹ ಆವರಿಸಬಹುದು. ಹೀಗಾಗಿ ನಿರೀಕ್ಷೆಗಿಂತ ಮೊದಲೇ ಮುಂಗಾರು ದೆಹಲಿಯನ್ನು ತಲುಪುವ ನಿರೀಕ್ಷೆಯಿದೆ" ಎಂದು ಪ್ರಾದೇಶಿಕ ಹವಾಮಾನ ಮುನ್ಸೂಚನೆ ಕೇಂದ್ರದ ಮುಖ್ಯಸ್ಥ ಕುಲ್‌ದೀಪ್ ಶ್ರೀವಾಸ್ತವ ತಿಳಿಸಿದ್ದಾರೆ. ಮುಂಗಾರು ಸಾಮಾನ್ಯವಾಗಿ ಜೂನ್ ಅಂತ್ಯದ ವೇಳೆಗೆ ಆಗಮಿಸುತ್ತದೆ.
ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರದ ಹಿರಿಯ ವಿಜ್ಞಾನಿ ಆರ್.ಕೆ.ಜೇನಮಣಿ ವಾಯುವ್ಯ ಭಾರತದಲ್ಲಿ ಮಾನ್ಸೂನ್ ಬರುವ ಮೊದಲು, ಪೂರ್ವ ಮತ್ತು ಮಧ್ಯ ಭಾರತದಲ್ಲಿ ವ್ಯಾಪಕ ಮತ್ತು ಭಾರಿ ಮಳೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಗುರುವಾರ ಮಧ್ಯ ಬಂಗಾಳಕೊಲ್ಲಿಯ ಉಳಿದ ಭಾಗಗಳಿಗೆ ಮತ್ತು ಉತ್ತರ ಬಂಗಾಳ ಕೊಲ್ಲಿಯ ಹೆಚ್ಚಿನ ಭಾಗಗಳಿಗೆ ಮುಂಗಾರು ತಲುಪಿದೆ ತಲುಪಿದೆ ಎಂದು ಇದೇ ಸಂದರ್ಭದಲ್ಲಿ ಹವಾಮಾನ ಇಲಾಖೆ ತಿಳಿಸಿದೆ.
ಜೂನ್ 1 ರಿಂದ 9 ತಾರೀಕಿನ ಅವಧಿಯಲ್ಲಿ ಭಾರತದಲ್ಲಿ 21 ಶೇಕಡಾ ಹೆಚ್ಚುವರಿ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಭಾರತಲ್ಲಿ ವಾರ್ಷಿಕ ಮಳೆಯ 70%ದಷ್ಟು ಪ್ರಮಾಣದ ಮಳೆ ಮೊದಲ ನಾಲ್ಕು ತಿಂಗಳಿನಲ್ಲಿ ಸುರಿಯುತ್ತದೆ. ಕೃಷಿ ಚಟುವಟಿಕೆಗಳಿಗೆ ಇದು ಬಹಳಷ್ಟು ನಿರ್ಣಾಯಕವಾಗುತ್ತದೆ. ಬಿತ್ತನೆ ಮಾಡಿದ ಪ್ರದೇಶದ 60%ರಷ್ಟು ಭಾರತದಲ್ಲಿ ನೀರಾವರಿ ಪ್ರವೇಶವನ್ನು ಹೊಂದಿಲ್ಲವಾದರಿಂದ ಮುಂಗಾರು ಮಳೆ ಬಹಳ ಪ್ರಮುಖ ಪಾತ್ರವಹಿಸುತ್ತದೆ. ಜೊತೆಗೆ ಮುಂಗಾರು ಕುಡಿಯುವ ಮತ್ತು ವಿದ್ಯುತ್ ಉತ್ಪಾದನೆಗೆ ನಿರ್ಣಾಯಕವಾದ 89 ರಾಷ್ಟ್ರೀಯ ಪ್ರಮುಖ ಜಲಾಶಯಗಳನ್ನು ಸಹ ತುಂಬಿಸುತ್ತದೆ.