HEALTH TIPS

'ವಿಶೇಷ ಸ್ಥಾನಮಾನ'ವಿಲ್ಲದೆ ಚುನಾವಣೆಗೆ ನಿಲ್ಲುವುದಿಲ್ಲ: ಮೆಹಬೂಬ ಮುಫ್ತಿ, ಓಮರ್‌

            ಶ್ರೀನಗರ: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಿದರೆ ಮಾತ್ರ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಾಗಿ ರಾಜ್ಯದ ಇಬ್ಬರು ನಾಯಕರಾದ ಮೆಹಬೂಬಾ ಮುಫ್ತಿ ಹಾಗೂ ಒಮರ್‌ ಅಬ್ದುಲ್ಲಾ ಅವರು ಷರತ್ತು ವಿಧಿಸಿದ್ದಾರೆ.

         ಜಮ್ಮು ಕಾಶ್ಮೀರದಲ್ಲಿ ರಾಜಕೀಯ ಚಟುವಟಿಕೆಗಳನ್ನು ಆರಂಭಿಸುವುದಕ್ಕೆ ಸಂಬಂಧಿಸಿದಂತೆ, ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತುಕತೆ ನಡೆಸಿದ ಎರಡೇ ದಿನಗಳಲ್ಲಿ ಮುಖಂಡರು ನೀಡಿರುವ ಈ ಹೇಳಿಕೆಯು ಇಲ್ಲಿ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಮತ್ತಷ್ಟು ತಡವಾಗಬಹುದು ಎಂಬ ಸಂದೇಹವನ್ನು ಮೂಡಿಸಿದೆ.

         'ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಿದರೆ ಮಾತ್ರ ವಿಧಾನಸಭೆ ಚುನಾವಣೆಯಲ್ಲಿ ಭಾಗವಹಿಸುತ್ತೇವೆ' ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

'ನನ್ನ ಮಾತುಗಳು ಬರಿಯ ರಾಜಕೀಯ ಘೋಷಣೆ ಅಲ್ಲ. ಸಂವಿಧಾನದ 370ನೇ ವಿಧಿ ಹಾಗೂ ಕಲಮು 35ಎ ಅನ್ನು ಮರುಸ್ಥಾಪಿಸುವವರೆಗೆ ನಾನು ಯಾವ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ. ಇದಕ್ಕೆ ತಿಂಗಳುಗಳು ಅಥವಾ ವರ್ಷಗಳೇ ಹಿಡಿಯಲಿ, ನಾವು ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸಿಯೇ ತೀರುತ್ತೇವೆ' ಎಂದು ಮೆಹಬೂಬಾ ಹೇಳಿದ್ದಾರೆ.

        ನ್ಯಾಷನಲ್‌ ಕಾನ್ಫರೆನ್ಸ್‌ನ ಉಪಾಧ್ಯಕ್ಷ ಒಮರ್‌ ಅಬ್ದುಲ್ಲ ಅವರೂ, 'ನಾವು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂದರೆ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸುವುದು ಅಗತ್ಯ' ಎಂದಿದ್ದಾರೆ.

         ಕಳೆದ ವರ್ಷ ನವೆಂಬರ್- ಡಿಸೆಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದ್ದ ಜಿಲ್ಲಾಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯಲ್ಲಿ ಪಿಡಿಪಿ ಮತ್ತು ಎನ್‌ಸಿ ಸ್ಪರ್ಧಿಸಿದ್ದವು.

ಪಕ್ಷದ ಸದಸ್ಯರಿಂದ ಆಕ್ಷೇಪ: ಎರಡೂ ಪಕ್ಷಗಳ ಮುಖಂಡರ ಹೇಳಿಕೆಗಳನ್ನು ಆಯಾ ಪಕ್ಷಗಳ ಇತರ ಕೆಲವು ನಾಯಕರು ಆಕ್ಷೇಪಿಸಿದ್ದಾರೆ. ಚುನಾವಣೆಯಲ್ಲಿ ಪಾಲ್ಗೊಳ್ಳದಿರುವುದರಿಂದ ಪಕ್ಷದ ಅಸ್ತಿತ್ವಕ್ಕೇ ಧಕ್ಕೆ ಆಗಬಹುದು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೆಲವು ನಾಯಕರು ಹೇಳಿದ್ದಾರೆ.

'ಮೆಹಬೂಬಾ ಅವರು ಸರ್ಕಾರದ ಮುಂದಿಟ್ಟಿರುವ ಷರತ್ತುಗಳಿಂದ ಪಿಡಿಪಿಯೇ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. 2018ರಲ್ಲಿ ಅವರು ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಬಹಿಷ್ಕರಿಸಿದ್ದರು. ಅದರಿಂದ ಜಮ್ಮು ಮತ್ತು ಕಾಶ್ಮೀರದ ಹಿತಾಸಕ್ತಿಗೆ ಧಕ್ಕೆಯಾಯಿತು ಮತ್ತು ಪಿಡಿಪಿಗೆ ನಷ್ಟವಾಯಿತು. ಈಗಲೂ ಮೆಹಬೂಬಾ ಅವರ ತೀರ್ಮಾನವು ಅಪ್ರಬುದ್ಧವಾಗಿದೆ ಎಂದು ನನ್ನ ಅನಿಸಿಕೆ. ವಿಶೇಷ ಸ್ಥಾನಮಾನ ಮರುಸ್ಥಾಪಿಸುವುದು ಅಸಾಧ್ಯ ಏಂದು ನಮಗೆಲ್ಲರಿಗೂ ತಿಳಿದಿದೆ. ಇಂಥ ನಡೆಯಿಂದ ಪಕ್ಷಕ್ಕೆ ಇನ್ನಷ್ಟು ಹಾನಿ ಖಂಡಿತ' ಎಂದು ಪಿಡಿಪಿಯ ನಾಯಕರೊಬ್ಬರು ಹೇಳಿದ್ದಾರೆ.

ವಿಶೇಷ ಸ್ಥಾನಮಾನ ಮರುಸ್ಥಾಪನೆ ಕುರಿತು ಬಿಜೆಪಿ ಹೊರತುಪಡಿಸಿ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಏಕಾಭಿಪ್ರಾಯ ಹೊಂದಿವೆ. ಆದರೂ, ಒಮರ್‌ ಮತ್ತು ಮೆಹಬೂಬಾ ಅವರ ಷರತ್ತು ಈಡೇರಿಸುವುದು ಅಸಾಧ್ಯ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. 'ಈ ನಿರ್ಧಾರವು ಜಮ್ಮು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ಮತ್ತಷ್ಟು ನಿಧಾನವಾಗಿಸಲಿದೆ. ಈ ಇಬ್ಬರೂ ನಾಯಕರ ಮೇಲೆ ಮತದಾರರ ಒತ್ತಡ ಇದೆ. ನಾವು ಕೇಂದ್ರ ಸರ್ಕಾರದ ಆಣತಿಯಂತೆ ನಡೆವ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ತಮ್ಮ ಮತದಾರರಿಗೆ ಅವರು ತೋರಿಸಿಕೊಡುತ್ತಿದ್ದಾರೆ' ಎಂದು ವಿಶ್ಲೇಷಕರು ಹೇಳಿದ್ದಾರೆ.

                              ಕಾಂಗ್ರೆಸ್‌ ಬಗ್ಗೆ ನಿರಾಸೆ

    ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಮರುಸ್ಥಾಪಿಸುವ ವಿಚಾರದಲ್ಲಿ ಕಾಂಗ್ರೆಸ್‌ ತಾಳಿರುವ ಮೌನವು ಅಲ್ಲಿನ ನಾಯಕರಲ್ಲಿ ನಿರಾಸೆ ಮೂಡಿಸಿದೆ. 'ಈ ವಿಷಯವಾಗಿ ರಾಷ್ಟ್ರೀಯ ಪಕ್ಷಗಳು ಗೊಂದಲದಲ್ಲಿ ಇರುವಂತೆ ಕಾಣುತ್ತಿದೆ' ಎಂದು ಸಿಪಿಎಂ ನಾಯಕ ಮತ್ತು ಗುಪ್ಕಾರ್ ಕೂಟದ ವಕ್ತಾರ ಯೂಸುಫ್‌ ತಾರಿಗಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

       'ರಾಜ್ಯದ ವಿಶೇಷ ಸ್ಥಾನಮಾನ ಮತ್ತು ಜನರ ಸಾಂವಿಧಾನಿಕ ಹಕ್ಕಿನ ಮರುಸ್ಥಾಪನೆ ಆಗಲೇಬೇಕು. ರಾಜ್ಯಪಾಲರು ಯಾವತ್ತೂ ಸಾಂವಿಧಾನಿಕ ಸ್ಥಾನ ಅಥವಾ ಜನರ ಸಾಂವಿಧಾನಿಕ ಹಕ್ಕುಗಳನ್ನು ಪ್ರತಿನಿಧಿಸುವುದಿಲ್ಲ. ನಮ್ಮ ಬೇಡಿಕೆಗಳನ್ನು ಪ್ರಧಾನಿ ಪರಿಗಣಿಸಲೇಬೇಕು. ನೀವು ನಾಗಾಲೆಂಡ್‌ ಜತೆಗೂ ಮಾತುಕತೆ ನಡೆಸುತ್ತಿರುವಿರಿ. ಅವರನ್ನು ಸದೆಬಡಿಯುವ ಕೆಲಸ ಮಾಡುತ್ತಿಲ್ಲವಲ್ಲಾ, ಕಾಶ್ಮೀರದಲ್ಲೂ ಅದೇ ನಿಲುವನ್ನು ಯಾಕೆ ತೋರಿಸಬಾರದು? ರಾಷ್ಟ್ರೀಯ ಪಕ್ಷಗಳ ಮೌನವು ನಮ್ಮ ಚಿಂತೆಗೆ ಈಡುಮಾಡಿದೆ' ಎಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ತಾರಿಗಾಮಿ ಹೇಳಿದ್ದಾರೆ.

                    ಅಧಿಕಾರಿಗಳಿಂದ ಶ್ಲಾಘನೆ

    ಜಮ್ಮು ಕಾಶ್ಮೀರದ ಸಂಕೀರ್ಣವಾದ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರವು ಕೈಗೊಂಡ ಕ್ರಮ ಧೈರ್ಯಶಾಲಿ ಮತ್ತು ಅನುಕರಣೀಯವಾದ್ದು ಎಂದು 15ಮಂದಿ ನಿವೃತ್ತ ಐಪಿಎಸ್‌ ಅಧಿಕಾರಿಗಳು ಶ್ಲಾಘಿಸಿದ್ದಾರೆ.

     ಈ ಬಗ್ಗೆ ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದಿರುವ ಅಧಿಕಾರಿಗಳು, '1950ರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ದಿನದಿಂದಲೇ, ಕಾಶ್ಮೀರವನ್ನು ಸಂಪೂರ್ಣವಾಗಿ ಭಾರತದಲ್ಲಿ ವಿಲೀನಗೊಳಿಸುವ ಪ್ರಕ್ರಿಯೆ ಅಪೂರ್ಣವಾಗಿ ಉಳಿದಿತ್ತು. ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ನಿಟ್ಟಿನಲ್ಲಿ ನಡೆಸಿದ ಪ್ರಯತ್ನವು ಸ್ಪಷ್ಟವಾಗಿ ಗೋಚರಿಸುವಂಥದ್ದು. ಯಾವುದೇ ಪ್ರಾಣಹಾನಿ ಆಗದಂತೆ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಕ್ರಮ ಶ್ಲಾಘನೀಯ' ಎಂದಿದ್ದಾರೆ.

ಪತ್ರಕ್ಕೆ ಸಹಿಮಾಡಿದವರಲ್ಲಿ 10 ಮಂದಿ, ಈ ರಾಜ್ಯದಲ್ಲಿ ಡಿಜಿಪಿ ಹುದ್ದೆಯಲ್ಲಿ ಸೇವೆ ಸಲ್ಲಿಸಿದವರಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries