ನವದೆಹಲಿ : ಕರೊನಾದಿಂದಾಗಿ ಅಂತರರಾಷ್ಟ್ರೀಯ ವಾಣಿಜ್ಯ ವಿಮಾನಗಳ ಮೇಲೆ ನಿರ್ಬಂಧಗಳಿರುವುದರಿಂದ ಭಾರತದಲ್ಲೇ ಇರಬೇಕಾಗಿ ಬಂದಿರುವ ವಿದೇಶೀಯರ ವೀಸಾ ವಾಲಿಡಿಟಿಯನ್ನು ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ. ಹಲವು ವಿದೇಶೀಯರು 2020ರ ಮಾರ್ಚ್ನಿಂದಲೂ ಭಾರತದಲ್ಲೇ ವಾಸಿಸುತ್ತಿದ್ದು, ಈವರೆಗೆ ವೀಸಾ ಅವಧಿಯಲ್ಲಿ ಮಾಸಿಕ ವಿಸ್ತರಣೆ ಪಡೆಯುತ್ತಿದ್ದರು ಎನ್ನಲಾಗಿದೆ.
'ಸಾಮಾನ್ಯ ರೀತಿಯಲ್ಲಿ ವಾಣಿಜ್ಯ ವಿಮಾನ ಹಾರಾಟವನ್ನು ಪುನರಾರಂಭಿಸದೆ ಇರುವುದರಿಂದ ಭಾರತದಲ್ಲಿ ಸಿಲುಕಿರುವಂತಹ ವಿದೇಶಿ ಪ್ರಜೆಗಳ ಭಾರತೀಯ ವೀಸಾ ಅಥವಾ ವಾಸ್ತವ್ಯದ ಅವಧಿಯನ್ನು 31.08.2021 ರವರೆಗೆ ಉಚಿತವೆಂದು ಪರಿಗಣಿಸಲಾಗುತ್ತದೆ. ಈ ಕುರಿತಾಗಿ ಯಾವುದೇ ಓವರ್‌ಸ್ಟೇ ದಂಡ ವಿಧಿಸಲಾಗುವುದಿಲ್ಲ. ಇಂಥ ವಿದೇಶಿ ಪ್ರಜೆಗಳು ಪ್ರತ್ಯೇಕವಾಗಿ ವಿಸ್ತರಣೆ ಅರ್ಜಿಗಳನ್ನು ಸಲ್ಲಿಸುವ ಅಗತ್ಯವಿಲ್ಲ' ಎಂದು ಕೇಂದ್ರ ಗೃಹವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ.
ಸದರಿ ವಿದೇಶಿ ಪ್ರಜೆಗಳು ಭಾರತವನ್ನು ಬಿಟ್ಟು ಹೊರಹೋಗುವ ಅವಕಾಶ ಲಭಿಸಿದಾಗ ಎಕ್ಸಿಟ್ ಪರ್ಮಿಷನ್ಗಾಗಿ ಸಂಬಂಧಿತ ಎಫ್ಆರ್ಆರ್ಒಗೆ ಅರ್ಜಿ ಸಲ್ಲಿಸಬಹುದು. ಯಾವುದೇ ದಂಡ ವಿಧಿಸದೆ ತೆರಳಲು ಅನುಮತಿ ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.