HEALTH TIPS

ಪತ್ರಕರ್ತರಿಗೆ ಗುರುತು ಪತ್ರ, ಆಹಾರ ಕಿಟ್ ವಿತರಣೆ: ಅಗಲಿದ ಮಹನೀಯರ ಸಂಸ್ಮರಣೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇಂದಿನ ಸಂಧಿಕಾಲದ ಸಂಕಷ್ಟದಲ್ಲಿ ಪತ್ರಕರ್ತರಿಗೆ ಆಸರೆಯೊದಗಿಸಲು ಪ್ರಯತ್ನಿಸುತ್ತಿದೆ: ಶಿವಾನಂದ ತಗಡೂರು

      

                    ಕುಂಬಳೆ: ಕೋವಿಡ್ ತಂದೊಡ್ಡಿರುವ ವಿಪತ್ತಿನಿಂದ ಎಲ್ಲೆಡೆ ಭಾರೀ ಸವಾಲುಗಳು ಕಂಗೆಡಿಸಿವೆ. ಈ ಪೈಕಿ ಮಾಧ್ಯಮ ಕ್ಷೇತ್ರದ ಪತ್ರಕರ್ತರ ಬವಣೆಗಳು ವ್ಯಾಪಕ ಆತಂಕಕ್ಕೊಳಪಡಿಸುತ್ತಿದ್ದು, ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಆಸರೆಯೊದಗಿಸಲು ಪ್ರಯತ್ನಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.

                  ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘ ಶುಕ್ರವಾರ ಸಂಜೆ ಕುಂಬಳೆಯ ಅನ್ನಪೂರ್ಣ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಕರ್ತರಿಗಿರುವ ಗುರುತು ಪತ್ರ ವಿತರಣೆ, ಆಹಾರ ಕಿಟ್ ವಿತರಣೆ ಮತ್ತು ಅಗಲಿದ ಮಹನೀಯರ ಸಂಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

              ಕಾಸರಗೋಡಿನ ಕನ್ನಡ ಮಾಧ್ಯಮ ಪತ್ರಕರ್ತರ ಸಮಗ್ರ ಅಭಿವೃದ್ದಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಎಂದಿಗೂ ಹಿಂದೇಟು ಹಾಕದು. ಇಲ್ಲಿಯ ಪತ್ರಕರ್ತರ ಅತಂತ್ರತೆ, ನ್ಯಾಯಯುತ ನೆರವಿನ ಕೊರತೆಯನ್ನು ನಾವು ಮನಗಂಡಿದ್ದೇವೆ. ಪತ್ರಕರ್ತರ ಕ್ಷೇಮನಿಧಿ ಸಹಿತ ಅಗತ್ಯ ಸವಲತ್ತುಗಳಿಗೆ ವ್ಯವಸ್ಥೆ ಕಲ್ಪಿಸಲಾಗುವುದೆಂದು ಅವರು ತಿಳಿಸಿದರು. 

             ಕಾಸರಗೋಡು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಏಷ್ಯಾ ಪತ್ರಕರ್ತರ ಒಕ್ಕೂಟದ ಸಂಚಾಲಕ ಮದನ ಗೌಡ ಅವರು ಮಾತನಾಡಿ, ಮಾಧ್ಯಮ ವ್ಯವಸ್ಥೆಯ ನೈಜ ರೂವಾರಿಗಳಾದ ಪತ್ರಕರ್ತರ ಆಶೋತ್ತರಗಳಿಗೆ ಸಂಘಟನೆಯ ಮೂಲಕ ನ್ಯಾಯ ದೊರಕಿಸುವುದು  ಇಂದು ತುರ್ತು ಆಗಬೇಕಿದೆ. ಪ್ರತಿಯೊಬ್ಬ ಪತ್ರಕರ್ತನ ಏಳ್ಗೆಗಾಗಿ ಪರಸ್ಪರ ಸಂಘಟನಾತ್ಮಕವಾಗಿ ಕೈಜೋಡಿಸಿದಾಗ ಯಶಸ್ಸು ಲಭ್ಯವಾಗುತ್ತದೆ. ಬದಲಾದ ಇಂದಿನ ಮಾಧ್ಯಮ ಕ್ಷೇತ್ರ ಕಾಲದೊಂದಿಗೆ ಹೆಜ್ಜೆ ಹಾಕಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು. 


           ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದು ಮಾತನಾಡಿದರು. ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಕೋಶಾಧಿಕಾರಿ ಪುಷ್ಪರಾಜ್ ಸಮಾಜ ಸೇವಕ ಸಿದ್ದೀಕ್ ಮಾದುಮೂಲೆ ಉಪಸ್ಥಿತರಿದ್ದು ಶುಭಹಾರೈಸಿದರು.

              ಈ ಸಂದರ್ಭ ಇತ್ತೀಚೆಗೆ ಅಗಲಿದ ಖ್ಯಾತ ಕವಿ, ಸಂಶೋಧಕ ನಾಡೋಜ ಡಾ. ಸಿದ್ದಲಿಂಗಯ್ಯ, ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ಆರ್.ಠಾಗೂರ್ ಮತ್ತು ದೊರೆಸ್ವಾಮಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಕಾಸರಗೋಡು ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ, ನಿವೃತ್ತ ಬ್ಯಾಂಕ್ ಅಧಿಕಾರಿ ಎಸ್.ಜಗನ್ನಾಥ ಶೆಟ್ಟಿ ನುಡಿನಮನ  ಸಲ್ಲಿಸಿದರು. 

         ಮಂಜೇಶ್ವರ ಕ್ಷೇತ್ರದ ಶಾಸಕ ಎ.ಕೆ.ಎಂ.ಅಶ್ರಫ್ ಹಾಗೂ ಸಮಾಜ ಸೇವಕ ಸಿದ್ದೀಕ್ ಮಾದಮೂಲೆ ಅವರನ್ನು ಈ ಸಂದರ್ಭ ಅಭಿನಂದಿಸಿ ಗೌರವಿಸಲಾಯಿತು. ಸ್ಪಂದನ  ಕುಂಬಳೆಯ ಪೃಥ್ವಿರಾಜ್ ಶೆಟ್ಟಿ ಉಪಸ್ಥಿತರಿದ್ದು ಸಹಕರಿಸಿದರು. ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ ಯಾದವ್ ತೆಕ್ಕೆಮೂಲೆ ಸ್ವಾಗತಿಸಿ, ಕೋಶಾಧಿಕಾರಿ ಪುರುಷೋತ್ತಮ ಪೆರ್ಲ ವಂದಿಸಿದರು. ಪುರುಷೋತ್ತಮ ಭಟ್ ಕೆ. ಕಾರ್ಯಕ್ರಮ ನಿರೂಪಿಸಿದರು.  

                 ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅವರು, ಮಂಜೇಶ್ವರದ ಸಮಸ್ತ ಕನ್ನಡಿಗರ ಪ್ರತಿನಿಧಿಯಾಗಿ ನಾನು ಶಾಸಕನಾಗಿ ಆಯ್ಕೆಯಾಗಿರುವುದು ನನ್ನ ಕನ್ನಡ ಪ್ರೇಮದ ಸಂಕೇತ. ಮುಂದಿನ ಐದು ವರ್ಷಗಳಲ್ಲಿ ಕಾಸರಗೋಡಿನ ಕನ್ನಡಿಗರ ಆಶೋತ್ತರಗಳನ್ನು ಪೂರೈಸಲು ಕಟಿಬದ್ದನಾಗಿದ್ದು, ಗರಿಷ್ಠ ಮಟ್ಟದಲ್ಲಿ ಕಾರ್ಯನಿರ್ವಹಿಸುವೆ. ತಿರುವನಂತಪುರದಲ್ಲೂ ಕನ್ನಡ ಸಂಘಟನೆಯೊಂದನ್ನು ರೂಪಿಸುವೆ. ಅನೇಕ ಪ್ರತಿರೋಧದ ನಡುವೆಯೂ ಪಕ್ಷಾತೀತನಾಗಿ ಕನ್ನಡದ ಏಳ್ಗೆಗೆ ಕಾರ್ಯನಿರ್ವಹಿಸುವೆ. ಕನ್ನಡ ಪತ್ರಕರ್ತರ ಬವಣೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುವೆ ಎಂದು ತಿಳಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries