ಕೋವಿಡ್-19 ಎಲ್ಲಾ ರಂಗಗಳಲ್ಲಿ ಹಲವು ಬಗೆಯ ತಲ್ಲಣಗಳನ್ನು ಸೃಷ್ಟಿಸಿತ್ತಲ್ಲದೆ ಅಪಾರ ಹಾನಿಯನ್ನುಂಟು ಮಾಡಿತು. ಬೇರೆಲ್ಲಾ ಕ್ಷೇತ್ರಗಳಿಗೆ ಹೋಲಿಸಿ ನೋಡಿದರೆ ಶಿಕ್ಷಣ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಮಕ್ಕಳ ಬದುಕು, ಕಲಿಕೆ ಮತ್ತು ಯೋಗ ಕ್ಷೇಮದ ಮೇಲೆ ಗಾಢವಾದ ನಕಾರಾತ್ಮಕ ಪರಿಣಾಮ ಬೀರಿದೆ. ಸರಿ ಸುಮಾರು ಒಂದು ವರ್ಷ ಶಾಲೆಗಳು ಪೂರ್ಣವಾಗಿ ಮುಚ್ಚಿದ ಕಾರಣ ಮಕ್ಕಳ ಕಲಿಕೆ ಸ್ಥಗಿತಗೊಂಡಿದೆ. ಕಲಿಕೆ ಕೇವಲ ಶಾಲೆಗೆ ಸೀಮಿತವಾಗಿರುವುದಿಲ್ಲವೆಂಬುದನ್ನು ಒಪ್ಪುತ್ತಲೇ, ತರಗತಿ ಕೋಣೆಯ ಕಲಿಕಾ ಪ್ರಕ್ರಿಯೆ ಮಗುವಿಗೆ ತನ್ನ ಜ್ಞಾನವನ್ನು ರಚನಾತ್ಮಕವಾಗಿ ಕಟ್ಟಿಕೊಳ್ಳುವ, ತನ್ನ ಸಹಭಾಗಿಗಳ ಜೊತೆ ಒಡನಾಡುವ, ಸಂವಾದ ಮಾಡುವ ಹಾಗೂ ತಿಳಿದ ವಿಷಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಅದನ್ನು ವಿಸ್ತರಿಸಿಕೊಳ್ಳುವ ಹಾಗೂ ಪಡೆದ ಜ್ಞಾನವನ್ನು ಅನ್ವಯಿಸಿ ನೋಡುವ ಹಲವು ಅವಕಾಶಗಳನ್ನು ಕಟ್ಟಿಕೊಡುತ್ತದೆ.
ಇದು ಕೇವಲ ಜ್ಞಾನ ಕಟ್ಟಿಕೊಡುವ ಪ್ರಕ್ರಿಯೆಯಾಗಿರದೆ ಮಾನವನ ನಾಗರಿಕ ಬದುಕಿಗೆ ಅಗತ್ಯವಾಗಿ ಬೇಕಾದ ಸಾಮಾಜೀಕರಣ, ಸಹಬಾಳ್ವೆ, ಸಹಭಾಗಿತ್ವ, ಸಹಿಷ್ಣುತೆ, ಭ್ರಾತೃತ್ವ, ಇತ್ಯಾದಿ ಮಾನವೀಯ ಮೌಲ್ಯಗಳನ್ನು ಬೆಳೆಸಿ ಸಮಾಜದಲ್ಲಿ ಉತ್ತಮ ನಾಗರಿಕನನ್ನಾಗಿಸುವ ಪರಮೋದ್ದೇಶವನ್ನು ಹೊಂದಿದೆ. ಹೀಗಾಗಿ, ಕಲಿಕೆಯನ್ನು ಕೇವಲ ಪರೀಕ್ಷೆಗೆ ಸೀಮಿತಗೊಳಿಸಿ ನೋಡುವುದು ಶಿಕ್ಷಣದ ಮೂಲ ಉದ್ದೇಶವನ್ನೇ ಸಂಕುಚಿತ ಗೊಳಿಸುತ್ತದೆ. ಮಕ್ಕಳಿಗೆ ಪರೀಕ್ಷೆ ನಡೆಸಬೇಕೋ- ಬೇಡವೋ ಎಂಬ ಬಗ್ಗೆ ನಡೆಯುತ್ತಿರುವ ಚರ್ಚೆಗಳನ್ನು ಶಿಕ್ಷಣದ ವಿಸ್ತೃತ ನೆಲೆಯಲ್ಲಿ ನೋಡಬೇಕಿದೆ. ಭಾರತದ ಎಲ್ಲಾ ಮಕ್ಕಳಿಗೆ ಶಿಕ್ಷಣವನ್ನು ಸಂವಿಧಾನಬದ್ಧ ಮೂಲಭೂತ ಹಕ್ಕನ್ನಾಗಿಸಲಾಗಿದೆ. ಈ ಹಕ್ಕನ್ನು ಸಾಕಾರಗೊಳಿಸಲು ರೂಪಿಸಿಲಾದ ಶಿಕ್ಷಣ ಹಕ್ಕು ಕಾಯ್ದೆಯ ಪ್ರಸ್ತಾವನೆಯ ಭಾಗದಲ್ಲಿ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸುತ್ತಿರುವ ಉದ್ದೇಶ ಮತ್ತು ಕಾರಣಗಳನ್ನು ವಿವರಿಸಲಾಗಿದೆ.
ಅದರಂತೆ, ''ಪ್ರತಿಯೊಂದು ಮಗುವೂ ಪ್ರಮಾಣೀಕರಿಸಿದ ಅಗತ್ಯ ಮಾನದಂಡಗಳನ್ನು ಹೊಂದಿರುವ ಔಪಚಾರಿಕ ಶಾಲೆಯಲ್ಲಿ ಪೂರ್ಣ ಸಮಯದ ತೃಪ್ತಿದಾಯಕ ಹಾಗೂ ಸಮಾನ ಗುಣಮಟ್ಟದ ಶಿಕ್ಷಣವನ್ನು ಪಡೆಯುವ ಹಕ್ಕನ್ನು ಹೊಂದಿರುತ್ತದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಸ್ಥಳೀಯ ಪ್ರಾಧಿಕಾರಗಳು, ಪಾಲಕರು, ಶಾಲೆ ಮತ್ತು ಶಿಕ್ಷಕರು ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುವ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಹೊಂದಿರುತ್ತಾರೆ. ಉದ್ದೇಶಿತ ಶಾಸನ ಎಲ್ಲರನ್ನು ಒಳಗೊಳ್ಳುವ ಎಲಿಮೆಂಟರಿ ಶಿಕ್ಷಣದ ಮೂಲಕ ಮಾತ್ರವೇ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹಾಗೂ ನ್ಯಾಯಯುತ ಮಾನವೀಯ ಸಮಾಜವನ್ನು ಕಟ್ಟಿಕೊಡಲು ಸಾಧ್ಯ ಎಂಬ ಬಲವಾದ ನಂಬಿಕೆಯಿಂದ ರೂಪಿತವಾಗಿದೆ''. ಎಂದು ಹೇಳುತ್ತದೆ. ಪರೀಕ್ಷೆ ಬೇಕೋ-ಬೇಡವೋ ಎಂಬ ಬಗ್ಗೆ ನಡೆಯುತ್ತಿರುವ ನಮ್ಮ ಚರ್ಚೆಗಳು ಮೇಲಿನ ಆಶಯದ ಚೌಕಟ್ಟಿನಲ್ಲಿ, ಅಂದರೆ, ಭಾರತದ ಸಂವಿಧಾನದ ಪರಿಚ್ಚೇಧ 21ಎ ಅನ್ವಯ ಶಿಕ್ಷಣ ಮೂಲಭೂತ ಹಕ್ಕಾಗಿದ್ದು ಅದನ್ನು ಮಕ್ಕಳಿಗೆ ಕೊಡಮಾಡುವ ವಿಧಿವಿಧಾನಗಳ ಬಗ್ಗೆ ಶಿಕ್ಷಣ ಹಕ್ಕು ಕಾಯ್ದೆ 2009, ಶಿಕ್ಷಣ ಹಕ್ಕು ತಿದ್ದುಪಡಿ ಕಾಯ್ದೆ 2012, ಶಿಕ್ಷಣ ಹಕ್ಕು ತಿದ್ದುಪಡಿ ಕಾಯ್ದೆ 2019, ಶಿಕ್ಷಣ ಹಕ್ಕು ಕಾಯ್ದೆ ಕೇಂದ್ರ ನಿಯಮಗಳು, 2010 ಹಾಗೂ ಶಿಕ್ಷಣ ಹಕ್ಕು ಕಾಯ್ದೆ ರಾಜ್ಯ ನಿಯಮಗಳು 2012ರ ಚೌಕಟ್ಟಿನಲ್ಲಿ ತೀರ್ಮಾನವಾಗಬೇಕಿದೆ.
ಅದರಲ್ಲೂ ವಿಶೇಷವಾಗಿ ಶಿಕ್ಷಣ ಹಕ್ಕು ಕಾಯ್ದೆ ಪ್ರಕರಣ 16, 24, 29; ಕಾಯ್ದೆಯ ಪ್ರತೀ ಪ್ರಕರಣದ ಮಹತ್ವ ತಿಳಿಸಲು ಕೇಂದ್ರ ಸರಕಾರ ಪ್ರಕಟಿಸಿರುವ ಪ್ರಕರಣವಾರು ತಾರ್ಕಿಕ ವಿವರಣೆ; ಕೇಂದ್ರ ನಿಯಮ 23, ರಾಜ್ಯ ನಿಯಮ 16 ಹಾಗೂ 19 ಮತ್ತು ಸರ್ವೋಚ್ಚ ನ್ಯಾಯಾಲಯದ ತೀರ್ಪು 2012ರ ಅಂಶಗಳು ನಿರ್ಣಾಯಕವಾಗುತ್ತವೆ. ಶಾಲಾ ಆಡಳಿತ ಮಂಡಳಿ ಮತ್ತು ಸಂಘಟನೆಗಳ, ಸರಕಾರ ಮತ್ತು ಮೂಲವಾರಸುದಾರರ ಆಶಯಗಳು ಏನೇ ಇದ್ದರೂ ಎಷ್ಟೇ ಉತ್ತಮವಾಗಿದ್ದರೂ, ಕಾನೂನಿನ ಚೌಕಟ್ಟನ್ನು ಉಲ್ಲಂಘಿಸಿ ತೀರ್ಮಾನಿಸಲು ಸಾಧ್ಯವಿಲ್ಲ. ಆದ್ದರಿಂದ, ಸರಕಾರದ ಈ ಕೆಳಕಂಡ ಅಂಶಗಳನ್ನು ಅವಲೋಕಿಸಿ ಈ ವಿಷಯದಲ್ಲಿ ತೀರ್ಮಾನಿಸಬೇಕಿದೆ. ಪರೀಕ್ಷೆಗಿಂತ ಕಲಿಕೆಗೆ ಹೆಚ್ಚು ಒತ್ತು ನೀಡುವ ಶಿಕ್ಷಣ ಹಕ್ಕು ಕಾಯ್ದೆ, ಪ್ರಕರಣ 29 ಅಡಿಯಲ್ಲಿ ಪಠ್ಯಕ್ರಮ ನಿಗದಿ ಹಾಗೂ ಕಲಿಕೆ ಸ್ವರೂಪ ಹೇಗಿರಬೇಕೆಂದು ತಿಳಿಸಿದೆ. ಅವುಗಳೆಂದರೆ: ಪಠ್ಯ ನಿಗದಿಯಾಗುವಾಗ ಸಾಂವಿಧಾನಿಕ ಮೌಲ್ಯಗಳ ಅನುಸರಣೆ; ಕಲಿಕೆ ಮಗುವಿನ ಸರ್ವೋತೋಮುಖ ಅಭಿವೃದ್ಧಿ; ಮಗುವಿನ ಜ್ಞಾನ, ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಕಟ್ಟಿಕೊಡುವುದು; ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳ ಪೂರ್ಣ ಪ್ರಮಾಣ ಅಭಿವೃದ್ಧಿ; ಮಕ್ಕಳ ಕೇಂದ್ರಿತ ಸ್ನೇಹಪರ ಚಟುವಟಿಕೆಗಳು, ಅನ್ವೇಷಣೆ ಮತ್ತು ಪರಿಶೋಧನೆಯ ಮೂಲಕ ಕಲಿಯುವುದು ಮತ್ತು ಮಕ್ಕಳ ಕೇಂದ್ರಿತ ವಿಧಾನ; ಕಲಿಕೆ ಸಾಧ್ಯವಾದಷ್ಟು ಮಗುವಿನ ಮಾತೃಭಾಷೆಯಲ್ಲಿರಬೇಕು; ಮಗುವನ್ನು ಭಯ, ಆಘಾತ ಮತ್ತು ಆತಂಕದಿಂದ ಮುಕ್ತಗೊಳಿಸುವುದು ಮತ್ತು ಮಗುವಿಗೆ ಸಹಾಯ ಮಾಡುವುದು; ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ಮತ್ತು ಮಗುವಿನ ತಿಳುವಳಿಕೆಯನ್ನು ಅಳೆಯಲು ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ನಡೆಸಬೇಕು ಎಂಬುದನ್ನು ಸ್ಪಷ್ಟ ಪಡಿಸಿದೆ.
ಮೇಲಿನ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಶಿಕ್ಷಣ ಹಕ್ಕು ಕಾಯ್ದೆ ಎಲ್ಲಾ ಮಕ್ಕಳು ಕಡ್ಡಾಯವಾಗಿ ಕಲಿಯಲೇಬೇಕು ಹಾಗೂ ಎಲಿಮೆಂಟರಿ ಶಿಕ್ಷಣವನ್ನು ಯಾವುದೇ ಅಡತಡೆಯಿಲ್ಲದೆ ಮುಗಿಸಬೇಕೆಂಬ ಆಶಯವನ್ನು ಹೊಂದಿದೆ. ಎಲ್ಲಿಯೂ ಮಕ್ಕಳು ಕಲಿಯದೆ ತೇರ್ಗಡೆಯಾಗಬೇಕೆಂದು ಹೇಳಿಲ್ಲ. ಆದರೆ, ಈ ಆಶಯವನ್ನು ಅರ್ಥೈಸಿಕೊಳ್ಳಲು ವಿಫಲವಾಗಿರುವ ನಾವು ಮಕ್ಕಳನ್ನು ಫೇಲ್‌ಮಾಡಬಾರದು ಎಂದರೆ ಕಲಿಸಬಾರದು ಎಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದೇವೆ. ನಿಜ ಹೇಳಬೇಕೆಂದರೆ, ಮಕ್ಕಳು ಕಲಿಯಲು ವಿಫಲವಾಗಿಲ್ಲ. ಕಲಿಸಬೇಕಾದ ಶಿಕ್ಷಕರು, ವ್ಯವಸ್ಥೆ, ಸರಕಾರ ಹಾಗೂ ಸಂಸ್ಥೆಗಳು ವಿಫಲವಾಗಿದ್ದು ಮಕ್ಕಳನ್ನು ಬಲಿಪಶುವನ್ನಾಗಿಸಲು ಪರೀಕ್ಷೆಯ ಮೊರೆ ಹೋಗುವಂತಾಗಿದೆ. ಒಂದು ತರಗತಿಯಲ್ಲಿ ಮಗು ಒಂದು ವರ್ಷ ಕಳೆದರೂ ವಯಸ್ಸು ಹಾಗೂ ತರಗತಿಗನುಗುಣವಾದ ಕಲಿಕಾ ಮಟ್ಟವನ್ನು ತಲುಪಲು ಸಾಧ್ಯವಾಗಿಲ್ಲವೆಂದರೆ, ಇಲ್ಲಿ ಫೇಲ್ ಆಗಿರುವುದು ವ್ಯವಸ್ಥೆ ಹಾಗೂ ವ್ಯವಸ್ಥೆಯ ಎಲ್ಲಾ ಹಂತಗಳಲ್ಲಿ ಕೆಲಸ ನಿರ್ವಹಿಸುವ ಜನರೇ ಹೊರತು ಮಕ್ಕಳಲ್ಲ. ಇಲ್ಲಿ ಫೇಲಾಗಿರುವುದು ವ್ಯವಸ್ಥೆಯೇ ಹೊರತು ಮಗುವಲ್ಲ. ತನ್ನದಲ್ಲದ ತಪ್ಪಿಗೆ ಮಗುವನ್ನು ಶಿಕ್ಷಿಸುವ ಬದಲು, ವ್ಯವಸ್ಥೆಯ ಗುಣಮಟ್ಟವನ್ನು ಸುಧಾರಿಸುವ ಜರೂರು ಅಗತ್ಯವಿದೆ.
ಹೀಗಾಗಿ, ನಾವೆಲ್ಲರೂ ತಿಳಿಯಲೇಬೇಕಾದ ಒಂದು ಅಂಶವೆಂದರೆ, ಯಾವುದೇ ಒಂದು ಮಗುವನ್ನು ಒಂದೇ ತರಗತಿಯಲ್ಲಿ ತಡೆ ಹಿಡಿಯಬಾರದು ಅಥವಾ ಶಾಲೆಯಿಂದ ಹೊರ ಹಾಕಬಾರದು ಎಂಬ ಮಹತ್ವದ ಆಶಯದ ಹಿಂದಿರುವ ಉದ್ದೇಶ ಕಲಿಸಬಾರದು ಎಂದಲ್ಲ. ಬದಲಿಗೆ, ಪ್ರತಿಯೊಂದು ಮಗುವೂ ಶಾಲೆಗೆ ಕಲಿಯಬೇಕೆಂಬ ಮಹತ್ವದ ಆಶೆಯನ್ನು ಹೊತ್ತು ಬರುತ್ತದೆ. ತಂದೆ ತಾಯಿಯೂ ಕೂಡ ಅದನ್ನೇ ಬಯಸುತ್ತಾರೆ. ಕಲಿಸುವುದು ಶಿಕ್ಷಕರ ಮತ್ತು ವ್ಯವಸ್ಥೆಯ ಮೂಲಭೂತ ಜವಾಬ್ದಾರಿ. ಶಿಕ್ಷಣ ಹಕ್ಕು ಕಾಯ್ದೆ ಮಕ್ಕಳಿಗೆ ಅತ್ಯಂತ ವ್ಯವಸ್ಥಿತವಾಗಿ ಕಲಿಸುವ ಬಗ್ಗೆ ಪ್ರಕರಣ 29ರಲ್ಲಿ ತಿಳಿಸಿದೆ. ಈ ಮೂಲ ಆಶಯಕ್ಕೆ ಇಂಬು ನೀಡಲು ಕೇಂದ್ರ ಸರಕಾರವು 2017ರಲ್ಲಿ ಕೇಂದ್ರ ಶಿಕ್ಷಣ ಹಕ್ಕು ಕಾಯ್ದೆಯ ನಿಯಮಗಳು -2010ಕ್ಕೆ ತಿದ್ದುಪಡಿ ತಂದು ಮಕ್ಕಳ ಪರೀಕ್ಷೆಗಿಂತ ಮಕ್ಕಳ ಕಲಿಕೆಗೆ ಒತ್ತು ನೀಡಲು ಅನುಕೂಲವಾಗುವಂತೆ ತರಗತಿವಾರು ವಿಷಯವಾರು ಕಲಿಕಾ ಫಲಿತಾಂಶಗಳನ್ನು ಸಿದ್ಧಪಡಿಸಲು ಸೂಚಿಸಿದೆ. ಈ ಕಲಿಕಾ ಫಲಿತಾಂಶಗಳನ್ನು ದಿನನಿತ್ಯದ ಆಧಾರದಲ್ಲಿ ಕಲಿಕೆಯ ಮೂಲಕ ಸಾಧಿಸಲು ಮಾರ್ಗಸೂಚಿ ತಯಾರಿಸಿ ನಿರಂತರ ಕಲಿಕೆ ಮತ್ತು ನಿರಂತರ ಮೌಲ್ಯ ಮಾಪನದ ಮೂಲಕ ಮಕ್ಕಳ ಕಲಿಕೆಯನ್ನು ಉತ್ತೇಜಿಸಬೇಕು ಮತ್ತು ನಿಗದಿತ ಕಲಿಕಾ ಫಲಿತಾಂಶಗಳನ್ನು ಕಂಡುಕೊಳ್ಳಬೇಕು ಎಂಬುದನ್ನು ಸ್ಪಷ್ಪಪಡಿಸಿದೆ. ಪರೀಕ್ಷೆಯೇ ಎಲ್ಲವೂ ಅಲ್ಲ, ಕಲಿಕೆಯೇ ಮುಖ್ಯ ಎಂಬುದನ್ನು ಇದು ಪರೋಕ್ಷವಾಗಿ ತಿಳಿಸಿದೆ. (ಶಿಕ್ಷಣ ಹಕ್ಕು ಕಾಯ್ದೆ ಕೇಂದ್ರ ನಿಯಮ 23) ಕೊನೆಯದಾಗಿ, ಪರೀಕ್ಷೆಗಿಂತ ಕಲಿಕೆ ಮುಖ್ಯ. ಪರೀಕ್ಷೆಯ ಮೂಲ ಉದ್ದೇಶವೇ ಕಲಿಕೆಯಲ್ಲಿನ ತೊಡಕುಗಳನ್ನು ಗುರುತಿಸಿ ಕಲಿಕೆಯನ್ನು ಮತ್ತಷ್ಟು ಸುಧಾರಿಸುವುದು ಹಾಗೂ ಉತ್ತಮಗೊಳಿಸುವುದರ ಮೂಲಕ ಎಲ್ಲಾ ಮಕ್ಕಳು ನಿಗದಿತ ಕಲಿಕಾ ಮಟ್ಟವನ್ನು ಮುಟ್ಟುವಂತೆ ಮಾಡುವುದಾಗಿದೆ.
ಶಿಕ್ಷಣ ಹಕ್ಕಿನ ಈ ಆಶಯಕ್ಕೆ ಪೂರಕವಾಗಿ ಸರಕಾರ ವಿಶೇಷ ಸೇತುಬಂಧ ಹಾಗೂ ವೇಗವರ್ಧಿತ ಕಲಿಕಾ ಕಾರ್ಯಕ್ರಮದ ಮೂಲಕ ಮುಂದಿನ ಶೈಕ್ಷಣಿಕ ವರ್ಷ (2021-22) ಪ್ರಾರಂಭವಾಗುವ ಮುನ್ನ ಎಲ್ಲಾ ಮಕ್ಕಳು ತರಗತಿವಾರು ವಿಷಯವಾರು ನಿಗದಿತ ಕಲಿಕೆಯನ್ನು ಪೂರ್ಣಗೊಳಿಸುವ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೇ ಹೊರತು ಪರೀಕ್ಷೆಗಲ್ಲ. ಈ ಹಿನ್ನೆಲೆಯಲ್ಲಿ ಸರಕಾರಕ್ಕೆ ಕೆಲವು ಸಲಹೆಗಳು:
* ಮಕ್ಕಳ ಕಲಿಕೆ; ಭಯ, ಆಘಾತ ಹಾಗೂ ಆತಂಕರಹಿತ ಕಲಿಕಾ ವ್ಯವಸ್ಥೆ; ಜ್ಞಾನದ ಗ್ರಹಿಕೆ ಹಾಗೂ ಅನ್ವಯಿಸುವ ಸಾಮರ್ಥ್ಯವನ್ನು ಅಳೆಯಲು ನಿರಂತರ ಹಾಗೂ ವ್ಯಾಪಕ ಮೌಲ್ಯ ಮಾಪನದ ವಿಧಿ ವಿಧಾನಗಳ ಬಗ್ಗೆ ಶಿಕ್ಷಣ ಹಕ್ಕು ಕಾಯ್ದೆ ಹಾಗೂ ನಿಯಮಗಳಲ್ಲಿ ಸ್ಪಷ್ಟತೆ ಇದ್ದು ಅದನ್ನು ಕಡ್ಡಾಯವಾಗಿ ಪಾಲಿಸಬೇಕಾಗಿರುವುದರಿಂದ ಸರಕಾರದ ಉದ್ದೇಶಿತ ತೀರ್ಮಾನ ಕಾನೂನಿನ ಚೌಕಟ್ಟಿನಲ್ಲಿರಬೇಕು.
* ಹೊಸ ತಿದ್ದುಪಡಿ ಕಾಯ್ದೆ ಅನ್ವಯ, 1ರಿಂದ 4ನೇ ತರಗತಿ ಹಾಗೂ 6 ಮತ್ತು 7ನೇ ತರಗತಿ ಮಕ್ಕಳಿಗೆ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ ಹೊರತು ಪಡಿಸಿ ಬೇರೆ ಪರೀಕ್ಷೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನದ ಆಧಾರದ ಮೇಲೆ ಮಕ್ಕಳನ್ನು ಮುಂದಿನ ತರಗತಿಗೆ ತೇರ್ಗಡೆಗೊಳಿಸಬೇಕು.
* ಹೊಸ ತಿದ್ದುಪಡಿ ಕಾಯ್ದೆ ಅನ್ವಯ ಸರಕಾರ 5 ಮತ್ತು 8ನೇ ತರಗತಿಗೆ ಪರೀಕ್ಷೆ ನಡೆಸಬಹುದಾದರೂ, ಮಕ್ಕಳನ್ನು ಅದೇ ತರಗತಿಯಲ್ಲಿ ತಡೆ ಹಿಡಿಯಬೇಕೇ ಬೇಡವೇ ಎಂಬುದನ್ನು ತೀರ್ಮಾನಿಸುವ ಪರಮಾಧಿಕಾರ ಸರಕಾರದ್ದೇ ಹೊರತು ಶಾಲಾ ಆಡಳಿತ ಮಂಡಳಿಗಳದ್ದಲ್ಲ. ಈ ಹಿನ್ನೆಲೆಯಲ್ಲಿ, ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಕಲಿಕೆಯಲ್ಲಿ ಸ್ಥಿರತೆ ಹಾಗೂ ಏಕತೆ ಇಲ್ಲದ ಕಾರಣ, ಸರಕಾರ 1ರಿಂದ 9ನೇ ತರಗತಿಯವರೆಗೆ ಎಲ್ಲಾ ಮಕ್ಕಳನ್ನು ತೇರ್ಗಡೆಗೊಳಿಸುವುದು ಸೂಕ್ತ.
* ಪರೀಕ್ಷೆ ನಡೆಸಲೇಬೇಕೆಂದಾದರೆ ನಿರಂತರ ಮೌಲ್ಯಮಾಪನದ ಅನ್ವಯ ಸಂಕಲನಾತ್ಮಕ ಪರೀಕ್ಷೆ ಮಾಡಬಹುದು. ಆದರೆ ಯಾವುದೇ ಮಕ್ಕಳನ್ನು ತಡೆಹಿಡಿಯುವುದು ಈ ಸಂಕಷ್ಟದ ಸಮಯದಲ್ಲಿ ಬೇಡ. ಜೊತೆಗೆ, ಪರೀಕ್ಷೆ ಹೆಸರಿನಲ್ಲಿ ಶುಲ್ಕಕ್ಕೆ ಒತ್ತಾಯಪೂರ್ವಕವಾಗಿ ಬೇಡಿಕೆ ಇಡುವುದು, ಫಲಿತಾಂಶ ಕೊಡುವುದಿಲ್ಲ ಎಂದು ಖಾಸಗಿ ಶಾಲೆಗಳು ಭಯ ಹುಟ್ಟಿಸಬಾರದು. ಇದು ಕಾನೂನಿಗೂ ವಿರುದ್ಧವಾಗುತ್ತದೆ.
* ಪರೀಕ್ಷೆಗಿಂತ ಕಲಿಕೆ ಮುಖ್ಯವಾಗಿದ್ದು ಪರೀಕ್ಷೆಯ ಮೂಲ ಉದ್ದೇಶವೇ ಕಲಿಕೆಯಲ್ಲಿನ ತೊಡಕುಗಳನ್ನು ಗುರುತಿಸಿ ಕಲಿಕೆಯನ್ನು ಮತ್ತಷ್ಟು ಉತ್ತಮಗೊಳಿಸುವುದು ಮತ್ತು ಎಲ್ಲಾ ಮಕ್ಕಳು ನಿಗದಿತ ಕಲಿಕಾ ಮಟ್ಟವನ್ನು ಮುಟ್ಟುವಂತೆ ಮಾಡುವುದಾಗಿರುವುದರಿಂದ, ಸರಕಾರ ವಿಶೇಷ ಸೇತುಬಂಧ ಹಾಗೂ ವೇಗವರ್ಧಿತ ಕಲಿಕಾ ಕಾರ್ಯಕ್ರಮದ ಮೂಲಕ ಮುಂದಿನ ಶೈಕ್ಷಣಿಕ ವರ್ಷ (2021-22) ಪ್ರಾರಂಭವಾಗುವ ಮುನ್ನ ಎಲ್ಲಾ ಮಕ್ಕಳು ತರಗತಿವಾರು, ವಿಷಯವಾರು ನಿಗದಿತ ಕಲಿಕೆಯನ್ನು ಪೂರ್ಣಗೊಳಿಸುವ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.