ನವದೆಹಲಿ: 'ಗಾಲ್ವನ್ ಕಣಿವೆಯಲ್ಲಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಸೈನಿಕರ ತ್ಯಾಗವನ್ನು ಭಾರತ ಎಂದಿಗೂ ಮರೆಯುವುದಿಲ್ಲ' ಎಂದು ಚೀನಾಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, 'ಪ್ರತಿಯೊಂದು ಸವಾಲಿಗೂ ನಮ್ಮ ಸಶಸ್ತ್ರಪಡೆಗಳು ಸೂಕ್ತ ಉತ್ತರ ನೀಡುವ ಸಾಮರ್ಥ್ಯವನ್ನು ಹೊಂದಿವೆ' ಎಂದು ಪ್ರತಿಪಾದಿಸಿದರು.
ಪೂರ್ವ ಲಡಾಖ್‌ಗೆ ಭೇಟಿ ನೀಡಿರುವ ರಾಜನಾಥ್ ಸಿಂಗ್ ಅವರು ಸೋಮವಾರ ಕಾರ್ಯಕ್ರಮ ವೊಂದರಲ್ಲಿ ಮಾತನಾಡುತ್ತಾ 'ನೆರೆಯ ರಾಷ್ಟ್ರಗಳೊಂದಿಗಿರುವ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ನಡೆಯಬೇಕು. ಅದೇ ರೀತಿ, ಸಮಸ್ಯೆಗೆ ಪರಿಹಾರ ಹುಡುಕುವ ಬದಲು, ಯಾರಾದರೂ ಬೆದರಿಕೆ ಹಾಕಲು ಪ್ರಯತ್ನಿಸಿದರೆ, ಅದನ್ನು ಭಾರತ ಸಹಿಸುವುದಿಲ್ಲ' ಎಂದು ಅವರು ಎಚ್ಚರಿಸಿದರು.
ಇದೇ ವೇಳೆ ಲಡಾಖ್ ಸೇರಿದಂತೆ ದೇಶದ ಗಡಿ ಭಾಗದಲ್ಲಿ ಬಾರ್ಡರ್ ರೋಡ್ ಆರ್ಗನೈಸೇಷನ್ ನಿರ್ಮಿಸಿರುವ, ಗಡಿ ಭಾಗದಿಂದ ಭಾರತದ ಪ್ರಮುಖ ಭೂ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ 63 ಸೇತುವೆಗಳನ್ನು ರಕ್ಷಣಾ ಸಚಿವರು ಉದ್ಘಾಟಿಸಿದರು.
ಕಳೆದ ವರ್ಷ ಜೂನ್ 15 ರಂದು ಗಾಲ್ವನ್ ಕಣಿವೆಯಲ್ಲಿ ಚೀನಾದ ಸೇನೆಯೊಂದಿಗೆ ನಡೆದ ಘರ್ಷಣೆಯಲ್ಲಿ ಇಪ್ಪತ್ತು ಭಾರತೀಯ ಸೇನಾ ಸಿಬ್ಬಂದಿ ತಮ್ಮ ಪ್ರಾಣವನ್ನು ಅರ್ಪಿಸಿದ್ದರು. ಇದು ದಶಕಗಳಲ್ಲಿ ಉಭಯ ರಾಷ್ಟ್ರಗಳ ನಡುವೆ ನಡೆದ ಅತ್ಯಂತ ಗಂಭೀರ ಸೇನಾ ಸಂಘರ್ಷವಾಗಿತ್ತು.
ಕಳೆದ ಫೆಬ್ರವರಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ ಚೀನಾದ ಐವರು ಅಧಿಕಾರಿಗಳು ಮತ್ತು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಚೀನಾ ಸರ್ಕಾರವೇ ಅಧಿಕೃತವಾಗಿ ಒಪ್ಪಿಕೊಂಡಿತ್ತು. ಆದರೆ ಈ ಸಂಘರ್ಷದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿರಬಹುದು ಎಂದು ಅಂದಾಜಿಸಲಾಗಿತ್ತು.