ಮಲಪ್ಪುರಂ: ಜನಸಂದಣಿ ಹೆಚ್ಚಾದ ಕಾರಣ ಶಾಲೆಯಲ್ಲಿ ಪಠ್ಯಪುಸ್ತಕಗಳು ಮತ್ತು ಆಹಾರ ಕಿಟ್‍ಗಳ ವಿತರಣೆಯನ್ನು ಪೋಲೀಸರು ನಿಲ್ಲಿಸಿದ ಘಟನೆ ನಿನ್ನೆ ಮಲಪ್ಪುರಂ ನಲ್ಲಿ ನಡೆದಿದೆ. ಪೋಲೀಸರು ಅಬ್ದುರಹ್ಮಾನ್ ನಗರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪುಸ್ತಕಗಳ ವಿತರಣೆಯನ್ನು ತೀವ್ರ ಜನಸಂದಣಿಯ ಕಾರಣ ನಿಲ್ಲಿಸಿದರು.
ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಈ ಶಾಲೆಯಲ್ಲಿ ಪೋಷಕರು ಆಹಾರ ಕಿಟ್‍ಗಳು ಮತ್ತು ಪುಸ್ತಕಗಳನ್ನು ಪಡೆದುಕೊಳ್ಳಲು ಪೋಲೀಸರ ಅನುಮತಿಯೊಂದಿಗೆ ಆಗಮಿಸಿದ್ದರು. ಆದರೆ ವಿತರಣೆಯ ಸಂದರ್ಭ ಒಮ್ಮಿಂದೊಮ್ಮೆಗೆ ಪೋಷಕರು ಏಕಕಾಲದಲ್ಲೇ ಆಗಮಿಸಿ ಜನದಟ್ಟಣೆ ತೀವ್ರಗೊಂಡಿದ್ದರಿಂದ ತಿರುರಂಗಾಡಿ ಎಸ್‍ಐ ನೇತೃತ್ವದ ಪೋಲೀಸರು ಆಗಮಿಸಿ ವಿತರಣೆಯನ್ನು ನಿಲ್ಲಿಸಿದರು.
ಆದರೆ, ಬೆವ್ಕೊ ಔಟ್ಲೆಟ್ ನಲ್ಲಿ ಮದ್ಯ ಖರೀದಿಸಲು ಇದೇ ರೀತಿಯ ಜನಸಂದಣಿ ಇದ್ದರೂ ಪೋಲೀಸರು ನೋಡಿಯೂ ನೋಡದಂತೆ ನಟಿಸುತ್ತಿರುವರೆಂದು ಹಲವು ಪೋಷಕರು ಆರೋಪಿಸಿರುವರು. ನೂರಾರು ಜನರಿಂದ ತುಂಬಿದ್ದ ಮದ್ಯ ವ್ಯಾಪಾರವನ್ನು ನಿಯಂತ್ರಿಸಲು ಅದೇ ತಿರುರಂಗಾಡಿ ಪೋಲೀಸರು ಆಗಮಿಸಿಯೂ ಸಾವಧಾನದಿಂದ ನೋಟಕರಾದರು ಎಂದು ಆರೋಪಿಸಲಾಗಿದೆ.