ಮುಂಬೈ: 'ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಹಜರತ್ ನಿಜಾಮುದ್ದೀನ್‌ನ ರಾಜಧಾನಿ ಎಕ್ಸ್‌ಪ್ರೆಸ್, ಸುರಂಗವೊಂದರಲ್ಲಿ ಶನಿವಾರ ಹಳಿ ತಪ್ಪಿದೆ. ಆದರೆ, ಯಾವುದೇ ಸಾವು-ನೋವಿನ ವರದಿಯಾಗಿಲ್ಲ' ಎಂದು ಅಧಿಕಾರಿಯೊಬ್ಬರು ತಿಳಿಸಿದರು.
'ಗೋವಾದ ಮಡ್‌ಗಾಂವ್‌ನತ್ತ ಪ್ರಯಣಿಸುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್-02414 ರೈಲು, ಮುಂಬೈನಿಂದ 325 ಕಿ.ಮೀ ದೂರದಲ್ಲಿರುವ ಕಾರ್ಬೂಡ್ ಸುರಂಗದಲ್ಲಿ ಬೆಳಿಗ್ಗೆ 4.15ಕ್ಕೆ ಹಳಿ ತಪ್ಪಿದೆ' ಎಂದು ಕೊಂಕಣ್ ರೈಲ್ವೆ ವಕ್ತಾರರು ಹೇಳಿದರು.
'ರೈಲ್ವೆ ಹಳಿಯ ಮೇಲೆ ಬಂಡೆಯೊಂದು ಬಿದ್ದ ಕಾರಣ, ರೈಲಿನ ಮೊದಲ ಚಕ್ರವು ಹಳಿ ತಪ್ಪಿದೆ. ರತ್ನಗಿರಿ ಜಿಲ್ಲೆಯ ಉಕ್ಷಿ ಮತ್ತು ಭೋಕ್ ನಿಲ್ದಾಣಗಳ ನಡುವಿನ ಕಾರ್ಬೂಡ್ ಸುರಂಗದಲ್ಲಿ ಈ ಘಟನೆ ನಡೆದಿದೆ' ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
'ಕೊಂಕಣ್ ರೈಲ್ವೆ ಅಧಿಕಾರಿಗಳು ಸೇರಿದಂತೆ ರಕ್ಷಣಾ ಪಡೆಯು ಘಟನಾ ಸ್ಥಳಕ್ಕೆ ತೆರಳಿದೆ' ಎಂದು ಅವರು ಹೇಳಿದರು.
ಮಹಾರಾಷ್ಟ್ರದ ರತ್ನಗಿರಿ ಬಳಿ ಹಳಿ ತಪ್ಪಿದ ರೈಲಿನ ತೆರವು ಕಾರ್ಯ ಪೂರ್ಣಗೊಂಡಿದೆ. ಹಳಿ ಸುರಕ್ಷತಾ ಪ್ರಮಾಣಪತ್ರವನ್ನು ಪಡೆದುಕೊಳ್ಳಲಾಗಿದೆ. ಈ ಮಾರ್ಗದಲ್ಲಿ ಬೆಳಿಗ್ಗೆ 10.27ಕ್ಕೆ ರೈಲುಗಳ ಸಂಚಾರ ಶುರುವಾಗಿದೆ ಎಂದು ಕೊಂಕಣ ರೈಲ್ವೆ ತಿಳಿಸಿದೆ.