HEALTH TIPS

ಸಿರಿಚಂದನ ಕನ್ನಡ ಯುವಬಳಗದಿಂದ ನಾಡೋಜ ಕವಿ ಸಿದ್ದಲಿಂಗಯ್ಯ ಅವರಿಗೆ ನುಡಿನಮನ

              ಕುಂಬಳೆ: ಕನ್ನಡದ ಖ್ಯಾತ ಕವಿ ನಾಡೋಜ ಡಾ. ಸಿದ್ದಲಿಂಗಯ್ಯ ಅವರ ಅಕಾಲ ನಿಧನಕ್ಕೆ ಶ್ರದ್ಧಾಂಜಲಿ ಸೂಚಿಸಿ, ಅವರಿಗೆ ನುಡಿನಮನವನ್ನು ಕಾಸರಗೋಡಿನ ಸಿರಿಚಂದನ ಕನ್ನಡ ಯುವಬಳಗವು ಓನ್ಲೈನ್ ಮೂಲಕ ನಡೆಸಿತು. 

                ಕವಿ, ಸಾಹಿತಿ, ಪತ್ರಕರ್ತರೂ ಆದ ರಾಧಾಕೃಷ್ಣ ಉಳಿಯತ್ತಡ್ಕ ಅವರು, ಮಾತನಾಡಿ "ಸಿದ್ಧಲಿಂಗಯ್ಯನವರು ಕಾಸರಗೋಡಿಗೆ ತುಂಬಾ ಹತ್ತಿರವಾದವರು. ಸೌಮ್ಯ ನುಡಿಯ ಕ್ರಾಂತಿ ಕವಿಯಾಗಿದ್ದ ಇವರ ಮಾತು ಎಲ್ಲರ ಗಮನ ಸೆಳೆಯುವಂತದ್ದು.  ಸೋಲಲ್ಲೂ ಗೆಲುವನ್ನು ಕಾಣುವಂತಹ ಸಮಚಿತ್ತ ಮನಸ್ಕರು ಇವರು. ಸಿದ್ದಲಿಂಗಯ್ಯನವರ ವ್ಯಕ್ತಿತ್ವ ಸಾಹಿತ್ಯ ಸೇವೆ ಜೀವನಾದರ್ಶ ಕಾಸರಗೋಡಿನ ಜೊತೆ ಅವರಿಗಿದ್ದ ನಂಟು ಅನನ್ಯವಾದುದು." ಎಂದ ಅವರು ಸಿದ್ಧಲಿಂಗಯ್ಯನವರ ಜತೆಗಿದ್ದ ಒಡನಾಟವನ್ನು ಸ್ಮರಿಸಿಕೊಂಡರು.

              ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಸಾಲಿಯಾನ್ ಮಾತನಾಡಿ "ಸಿದ್ಧಲಿಂಗಯ್ಯ ನವರ ಸಾಹಿತ್ಯ ಸಮಾಜಸೇವೆ ಅತ್ಯಂತ ಮಹತ್ವದ್ದು.  ಸಾಧು ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದವರು.  ಅವರ ಆದರ್ಶ ಮುಂದೆಯೂ ಸಮಾಜದಲ್ಲಿ ಬೆಳಗಲಿ, ಕಾಸರಗೋಡಿನ ಕನ್ನಡದ ಒಳಿತಿಗಾಗಿ, ಇಲ್ಲಿನ ವಿದ್ಯಾರ್ಥಿಗಳ ಏಳ್ಗೆಗಾಗಿ ಅವರು ಸದಾ ದುಡಿದವರು. ಕಾಸರಗೋಡಿನ ಕನ್ನಡದ ಸಮಸ್ಯೆಗಳಿಗೆ ಕ್ಷಿಪ್ರವಾಗಿ ಸ್ಪಂದಿಸುತ್ತಿದ್ದ ಅವರ ಅಗಲುವಿಕೆ ತುಂಬಲಾರದ ನಷ್ಟ." ಎಂದರು.

              ಶಿಕ್ಷಕ ಅಶ್ರಫ್ ಮತ್ರ್ಯ ಮಾತನಾಡಿ, "ವಿದ್ಯಾರ್ಥಿ ದೆಸೆಯಲ್ಲಿ ಓದಿಕೊಂಡ ಸಿದ್ದಲಿಂಗಯ್ಯ ನವರ ಕೃತಿಗಳು ನನ್ನ ಮೇಲೆ ಗಾಢ ಪರಿಣಾಮ ಬೀರಿದೆ. ಕಾಸರಗೋಡಿನ ವಿದ್ಯಾರ್ಥಿಗಳ ಮೇಲೆ ಅವರಿಗಿದ್ದ ಪ್ರೀತಿ ಅದು ಅಪಾರ. ಎಂ.ಎ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಿಗುವಂತೆ ಮಾಡಿದ ಅವರ ಔದಾರ್ಯವು ಸದಾ ಸ್ಮರಣೀಯ." ಎಂದರು.

ಸಂಶೋಧನ ವಿದ್ಯಾರ್ಥಿನಿ ಅರ್ಷಿತ ಹಾಗು ವಿದ್ಯಾರ್ಥಿ ಚಂದ್ರಮೌಳಿ ಕಡಂದೇಲು ನುಡಿನಮನ ಸಲ್ಲಿಸಿದರು. 

              ಬಳಗದ ಮಾರ್ಗದರ್ಶಕರಾದ ಡಾ.ರತ್ನಾಕರ ಮಲ್ಲಮೂಲೆಯವರು ಉಪಸ್ಥಿತರಿದ್ದು ಸಿದ್ದಲಿಂಗಯ್ಯನವರು ಕಾಸರಗೋಡಿನ ಕನ್ನಡಿಗರ ಬಗ್ಗೆ ನೈಜ ಕಾಳಜಿ ಇದ್ದ ನಾಡೋಜ ಕವಿ, ಮಾನವೀಯತೆಯ ಸಾಕಾರಮೂರ್ತಿ. ಅವರನ್ನು ಕಾಸರಗೋಡಿನ ಯುವತಲೆಮಾರು ಸದಾ ಸ್ಮರಿಸಬೇಕು. ಕಾಸರಗೋಡಿನ ಬಗ್ಗೆ ಕೊನೆಯವರೆಗೂ ಅವರಿಗಿದ್ದ ಕಾಳಜಿಯನ್ನು ನಾವು ದಾಖಲಿಸಲೇಬೇಕು.'  ಎಂದರು.

         ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಳಗದ ಯಕ್ಷಗಾನ ತಾಳಮದ್ದಲೆ ಸಮಿತಿ ಸಂಚಾಲಕ ದಿವಾಕರ ಬಲ್ಲಾಳ್ ಮಾತನಾಡಿ, ಕಾಸರಗೋಡಿನ ಕನ್ನಡಿಗರ ಮೇಲೆ ಸಿದ್ದಲಿಂಗಯ್ಯ ನವರು ಇರಿಸಿದ ನಂಬಿಕೆ ಹಾಗೂ ಪ್ರೀತಿ ಬಹಳ ದೊಡ್ಡದು. ಆದ ಕಾರಣ ಬಳಗವು ಇಂತಹ ಒಂದು ಸಭೆಯನ್ನು ಆಯೋಜಿಸಿದೆ.ಪ್ರಾಧಿಕಾರದ ಅಧ್ಯಕ್ಷರಾಗಿ ಸಿದ್ದಲಿಂಗಯ್ಯ ವಹಿಸಿದ ಕೊಡುಗೆ ಮಹತ್ವದ್ದು. ಸಿದ್ದಲಿಂಗಯ್ಯ ಅವರ ಸನ್ಮನಸ್ಸನ್ನು ನಾವೂ ಬದುಕಿನಲ್ಲಿ ಅಳವಡಿಸಿ ಮುಂದೆ ಸಾಗೋಣ." ಎಂದರು. 

              ಸಿರಿಚಂದನ ಕನ್ನಡ ಯುವಬಳಗದ ಅಧ್ಯಕ್ಷ ಕಾರ್ತಿಕ್ ಪಡ್ರೆ ಸ್ವಾಗತಿಸಿ, ಬಳಗದ ಕಾರ್ಯದರ್ಶಿ  ಅನುರಾಧ ಕಲ್ಲಂಗೂಡ್ಲು ವಂದಿಸಿದರು. ದಿವ್ಯಶ್ರೀ ಪ್ರಾರ್ಥನೆ ಹಾಡಿದರು. ಸುನೀತಾ ಮಯ್ಯ ಕಾರ್ಯಕ್ರಮ ನಿರೂಪಿಸಿದರು.ಎನ್. ಕೆ ಮೋಹನ್ ದಾಸ್, ರಾಮಮೂರ್ತಿ, ಪ್ರವೀಣ ಪದ್ಯಾಣ, ರಾಜಶ್ರೀ ರೈ, ರಾಜೀವಿ  ಟೀಚರ್, ಬಬಿತಾ, ಜ್ಯೋತ್ನಾ ಕಡಂದೇಲು, ಆಶಾಲತ ಪಾಂಡಿಬೈಲು,ಬಳಗದ ಪದಾಧಿಕಾರಿಗಳು, ಸದಸ್ಯರು, ಕಾಸರಗೋಡಿನ  ವಿದ್ಯಾರ್ಥಿಗಳು, ಬೇರೆ ಬೇರೆ ಭಾಗದ ಯುವಮನಸ್ಸುಗಳು,

ಕನ್ನಡ ಆಸಕ್ತ ಬಂಧುಗಳು ನುಡಿನಮನದಲ್ಲಿ  ಭಾಗವಹಿಸಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries