ಗರ್ಭಿಣಿಯರು ಮಾರಣಾಂತಿಕ ಕೊರೋನ ವೈರಸ್ ಸೋಂಕಿಗೆ ತುತ್ತಾಗುವ ಸಾಧ್ಯತೆ ಬಗ್ಗೆ ಹೆಚ್ಚುತ್ತಿರುವ ಆತಂಕದ ಹಿನ್ನೆಲೆಯಲ್ಲಿ ಕೋವಿಡ್ ನೀತಿ ಬದಲಾವಣೆಯ ಸೂಚನೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ಗರ್ಭಿಣಿಯರು ಕೋವಿಡ್ ಲಸಿಕೆ ತೆಗೆದುಕೊಳ್ಳಬಹುದು ಹಾಗೂ ಅದು ಅವರ ಹಕ್ಕು ಕೂಡ ಆಗಿದೆ ಎಂದು ಹೇಳಿದೆ.
ಲಸಿಕೆ ಪಡೆದುಕೊಳ್ಳಲು ಹಾಲುಣಿಸುವ ಮಹಿಳೆಯರು ಕೂಡ ಅರ್ಹರು. ಆದರೆ, ಗರ್ಭಿಣಿ ಮಹಿಳೆಯರು ಅರ್ಹರಲ್ಲ ಎಂದು ಕಳೆದ ತಿಂಗಳು ಸರಕಾರ ಹೇಳಿತ್ತು. ʼಗರ್ಭಿಣಿಯರಿಗೆ ಲಸಿಕೆ ನೀಡುವ ಕುರಿತು ಆರೋಗ್ಯ ಸಚಿವಾಲಯ ಮಾರ್ಗಸೂಚಿಗಳನ್ನು ನೀಡಿದೆ. ಲಸಿಕೆ ಅವರಿಗೆ ಉಪಯುಕ್ತವಾಗಿದೆ ಹಾಗೂ ಅದನ್ನು ಅವರಿಗೆ ನೀಡಬೇಕು'' ಎಂದು ಐಸಿಎಂಆರ್ ನ ಪ್ರಧಾನ ನಿರ್ದೇಶಕ ಡಾ. ಬಲರಾಮ್ ಭಾರ್ಗವ್ ಹೇಳಿದ್ದಾರೆ. ಎನ್ಟಿಎಜಿಐ ಚರ್ಚೆ ನಡೆಸಿದ ವಿಷಯಗಳಲ್ಲಿ ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡುವುದು ಒಂದು ಪ್ರಮುಖ ವಿಷಯವಾಗಿತ್ತು.