ನವದೆಹಲಿ: ಭಾರತದಲ್ಲಿ 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ "ಎಂ-ಯೋಗ ಅಪ್ಲಿಕೇಷನ್" ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಜಗತ್ತಿನಾದ್ಯಂತ ಈ ಅಪ್ಲಿಕೇಷನ್ ಬಳಸುವುದಕ್ಕೆ ಲಭ್ಯವಿರುತ್ತದೆ. ಸಾಮಾನ್ಯ ಶಿಷ್ಟಾಚಾರದ ಪ್ರಕಾರ ಯೋಗ ತರಬೇತಿಯ ಕುರಿತು ವಿಡಿಯೋಗಳನ್ನು ಈ ಅಪ್ಲಿಕೇಷನ್ ಮೂಲಕ ಜನರಿಗೆ ತಲುಪಿಸುವ ಉದ್ದೇಶವನ್ನು ಹೊಂದಲಾಗಿದೆ.
ಎಂ-ಯೋಗ ಅಪ್ಲಿಕೇಷನ್ ಬಗ್ಗೆ ಘೋಷಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ಇಡೀ ಜಗತ್ತಿನಾದ್ಯಂತ ಜನರಿಗೆ ವಿವಿಧ ಭಾಷೆಗಳಲ್ಲಿ ಯೋಗ ತರಬೇತಿಯನ್ನು ಪಡೆದುಕೊಳ್ಳುವುದಕ್ಕೆ ಸಹಕಾರಿ ಆಗುವಂತಾ ವಿಡಿಯೋಗಳನ್ನು ಹೊಂದಿರುವ ಅಪ್ಲಿಕೇಷನ್ ಹೊಂದಿದ್ದೇವೆ. ಇದು ಒಂದು ದೇಶ, ಒಂದೇ ಆರೋಗ್ಯ ಎಂಬ ಉದ್ದೇಶಕ್ಕೆ ಪೂರಕ ಹಾಗೂ ಸಹಾಯಕವಾಗಲಿದೆ," ಎಂದು ಹೇಳಿದ್ದಾರೆ.
ಜನರ ಬದುಕಿಗೆ ಯೋಗದ ಆಶಾಕಿರಣ:
"ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ತತ್ತರಿಸಿರುವ ಜಗತ್ತಿನಲ್ಲಿ ಯೋಗ ಜನರ ಬದುಕಿಗೆ ಆಶಾಕಿರಣವಾಗಿದೆ. ಕೊವಿಡ್-19 ಭೀತಿ ನಡುವೆಯೂ ಜೀವನದಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತಿದೆ. ದೇಶದಲ್ಲಿ ಯಾವುದೇ ದೊಡ್ಡ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿಲ್ಲ. ಆದರೆ ಯೋಗ ದಿನದಂದು ಜನರ ಹುಮ್ಮಸ್ಸು, ಉತ್ಸಾಹ ಮತ್ತು ಯೋಗದ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ," ಎಂದು ಮೋದಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ:
ಭಾರತದಲ್ಲಿ 7ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ಉತ್ತರಾಖಂಡದ ಹರಿದ್ವಾರದಲ್ಲಿರುವ ನಿರಮಯಂ ಯೋಗ್ರಾಮ್ ಗ್ರಾಮದಲ್ಲಿ ಯೋಗ ಗುರು ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಜೊತೆ ಯೋಗ ಕಾರ್ಯಕ್ರಮ ನಡೆಸಲಾಯಿತು.
ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ಲಡಾಖ್‌ನ ಪಾಂಗೊಂಗ್ ತ್ಸೋ ಸರೋವರದ ಬಳಿ ಯೋಗ ದಿನವನ್ನು ಆಚರಿಸಿದರು. ಗಲ್ವಾನ್ ಕಣಿವೆಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಿದರು. ಜಮ್ಮು ಕಾಶ್ಮೀರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಯು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಿತು.