ಗಾಜಿಪುರ: ಗಂಗಾ ನದಿ ತೀರದಲ್ಲಿ ಮಗು ಅಳುವ ಶಬ್ದ ಕೇಳಿಸುತ್ತಿತ್ತು. ಅಲ್ಲಿ ಬಂದ ಸ್ಥಳೀಯರು ಮಗು ಎಲ್ಲಿದೆ ಎಂದು ಸುತ್ತಲೂ ಕಣ್ಣು ಹಾಯಿಸಿದರೂ ಮಗು ಕಾಣಿಸಲಿಲ್ಲ. ಆದರೆ, ಅಳುವ ಶಬ್ದ ಮಾತ್ರ ಬರುತ್ತಲೇ ಇತ್ತು. ಧ್ವನಿ ಬಂದ ದಿಕ್ಕಿನಲ್ಲೇ ಅಂದರೆ ನದಿ ದಡದಲ್ಲಿ ಮರದ ಪೆಟ್ಟಿಗೆ ತೇಲುತ್ತಿತ್ತು. ಅದರ ಸಮೀಪ ಹೋದಂತೆ ಮಗು ಚೀರಾಟದ ಶಬ್ಧ ಜೋರಾಗಿ ಕೇಳಿಸಿತ್ತು. ಆತಂಕ, ಕುತುಹಲದಿಂದಲೇ ಆ ಪೆಟ್ಟಿಗೆಯನ್ನ ತೆರೆದಾಗ ಅಲ್ಲಿ ನೆರೆದಿದ್ದವರಿಗೆ ಕಾದಿತ್ತು ಶಾಕ್!
ಆ ಪೆಟ್ಟಿಗೆಯಲ್ಲಿತ್ತು ನವಜಾತ ಹಣ್ಣು ಶಿಶು! 21 ದಿನದ ಮಗುವಿದ್ದ ಪೆಟ್ಟಿಗೆಯಲ್ಲಿ ದುರ್ಗಾದೇವಿ ಮತ್ತು ವಿಷ್ಣು ದೇವರ ಫೋಟೋ ಇತ್ತು. ಜತೆಗೆ ಮಗುವಿನ ಜಾತಕವೂ ಸಿಕ್ಕಿದೆ. ಅದರಲ್ಲಿ ಈ ಮಗುವಿನ ಹೆಸರು ಗಂಗಾ ಎಂದಿದೆ. ಇಂತಹ ಘಟನೆ ದಾದ್ರಿಘಾಟ್ ಬಳಿ ಸೋಮವಾರ ನಡೆದಿದೆ. ಈ ಪೆಟ್ಟಿಗೆಯಲ್ಲಿ ಮಗುವನ್ನು ಯಾರಿಟ್ಟರು? ಯಾಕಿಟ್ಟರು? ಎಂಬ ಮಾಹಿತಿ ತಿಳಿದಿಲ್ಲ. ಗಂಗೆಯಲ್ಲಿ ತೇಲಿಬಂದ ಈ ಮಗು ಸಾಕ್ಷಾತ್ ದೇವತೆ ಎಂದೇ ಸ್ಥಳೀಯರು ಭಾವಿಸಿದ್ದಾರೆ.
ಗಂಗಾನದಿ ದಡದಲ್ಲಿ ಸಿಕ್ಕ ಮಗುವನ್ನ ಗುಲ್ಲು ಎಂಬಾತ ತನ್ನ ಮನೆಗೆ ಕರೆದೊಯ್ದು ಸ್ನಾನ ಮಾಡಿಸಿ ಹಾಲು ಕೊಟ್ಟಿದ್ದಾರೆ. ಸೋಮವಾರ ಸಂಜೆ, ಯುವಕ ಮತ್ತು ಯುವತಿಯರಿಬ್ಬರು ದಾದ್ರಿಘಾಟ್‌ಗೆ ಬಂದು ಮಗು ನೀಡುವಂತೆ ಕೇಳಿದ್ದು, ಇದಕ್ಕೆ ಗುಲ್ಲು ನಿರಾಕರಿಸಿದ್ದಾರೆ. ಅಲ್ಲದೆ, ಆ ಮಗುವನ್ನು ತಾನೇ ಬೆಳೆಸುವೆ. ಇದರ ಸಂಪೂರ್ಣ ಜವಾಬ್ದಾರಿ ನನ್ನದು. ಮಗು ನನ್ನ ಬಳಿಯೇ ಇರಲಿ ಎಂದು ಗುಲ್ಲಾ ಅವರು ಪೊಲೀಸರಿಗೆ ಮನವಿ ಪತ್ರ ಬರೆದಿದ್ದಾರೆ. ಸದ್ಯ ಆ ಮಗು ಎಲ್ಲಿ ಬೆಳೇಯಬೇಕೆಂದು ನಿರ್ಧಾರವಾಗಿಲ್ಲ.