ತಿರುವನಂತಪುರ:ಟಿ.ವಿ. ಚಾನೆಲ್ ಕಾರ್ಯಕ್ರಮವೊಂದರಲ್ಲಿ ದೂರುದಾರರ ಮೇಲೆ ದೌರ್ಜನ್ಯ ನಡೆಸಿದ ವಿವಾದದ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಎಂ.ಸಿ ಜೋಸೆಫೀನ್ ರಾಜೀನಾಮೆ ನೀಡಿದ್ದಾರೆ. ಪ್ರತಿಪಕ್ಷಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚುತ್ತಿರುವ ಪ್ರತಿಭಟನೆಗಳ ನಡುವೆ ಸಿಪಿಎಂ ಪಕ್ಷದ ಸಭೆಯ ಬಳಿಕ ಜೋಸೆಫೀನ್ ರಾಜೀನಾಮೆ ನೀಡಿದರು. ಇದನ್ನು ಅನುಸರಿಸಿ, ಮಹಿಳಾ ಆಯೋಗದ ಮುಂದಿನ ಅಧ್ಯಕ್ಷರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಸೋಷಿಯಲ್ ಮೀಡಿಯಾ ಸೇರಿದಂತೆ ಹಲವೆಡೆ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿ ಚರ್ಚೆಗಳು ಬಲಗೊಂಡಿದೆ.
ಅಧ್ಯಕ್ಷ ಪದವಿಗೆ ಹಲವರು:
ಜೋಸೆಫೀನ್ ಅವರ ರಾಜೀನಾಮೆಗೆ ಬೇಡಿಕೆ ಹೆಚ್ಚುತ್ತಿದ್ದಂತೆ, ಮುಂದಿನ ಅಧ್ಯಕ್ಷರು ಯಾರು ಎಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳು ಪ್ರಾರಂಭವಾದವು. ರಾಜೀನಾಮೆ ಘೋಷಿಸಿದಾಗಿನಿಂದ ಮಾತುಕತೆ ಸಕ್ರಿಯವಾಗಿದೆ. ಜೋಸೆಫೀನ್ ರಾಜೀನಾಮೆಯೊಂದಿಗೆ ಮಹಿಳಾ ಆಯೋಗದ ಹೊಸ ಅಧ್ಯಕ್ಷರನ್ನು ಹುಡುಕಾಟದಲ್ಲಿ ಸಿಪಿಎಂ ತೊಡಗಿದೆ ಎನ್ನಲಾಗಿದೆ. ವರದಿಯ ಪ್ರಕಾರ ಮಹಿಳಾ ನಾಯಕಿಯರು, ಕಾನೂನು ವಿದ್ವಾಂಸರು ಮತ್ತು ಸಾರ್ವಜನಿಕರ ಹೆಸರನ್ನು ಪರಿಗಣಿಸಲಾಗುವುದು.
ಚರ್ಚೆಗಳಲ್ಲಿ ಪಿಕೆ ಶ್ರೀಮತಿ:
ಮಾಧ್ಯಮ ವರದಿಗಳ ಪ್ರಕಾರ, ಸಿಪಿಎಂ ಕೇಂದ್ರ ಸಮಿತಿಯ ಸದಸ್ಯೆ ಮತ್ತು ಮಾಜಿ ಸಚಿವೆ ಪಿ.ಕೆ. ಶ್ರೀಮತಿ ಟೀಚರ್ ಅವರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ. ಸೋಷಿಯಲ್ ಮೀಡಿಯಾ ಚರ್ಚೆಗಳಲ್ಲಿ ಶ್ರೀಮತಿ ಪಿಕೆ ಅವರ ಹೆಸರು ಕೂಡ ಸಕ್ರಿಯವಾಗಿದೆ. ಮೊನ್ನೆ ಸಿಪಿಎಂ ಸಭೆಯ ತರುವಾಯ ಜೋಸೆಫೀನ್ ಅವರನ್ನು ಸಾರ್ವಜನಿಕವಾಗಿ ಟೀಕಿಸುವ ಮುಂಚೂಣಿಯಲ್ಲಿ ಶ್ರೀಮತಿ ಟೀಚರ್ ಕಾಣಿಸಕೊಂಡಿರುವುದು ವಿಶೇಷವಾಗಿತ್ತು.
ದೂರುದಾರರನ್ನು ಗೌರವದಿಂದ ಕಾಣಬೇಕು: ಶ್ರೀಮತಿ
ಸಿಪಿಎಂ ಸೆಕ್ರೆಟರಿಯಟ್ ಸಭೆಯ ನಂತರವೇ ಪಿಕೆ ಶ್ರೀಮತಿ ಟೀಕೆಗಳಲ್ಲಿ ಸಕ್ರಿಯರಾದರು. ಮಹಿಳಾ ಆಯೋಗವು ಅಸಹಾಯಕ ಮಹಿಳೆಯರಿಗೆ ಕೊನೆಯ ಅವಕಾಶವಾಗಿದೆ. ದೂರುದಾರರನ್ನು ಗೌರವದಿಂದ ಮತ್ತು ಮಾನವೀಯವಾಗಿ ಪರಿಗಣಿಸಬೇಕು ಎಂದು ಪಿಕೆ ಶ್ರೀಮತಿ ಮಾಧ್ಯಮಗಳಿಗೆ ತಿಳಿಸಿದ್ದರು.
ಮೆರ್ಸಿಕುಟ್ಟಿಯಮ್ಮ ಆದರೇ?:
ಪಿಕೆ ಶ್ರೀಮತಿ ಹೊರತುಪಡಿಸಿ, ಮಾಜಿ ಸಚಿವೆ ಜೆ. ಮೆರ್ಸಿಕುಟ್ಟಿಯಮ್ಮ ಅವರ ಹೆಸರೂ ಚರ್ಚೆಯಲ್ಲಿದೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮರ್ಸಿಕುಟ್ಟಿಯಮ್ಮ ಪರಾಭವಗೊಂಡಿದ್ದರು. ಅವರಲ್ಲದೆ ಟಿಎನ್ ಸೀಮಾ, ಸಿ.ಎಸ್.ಸುಜಾತಾ ಮತ್ತು ಸುಸಾನ್ ಕೋಡಿ ಅವರ ಹೆಸರುಗಳೂ ಚರ್ಚೆಯಲ್ಲಿವೆ.
ರಾಜಕಾರಣದಿಂದ ಪೂರ್ಣ ಹೊರಗಿನವರಿಗೆ ಆದ್ಯತೆ!:
ರಾಜಕಾರಣಿಗಳ ಬದಲಿಗೆ ಪೂರ್ಣ ಪ್ರಮಾಣದ ರಾಜಕಾರಣದಿಂದ ಹೊರತಾಗಿರುವವರನ್ನು ಅ|ಧ್ಯಕ್ಷೆಯಾಗಿ ಆಯ್ಕೆಮಾಡಬೇಕೆಂಬ ಬೇಡಿಕೆಗಳೂ ಕೇಳಿಬಂದಿದೆ. ರಾಜ್ಯ ಬಿಜೆಪಿ ಅ|ಧ್ಯಕ್ಷ ಕೆ.ಸುರೇಂದ್ರನ್ ಈ ಬಗ್ಗೆ ಸರ್ಕಾರಕ್ಕೆ ಸಲಹೆಯನ್ನೂ ನೀಡಿದ್ದಾರೆ. ಕಾನೂನು ಜ್ಞಾನ ಮತ್ತು ಸಾರ್ವಜನಿಕ ಮಾನ್ಯತೆ ಇರುವವರನ್ನು ಮಹಿಳಾ ಆಯೋಗದ ಅಧ್ಯಕ್ಷರಾಗಿ ಪರಿಗಣಿಸಬೇಕೆಂಬ ಬೇಡಿಕೆ ಹೆಚ್ಚಿದೆ. ಮುಂದಿನ ಶುಕ್ರವಾರ ಸಭೆ ಸೇರುವ ಸಿಪಿಎಂ ರಾಜ್ಯ ಸೆಕ್ರಟರಿಯೇಟ್ ಹೊಸ ಅಧ್ಯಕ್ಷರನ್ನು ನೇಮಿಸಬೇಕೆ ಎಂದು ನಿರ್ಧರಿಸಲಿದೆ. ಆ ಬಳಿಕ ಪ್ರಕ್ರಿಯೆಗಳಿಗೆ ಅಂತಿಮ ರೂಪು ಲಭ್ಯವಾಗಲಿದೆ.