ಕುಂಬಳೆ: ಕೇರಳ ಜರ್ನಲಿಸ್ಟ್ ಯೂನಿಯನ್ ರಾಜ್ಯ ಸಮಿತಿಯ ಕರೆಯಂತೆ ಕೆಜೆಯು ಜಿಲ್ಲಾ ಸಮಿತಿಗಳು ರಾಜ್ಯವ್ಯಾಪಿಯಾಗಿ ಶಾಸಕರಿಗೆ ಗೌರವ ನಮನ ಕಾರ್ಯಕ್ರಮ ಆಯೋಜನೆಯ ಅಂಗವಾಗಿ ಕಾಸರಗೋಡು ಜಿಲ್ಲೆಯ ಐದು ಕ್ಷೇತ್ರಗಳ ಶಾಸಕರನ್ನು ಗೌರವಿಸಿದೆ.
ಕುಂಬಳೆ ಪ್ರೆಸ್ ಪೋರಂನಲ್ಲಿ ಮಂಗಳವಾರ ಅಪರಾಹ್ನ ನಡೆದ ಸಮಾರಂಭದಲ್ಲಿ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಹಾಗೂ ಮಂಜೇಶ್ವರ ಶಾಸಕ ಎ. ಕೆ. ಎಂ.ಅಶ್ರಫ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಕೆಜೆಯು ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಉಳುವಾರ್ ಅವರು ಜಿಲ್ಲಾ ಸಮಿತಿ ಪರವಾಗಿ ಶಾಸಕರನ್ನು ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಸ್ಥಳೀಯ ಪತ್ರಕರ್ತರ ಕಲ್ಯಾಣ ನಿಧಿಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೋರಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ಪತ್ರಕರ್ತರಾದ ಕೆ.ಎಂ.ಎ. ಸತ್ತರ್, ಎನ್.ಕೆ.ಎಂ. ಬೆಳಿಂಜೆ, ಅಶ್ರಫ್ ಕುಂಬಳೆ, ಧನರಾಜ್ ಐಲ ಮೊದಲಾದವರು ಉಪಸ್ಥಿತರಿದ್ದರು. ಪುರುಷೋತ್ತಮ ಭಟ್ ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಅಬ್ದುಲ್ ಲತೀಫ್ ಕುಂಬಳೆ ವಂದಿಸಿದರು.