ಕಾಸರಗೋಡು: ಆನ್ ಲೈನ್ ಕಲಿಕೆಗೆ ಮೊಬೈಲ್ ಪೋನ್ ಇಲ್ಲದೆ ತೊಂದರೆ ಅನುಭವಿಸುತ್ತಿರುವ ಮಕ್ಕಳಿಗೆ ಚೆಂಗಳ ಗ್ರಾಮ ಪಂಚಾಯತ್ ಸಹಕಾರಿಯಾಗಲು ಯತ್ನಿಸುತ್ತಿದೆ.
ಮೊಬೈಲ್ ಪೋನ್ ಚಾಲೆಂಜ್ ಯೋಜನೆ ಮೂಲಕ ಸಮಸ್ಯೆ ಪರಿಹಾರಕ್ಕೆ ಪಂಚಾಯತ್ ಯೋಚಿಸುತ್ತಿದೆ. ಪ್ರಾಥಮಿಕ ಗಣನೆಯಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ 194 ಮಂದಿ ಮಕ್ಕಳು ಮೊಬೈಲ್ ಪೋನ್ ಇಲ್ಲದೆ ಆನ್ ಲೈನ್ ಕಲಿಕೆಯಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಪತ್ತೆಮಾಡಲಾಗಿದೆ. ಪಂಚಾಯತ್ ವ್ಯಾಪ್ತಿಯಲ್ಲಿ ಶಿಕ್ಷಕರ ಸಹಾಯದೊಂದಿಗೆ ಮಾಹಿತಿ ಸಂಗ್ರಹ ನಡೆಸಲಾಗುತ್ತಿದೆ.
ಸುಮಾರು 250 ಮಂದಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಪೋನ್ ಅಗತ್ಯವಿದೆ ಎಂದು ಪಂಚಾಯತ್ ಆಡಳಿತೆ ಸಮಿತಿ ಅಂದಾಜಿಸಿದೆ. ಈ ಮಕ್ಕಳಿಗೆ ಸ್ಮಾರ್ಟ್ ಪೋನ್ ಯಾ ಐ ಪಾಡ್ ವಿತರಿಸುವ ಉದ್ದೇಶವಿದೆ ಎಂದು ಪಂಚಾಯತ್ ಅಧ್ಯಕ್ಷೆ ಖಾದರ್ ಬದ್ರಿಯಾ ನುಡಿದಿದ್ದಾರೆ.
ಕಳೆದ ಬಾರಿ ವಿಕ್ಟರ್ಸ್ ಚಾನೆಲ್ ನ ತರಗತಿಗಳನ್ನು ಮಾತ್ರ ಆಶ್ರಯಿಸಿದ್ದ ಮಕ್ಕಳು ಈ ಬಾರಿ ಆನ್ ಲೈನ್ ಕಲಿಕಾ ವ್ಯವಸ್ಥೆಯನ್ನು ಮಾತ್ರ ಆಶ್ರಯಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಬಹುತೇಕ ಮಕ್ಕಳು ಪಂಚಾಯತ್ ನಲ್ಲಿದ್ದಾರೆ. ಅವರ ಸಂಕಷ್ಟ ಅರ್ಥಮಾಡಿಕೊಂಡು ಇಂಥಾ ಯೋಜನೆಯ ಮೂಲಕ ಅವರನ್ನು ಸಮಾಜದ ಪ್ರಧಾನವಾಹಿನಿಗೆ ಕರೆತರುವ ಯತ್ನ ನಡೆಸಲಾಗುತ್ತಿದೆ ಎಂದವರು ತಿಳಿಸಿದರು.
ಯೋಜನೆಗೆ ಚಾಲನೆ:
ಚೆಂಗಳ ಗ್ರಾಮ ಪಂಚಾಯತ್ ಮಟ್ಟದ ಮೊಬೈಲ್ ಪೋನ್ ಚಾಲೆಂಜ್ಗೆ ಚಾಲನೆ ಲಭಿಸಿದೆ. ಮೊದಲ ದೇಣಿಗೆ ಹಸ್ತಾಂತರಿಸುವ ಮೂಲಕ ಗ್ರಾಮ ಪಂಚಾಯತ್ ಅಧ್ಯಕ್ಷ ಖಾದರ್ ಬದ್ರಿಯಾ ಉದ್ಘಾಟಿಸಿದರು. ಪಂಚಾಯತ್ ಆಡಳಿತ ಸಮಿತಿ ಸದಸ್ಯರು, ಪಂಚಾಯತ್ ಸಿಬ್ಬಂದಿ, ಪಂಚಾಯತ್ ವ್ಯಾಪ್ತಿಯ ಶಿಕ್ಷಕರು, ಇತರ ಸರಕಾರಿ ಸಿಬ್ಬಂದಿ, ಸಾಮಾಜಿಕ ಕಾರ್ಯಕರ್ತರು, ಸ್ವಯಂಸೇವಾ ಸಂಘಟನೆಗಳ ಕಾರ್ಯಕರ್ತರು ಮೊದಲಾದವರನ್ನು ಈ ಯೋಜನೆಯ ಸದಸ್ಯರನ್ನಾಗಿಸಲಾಗುವುದು ಎಂದು ತಿಳಿಸಲಾಗಿದೆ.