ನವದೆಹಲಿ: ಕೊರೊನಾ ಎರಡನೇ ಅಲೆ ನಡುವೆಯೇ ದೇಶದಲ್ಲಿ ಮೂರನೇ ಅಲೆ ಕುರಿತು ಚರ್ಚೆಗಳು ಆರಂಭವಾಗಿವೆ. ಕೊರೊನಾ ಮೂರನೇ ಅಲೆ ಪ್ರಭಾವ ಹೇಗಿರಲಿದೆ ಎಂಬುದರ ಕುರಿತು ವಿಶ್ಲೇಷಣೆಗಳು ನಡೆಯುತ್ತಿವೆ.
ಈ ಕುರಿತು ಬುಧವಾರ ಎಸ್‌ಬಿಐ ಎಕೋರಾಪ್ ವರದಿ ನೀಡಿದೆ. ಕೊರೊನಾ ಎರಡನೇ ಅಲೆಯಂತೆಯೇ ಮೂರನೇ ಅಲೆಯು ಗಂಭೀರವಾಗಿರಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಶೋಧನಾ ವರದಿ ನೀಡಿದ್ದು, ಮೂರನೇ ಅಲೆ ಎರಡನೇ ಅಲೆಗಿಂತ ಭಿನ್ನವಾಗಿಯೇನೂ ಇರುವುದಿಲ್ಲ ಎಂದು ಉಲ್ಲೇಖಿಸಿದೆ. ಆದರೆ ಮೂರನೇ ಅಲೆಯಲ್ಲಿ ಈ ಮಟ್ಟಿಗೆ ಸಾವಿನ ಸಂಖ್ಯೆ ಇರುವುದಿಲ್ಲ. ಸಾಕಷ್ಟು ಸಿದ್ಧತೆಗಳು ನಡೆಯುತ್ತಿರುವುದರಿಂದ ಸಾವಿನ ಸಂಖ್ಯೆ ಗಣನೀಯವಾಗಿ ತಗ್ಗಲಿದೆ ಎಂದಿದೆ.
ಎರಡನೇ ಅಲೆ ಅವಧಿ 108 ದಿನಗಳಿದ್ದು, ಮೂರನೇ ಅಲೆಯ ಅವಧಿ ಅಂದಾಜು 98 ದಿನಗಳಾಗಿರುತ್ತದೆ. ಕೊರೊನಾ ಎರಡನೇ ಅಲೆಯಲ್ಲಿ ದಾಖಲಾದ ಪ್ರಕರಣಗಳಿಗಿಂತ ದುಪ್ಪಟ್ಟು ಪ್ರಕರಣಗಳು ದಾಖಲಾಗಬಹುದು. ಆದರೆ ಸೂಕ್ತ ಸಿದ್ಧತೆಯಿದ್ದರೆ ಇದನ್ನು ನಿಯಂತ್ರಿಸಬಹುದು. ಎರಡನೇ ಅಲೆಯಲ್ಲಿ 1.7 ಲಕ್ಷ ಪ್ರಕರಣಗಳು ಕಂಡುಬಂದಿವೆ. ಉತ್ತಮ ಆರೋಗ್ಯ ಸೌಲಭ್ಯಗಳಿದ್ದರೆ ಮೂರನೇ ಅಲೆಯಲ್ಲಿ 40 ಸಾವಿರ ಪ್ರಕರಣಗಳು ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ.
ಜೂನ್ 2ರ ಬುಧವಾರ ದೇಶದಲ್ಲಿ 1,32,788 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 2,31,456 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ಕೊರೊನಾ ಸೋಂಕಿಗೆ 3,207 ಮಂದಿ ಪ್ರಾಣ ಬಿಟ್ಟಿದ್ದಾರೆ. ಭಾರತದಲ್ಲಿ ಒಟ್ಟು 2,83,07,832 ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,61,79,085 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 3,35,102 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 17,93,645 ಕೊರೊನಾ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.