ವಾಶಿಂಗ್ಟನ್: ಜಗತ್ತಿನಾದ್ಯಂತ ಬ್ಯಾಂಕುಗಳು, ಏರ್ ಲೈನ್ ಸಂಸ್ಥೆಗಳು ಹಾಗೂ ಪ್ರಮುಖ ಕಂಪೆನಿಗಳ ಜಾಲತಾಣಗಳು ಕೆಲವು ತಾಸುಗಳವರೆಗೆ ಸ್ಥಗಿತಗೊಂಡ ಕಾರಣ ಅವುಗಳ ಸೇವೆಗಳು ಬಾಧಿತವಾದವು. ಇಂಟರ್ನೆಟ್ ಸ್ಥಗಿತಗೊಂಡಿದ್ದರಿಂದ ಆಸ್ಟ್ರೇಲಿಯಲ್ಲಿ ವಿವಿಧ ಬ್ಯಾಂಕಿಂಗ್ ಸೇವೆಗಳು ಅಸ್ತವ್ಯಸ್ತಗೊಂಡವು. ಸೆಂಟ್ರಲ್ ಬ್ಯಾಂಕ್‌ನ ವೆಬ್‌ಸೈಟ್‌ಗಳು, ವೆಸ್ಟ್‌ಪ್ಯಾಕ್,ಎಎನ್‌ಝಡ್, ದಿ ಕಾಮನ್ವೆಲ್ತ್ ಹಾಗೂ ಸೈಂಟ್ ಜಾರ್ಜ್ ಬ್ಯಾಂಕ್‌ನ ಅಂತರ್ಜಾಲ ವ್ಯವಸ್ಥೆಯಲ್ಲಿ ವ್ಯತ್ಯಯವಾಗಿತ್ತು.
ವರ್ಜಿನ್ ಆಸ್ಟ್ರೇಲಿಯ ಹಾಗೂ ಅಮೆರಿಕದ ಏರ್ಲೈನ್ ಸಂಸ್ಥೆಗಳಾದ ಸೌತ್ವೆಸ್ಟ್ ಏರ್ಲೈನ್ಸ್, ಯುನೈಟೆಡ್ ಏರ್‌ಲೈನ್ಸ್ ಹಾಗೂ ಡೆಲ್ಟಾ ಏರ್‌ಲೈನ್ಸ್ ಮತ್ತಿತರ ವಿಮಾನಯಾನ ಸಂಸ್ಥೆಗಳಲ್ಲಿಯೂ ಅಂತರ್ಜಾಲ ಸೇವೆ ಬಾಧಿತಗೊಂಡಿರುವುದಾಗಿ ವರದಿಯಾಗಿದೆ.
ಇಂಟರ್‌ನೆಟ್ ಸ್ಥಗಿತದಿಂದಾಗಿ ಆಸ್ಟ್ರೇಲಿಯದಲ್ಲಿ ಅಂಚೆಸೇವೆಗಳಲ್ಲೂ ವ್ಯತ್ಯಯವುಂಟಾಗಿತ್ತು ''ನಮ್ಮ ಬಹುತೇಕ ಸೇವೆಗಳು ಈಗ ಅನ್ಲೈನ್ಗೆ ಮರಳಿದ್ದು, ಅದರ ಮೇಲೆ ನಿಗಾವಣೆಯನ್ನು ಮುಂದುವರಿಸಲಾಗಿದೆ ಹಾಗೂ ಇಂಟರ್ನೆಟ್ ವ್ಯತ್ಯಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ'' ಎಂದು ಆಸ್ಟ್ರೇಲಿಯದ ಅಂಚೆ ಇಲಾಖೆ ಆಸ್ಟ್ರೇಲಿಯನ್ ಪೋಸ್ಟ್ ವರದಿ ಮಾಡಿದೆ. ಈ ಮದ್ಯೆ ಹಾಂಕಾಂಗ್ನ ಶೇರು ವಿನಿಮಯ ಕೇಂದ್ರದ ಅಧಿಕೃತ ವೆಬ್ಸೈಟ್ನ ಸೇವೆಯಲ್ಲಿಯೂ ತುಸು ಹೊತ್ತು ವ್ಯತ್ಯಯವುಂಟಾಗಿದ್ದು, ಆನಂತರ ಅದನ್ನು ಮರುಸ್ಥಾಪಿಸಲಾಯಿತೆಂದು ಅವರು ಹೇಳಿದ್ದಾರೆ.
ಜೂನ್ 8ರಂದು ಬ್ರಿಟನ್ ಸರಕಾರ, ಈ-ಕಾಮರ್ಸ್ ಕಂಪೆನಿ ಅಮೆಝಾನ್, ಸರ್ಚ್ ಇಂಜಿನ್ ಗೂಗಲ್ ಹಾಗೂ ಪ್ರಮುಖ ಸುದ್ದಿಜಾಲತಾಣಗಳಾದ ಫೈನಾನ್ಶಿಯಲ್ ಟೈಮ್ಸ್, ನ್ಯೂಯಾರ್ಕ್ ಟೈಮ್ಸ್, ದಿ ಗಾರ್ಡಿಯನ್ ಹಾಗೂ ಬ್ಲೂಮ್ಬರ್ಗ್ ನ್ಯೂಸ್ ಸೇರಿದಂತೆ ಜಗತ್ತಿನಾದ್ಯಂತದ ಪ್ರಮುಖ ವೆಬ್ಸೈಟ್ಗಳ ಸೇವೆಯಲ್ಲಿಯೂ ಅಡಚಣೆಯುಂಟಾಗಿತ್ತು.