ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಕರಂದಕ್ಕಾಡಿನ ಜಂಕ್ಷನ್‍ನಲ್ಲಿ ಕಳೆದ ಹಲವು ವರ್ಷಗಳಿಂದ ಕಾಡುಬೆಳೆದು ಮುಚ್ಚಿಕೊಂಡಿದ್ದ ಜಲಸಮೃದ್ಧಿಯಿಂದ ಕೂಡಿದ ಬಾವಿಗೆ ರೋಟರಿ ಕ್ಲಬ್ ಕಾಯಕಲ್ಪ ನೀಡಿದೆ.ಕಾಸರಗೋಡು ನಗರಸಭೆ ವ್ಯಾಪ್ತಿಯ ಕರಂದಕ್ಕಾಡಿನಲ್ಲಿ ರೋಟರಿಕ್ಲಬ್ ಕೈಗೊಂಡಿರುವ ಅಭಿವೃದ್ಧಿಕಾರ್ಯಗಳ ಹಿನ್ನೆಲೆಯಲ್ಲಿ ಬಾವಿಗೂ ದುರಸ್ತಿಭಾಗ್ಯ ಲಭಿಸಿದ್ದು, ಆಸುಪಾಸಿನ ಜನತೆಗೆ ಶುದ್ಧಕುಡಿಯುವ ನೀರು ಲಭಿಸುವಂತಾಗಿದೆ.
ಧಾರಾಳ ನೀರು ಲಭ್ಯವಾಗುತ್ತಿದ್ದ ಬಾವಿ ಸಮಾಜದ್ರೋಹಿಗಳ ಕೃತ್ಯದಿಂದ ನೀರು ಕಲುಷಿತಗೊಂಡು ಕುಡಿಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಕಾಸರಗೋಡು ನಗರಸಭೆಯ ಅನುಮತಿಯೊಂದಿಗೆ ಈ ಜಂಕ್ಷನ್ ಅಭಿವೃದ್ಧಿಪಡಿಸುವುದರ ಜತೆಗೆ ಬಾವಿಯ ಪುನಶ್ಚೇತನಕ್ಕೆ ಡಾ. ಜನಾರ್ದನ ನಾಯ್ಕ್ ನೇತೃತ್ವದ ಕಾಸರಗೋಡು ರೋಟರಿಕ್ಲಬ್ ಕಾರ್ಯಕರ್ತರು ಕೈಜೋಡಿಸಿದ್ದರು.ಸುಮಾರು ಮೂರು ಲಕ್ಷ ರೂ. ಖರ್ಚುಮಾಡಿ ಇಲ್ಲಿ ಅಭಿವೃದ್ಧಿಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಬಾವಿ ಶುಚೀಕರಣಗೊಂಡಿರುವುದರಿಂದ ಆಸುಪಾಸಿನ 20ಕ್ಕೂ ಹೆಚ್ಚು ಕುಟುಂಬಗಳಿಗೆ ಶುದ್ಧಕುಡಿಯುವ ನೀರು ಲಭ್ಯವಾಗುವಂತಾಗಿದೆ. ನಗರಸಭೆಯ ನಗರ ಸೌಂದರ್ಯ ಯೋಜನೆಯನ್ವಯ ಕರಂದಕ್ಕಾಡಿನಲ್ಲಿ ಈ ನಿರ್ಮಾಣ ಕಾರ್ಯ ನಡೆಸಲಾಗಿದೆ. ನಗರಸಭೆ ಸಹಕಾರದೊಂದಿಗೆ ರೋಟರಿ ಕ್ಲಬ್ ಇಲ್ಲಿ ಸುಂದರ ಹೂದೋಟ ಹಾಗೂ ವಿಶ್ರಾಂತಿ ಕೇಂದ್ರವನ್ನು ನಿರ್ಮಿಸಿದೆ. ಕೇಂದ್ರದಲ್ಲಿ ವ್ಯಾಯಾಮ ಹಾಗೂ ವಿಶ್ರಾಂತಿ ಕೇಂದ್ರವೂ ನಿರ್ಮಾಣಗೊಂಡಿದೆ. ಸುಂದರ ಹೂವಿನ ಗಿಡಗಳು, ಸಣ್ಣ ಮರಗಳನ್ನೂ ಇಲ್ಲಿ ಬೆಳೆಸಲಾಗಿದ್ದು, ಬೆಳಗ್ಗಿನ ವಾಯುವಿಹಾರಕ್ಕೆ ತೆರಳುವವರಿಗಾಗಿ ಇಲ್ಲಿ ಸರಳ ವ್ಯಾಯಾಮಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ನಗರಸಭಾ ಅಧ್ಯಕ್ಷ ವಕೀಲ ವಿ.ಎಂ ಮುನೀರ್ ಉದ್ಘಾಟಿಸಿದರು. ಡಾ. ಜನಾರ್ದನ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ರೋಟರಿಗವರ್ನರ್ ಹರಿಕೃಷ್ಣನ್, ಅಬ್ಬಾಸ್ ಬೀಗಂ, ದಿನಕರ ರೈ, ಎಂ.ಕೆ ನಂಬ್ಯಾರ್, ಡಾ. ನಾರಾಯಣ ನಾಯ್ಕ್, ಗೌತಂ ಭಕ್ತ, ಪಿ.ಪಿ ಯೂಸುಫ್, ಎಂ.ಟಿ ದಿನೇಶನ್, ಡಾ. ಎಂ.ಎಸ್. ರಾವ್, ಸರ್ವಮಂಗಳ, ನಾಗೇಶ್, ಹಮೀದ್, ಜ್ಯೋತಿ ಉಪಸ್ಥಿತರಿದ್ದರು.