ಡೆಹ್ರಾಡೂನ್: ಸೇಬನ್ನು ಮಂಗಗಳಿಂದ ರಕ್ಷಿಸಿ ಇಲ್ಲವೇ ಕ್ರಮ ಎದುರಿಸಿ ಎಂದು ಕಿರಿಯ ಸಿಬ್ಬಂದಿಗಳಿಗೆ ಉತ್ತರಾಖಂಡ್ ಪೊಲೀಸ್ ಅಧಿಕಾರಿ ಕಳಿಸಿದ ಮೆಮೋ ವೈರಲ್ ಆಗತೊಡಗಿದೆ.
ಇಲಾಖೆಯ ಆಂತರಿಕ ಮೆಮೋ ಇದಾಗಿದ್ದು ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ.ನೀರು ಗರ್ಗ್, 2005 ಬ್ಯಾಚ್ ನ ಐಪಿಎಸ್ ಅಧಿಕಾರಿ ಹಾಗೂ ಗರ್ವಾಲ್ ರೇಂಜ್ ನ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಜೂ.26 ರಂದು, 2021 ಹೊರಡಿಸಿರುವ ಆದೇಶದಲ್ಲಿ "ಡಿಐಜಿ ಕಚೇರಿಗೆ ಈ ರೀತಿಯಾಗಿ ಮೆಮೋ ಕಳಿಸಿರುವುದರ ಬಗ್ಗೆ ಯಾವುದೇ ಅರಿವಿಲ್ಲ. ಈ ಬಗ್ಗೆ ತನಿಖೆ ನಡೆಸಿ, ಕ್ರಮ ಕೈಗೊಂಡ ಬಗ್ಗೆ ವರದಿ ಸಲ್ಲಿಸಿ" ಎಂದು ಹೇಳಿದೆ.
ಪೌರಿ ಜಿಲ್ಲೆಯ ಹಿರಿಯ ಎಸ್ ಪಿಯೊಬ್ಬರು ತನಿಖೆಯನ್ನು ನಡೆಸಲಿದ್ದಾರೆ. "ಡಿಐಜಿ ಅವರ ಅಧಿಕೃತ ನಿವಾಸದಲ್ಲಿ ಸೇಬಿನ ಮರವೊಂದಿದೆ. ಅಧಿಕೃತ ನಿವಾಸದಲ್ಲಿರುವ ಭದ್ರತಾ ಸಿಬ್ಬಂದಿಗಳು, ಸೇಬಿನ ಮರವನ್ನು ರಕ್ಷಿಸುವುದರಲ್ಲಿ ಯಾವುದೇ ಲೋಪವೂ ಉಂಟಾಗಬಾರದು, ಒಂದು ವೇಳೆ ಉಂಟಾದಲ್ಲಿ ಗಾರ್ಡ್ ಗಳ ವಿರುದ್ಧ ಕ್ರಮ ಜರುಗಿಸಬೇಕೆಂದು" ಮೆಮೋದಲ್ಲಿ ಹೇಳಲಾಗಿದೆ.