ಕಾಸರಗೋಡು: ವಯನಾಡಿನಲ್ಲಿ ಭಾರಿ ಪ್ರಮಾಣದ ಅರಣ್ಯ ಲೂಟಿ ಪ್ರಕರಣ ಪಿಣರಾಯಿ ವಿಜಯನ್ ನೇತೃತ್ವದ ಎರಡನೇ ಸರ್ಕಾರದ ಅಸ್ತಿತ್ವವನ್ನೇ ಅಲುಗಾಡಿಸುತ್ತಿದ್ದು, ಈ ಭ್ರಷ್ಟಾಚಾರದಿಂದ ಪಾರಾಗಲು ಬಿಜೆಪಿ ಮುಖಂಡರ ವಿರುದ್ಧ ಸುಳ್ಳು ಮೊಕದ್ದಮೆ ಹೂಡಿ ರಾಜ್ಯದ ಜನತೆಯ ಗಮನ ಬೇರೆಡೆ ಸೆಳೆಯಲು ಯತ್ನಿಸಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಪಿ.ಕೆ ಕೃಷ್ಣದಾಸ್ ತಿಳಿಸಿದ್ದಾರೆ.
ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಪ್ರತಿಪಕ್ಷಗಳೊಂದಿಗೆ ಸೇರಿ ಬಿಜೆಪಿ ವಿರುದ್ಧ ನಡೆಸುತ್ತಿರುವ ಸಂಚಿನ ವಿರುದ್ಧ ಗುರುವಾರ ಕಾಸರಗೋಡುನಗರದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರತಿಭಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ತನ್ನ ರಾಜಕೀಯ ಇದಿರಾಳಿಗಳ ವಿರುದ್ಧ ಕಮ್ಯೂನಿಸ್ಟ್ ಏಕಾಧಿಪತ್ಯ ಧೋರಣೆ ತೋರಿಸುತ್ತಿದ್ದು, ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಗೆ ತಡೆಯೊಡ್ಡಲು ಯತ್ನಿಸುತ್ತಿದೆ. ಮಂಜೇಶ್ವರದ ಮಾಜಿ ಶಾಸಕನ ನೂರೈವತ್ತು ಕೋಟಿ ರೂ. ಮೊತ್ತದ ಚಿನ್ನಾಭರಣ ಠೇವಣಿ ವಂಚನಾಪ್ರಕರಣದಲ್ಲಿ ಮುಸ್ಲಿಂಲೀಗ್ ವಿರುದ್ಧ ಚಕಾರವೆತ್ತದ ಪಿಣರಾಯಿ ಸರ್ಕಾರ, ಕೊನೆಗೂ ಬಿಜೆಪಿಯ ಒತ್ತಡಕ್ಕೆ ಮಣಿದು ಕೇಸುದಾಖಲಿಸಿಕೊಂಡಿದೆ. ಮಂಜೇಶ್ವರದಲ್ಲಿ ಮುಸ್ಲಿಂಲೀಗಿನೊಂದಿಗೆ ಸಿಪಿಎಂಗಿರುವ ಅಪವಿತ್ರ ಮೈತ್ರಿ ಚುನಾವಣೆ ನಂತರವೂ ಮುಂದುವರಿದಿರುವುದಾಗಿ ತಿಳಿಸಿದರು. ಚಿನ್ನಕಳ್ಳಸಾಗಾಟ ಪ್ರಕರಣ, ಮಾದಕ ವಸ್ತು ಸಾಗಾಟ ಪ್ರಕರಣದ ತನಿಖೆ ಬುಡಮೇಲುಗೊಳಿಸಲು ಸರ್ಕಾರ ನಡೆಸುವ ತಂತ್ರ ಫಲಿಸದು. ಎಲ್ಲ ಆರೋಪಿಗಳೂ ಶೀಘ್ರ ಕಾನೂನಿನಡಿ ಬಂದುನಿಲ್ಲಬೇಕಾದ ದಿನ ದೂರವಿಲ್ಲ. ಬಿಜೆಪಿ ಮುಖಂಡರ ಬೇಟೆಯಾಡುವ ಸರ್ಕಾರದ ಕ್ರಮವನ್ನು ಪಕ್ಷ ಒಗ್ಗಟ್ಟಿನಿಂದ ಎದುರಿಸಲಿದೆ ಎಂದೂ ಕೃಷ್ಣದಾಸ್ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎ.ವೇಲಾಯುಧನ್, ಸುಧಾಮ ಗೋಸಾಡ, ವಕೀಲ ಸದಾನಂದ ರೈ, ಸುಕುಮಾರ ಕುದ್ರೆಪ್ಪಾಡಿ, ಪಿ.ಆರ್. ಸಉನಿಲ್, ಹರಿಪ್ರಸಾದ್ ಕೆ, ಸಂಧ್ಯಾಮಲ್ಯಾ ಉಪಸ್ಥಿತರಿದ್ದರು.