ನವದೆಹಲಿ: ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಪಡೆಯಲು ನಿಗದಿಪಡಿಸಲಾಗಿರುವ ಅಂತರ ಕಡಿಮೆಗೊಳಿಸಿ ಹಿಂದಿನಂತೆ ನೀಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಕೋವಿಡ್-19ಗೆ ಸಂಬಂಧಿಸಿದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ (ಎನ್‌ಟಿಎಜಿಐ) ಅಧ್ಯಕ್ಷ ಡಾ. ಎನ್.ಕೆ. ಅರೋರಾ ತಿಳಿಸಿದ್ದಾರೆ.
ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಅನ್ನು 4ರಿಂದ 8 ವಾರಗಳ ಬದಲು 12ರಿಂದ 16 ವಾರಗಳಿಗೆ ಹೆಚ್ಚಿಸಲಾಗಿತ್ತು. ಇದು ವೈಜ್ಞಾನಿಕ ನಿರ್ಧಾರವಾಗಿತ್ತು. ಈ ಬಗ್ಗೆ ಸಮಿತಿಯಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜನರು ಲಸಿಕೆಯ ಪರಿಣಾಮದ ಬಗ್ಗೆ ಯಾವ ರೀತಿ ಅಭಿಪ್ರಾಯ ನೀಡುತ್ತಾರೋ, ಆ ಅಭಿಪ್ರಾಯದ ಸಾಧಕ ಬಾಧಕಗಳನ್ನು ಪರಿಶೀಲಿಸಿ, ಸಮಿತಿ ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳಲಿದೆ. ಮತ್ತೊಂದು ಕಡೆ ಈಗ ತೆಗೆದುಕೊಂಡಿರುವ ನಿರ್ಧಾರಿ ಸರಿ ಎಂಬ ಅಭಿಪ್ರಾಯ ವ್ಯಕ್ತವಾದರೆ, ಅದನ್ನೇ ನಾವು ಮುಂದುವರಿಸುತ್ತೇವೆ ಎಂದು ಅರೋರಾ ಹೇಳಿದ್ದಾರೆ.
ಏಪ್ರಿಲ್ ಕೊನೆ ವಾರದಲ್ಲಿ ಬ್ರಿಟನ್‌ನ ಸಾರ್ವಜನಿಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 12 ವಾರಗಳ ಅಂತರದಲ್ಲಿ ಎರಡು ಡೋಸ್‌ಗಳ ಲಸಿಕೆ ಪಡೆದಿರುವುದರಿಂದ, ಲಸಿಕೆಯ ಪರಿಣಾಮ ಶೇಕಡ 65 ರಿಂದ ಶೇಕಡ 88ರಷ್ಟು ವ್ಯತ್ಯಾಸವಾಗುತ್ತಿದೆ.
'ಇಂಗ್ಲೆಂಡ್‌ನಲ್ಲಿ ಡೋಸ್‌ಗಳ ನಡುವಿನ ಅಂತರವನ್ನು 12 ವಾರಕ್ಕೆ ನಿಗದಿಪಡಿಸಿದ ಕಾರಣ, ಅಲ್ಫಾ ರೂಪಾಂತರ ವೈರಸ್‌ನ ಸಾಂಕ್ರಾಮಿಕ ರೋಗದಿಂದ ಹೊರಬರಲು ಸಾಧ್ಯವಾಯಿತು. ಈ ಹಿನ್ನೆಲೆಯಲ್ಲಿ ಡೋಸ್‌ಗಳ ನಡುವಿನ ಅಂತರವನ್ನು 12 ರಿಂದ 16 ವಾರಗಳಿಗೆ ಹೆಚ್ಚಿಸಲು ನಾವು ಮೇ 13ರಂದು ನಿರ್ಧಾರ ತೆಗೆದುಕೊಂಡಿದ್ದೆವು' ಎಂದು ಅವರು ಹೇಳಿದರು.
ಕೆನಡಾ, ಶ್ರೀಲಂಕಾ ಸೇರಿದಂತೆ ಹಲವು ದೇಶಗಳಲ್ಲೂ 12ರಿಂದ 16 ವಾರಗಳ ಅಂತರ ನಿಗದಿಪಡಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಲಸಿಕೆಗಳ ಪರಿಣಾಮಗಳನ್ನು ಆಧರಿಸಿ, ವೈಜ್ಞಾನಿಕ ಆಧಾರದ ಮೇಲೆ ಡೋಸ್‌ಗಳ ನಡುವಿನ ಅಂತರವನ್ನು ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯದ ಹೇಳಿಕೆಯೊಂದನ್ನು ಸುದ್ದಿ ವಾಹಿನಿಯೊಂದು ಉಲ್ಲೇಖಿಸಿದೆ.