ಬದಿಯಡ್ಕ:ವಿದ್ಯುತ್ ಶಾಕ್ ತಗಲಿ ಮಹಿಳೆ ಮೃತಪಟ್ಟ ದಾರುಣ ಘಟನೆ ಏತಡ್ಕ ಪುತ್ರಕಳ ರಸ್ತೆಯ ಅಳಕ್ಕೆ ಎಂಬಲ್ಲಿ ಗುರುವಾರ ನಡೆದಿದೆ.
ಏತಡ್ಕ ಸಮೀಪ ಉದ್ಯೋಗ ಖಾತರಿ ಕೆಲಸ ಮುಗಿಸಿ ಸಂಜೆ ಮನೆಗೆ ಹಿಂತಿರುಗುವ ದಾರಿ ಮಧ್ಯೆ ಈ ಅವಘಡ ಸಂಭವಿಸಿದೆ.ಏತಡ್ಕ ಅಳಕ್ಕೆ ನಿವಾಸಿ ರಾಮಚಂದ್ರ ಮಣಿಯಾಣಿ ಅವರ ಪತ್ನಿ ಸುಜಾತಾ (೫೦) ಮೃತಪಟ್ಟ ಮಹಿಳೆಯಾಗಿದ್ದಾರೆ.
ಏತಡ್ಕ ಆಸು ಪಾಸು ಪ್ರದೇಶದಲ್ಲಿ ರಸ್ತೆ ಬದಿ ಕಾಡು ಬಳ್ಳಿಗಳು ಎಚ್ ಟಿ ತಂತಿಯನ್ನು ಆವರಿಸಿದ್ದು ಹಸಿರು ಪೊದೆಯನ್ನು ಸ್ಪರ್ಷಿಸಿರುವುದು ಶಾಕ್ ತಗಲಲು ಕಾರಣ ಎನ್ನಲಾಗಿದೆ.ಬದಿಯಡ್ಕ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಮೃತ ಮಹಿಳೆಗೆ ಪತಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.
ಘಟನೆಯ ಪುನರಾವರ್ತನೆ:
2018ರ ಅ.1ರಂದು ಏತಡ್ಕ ಶಾಲೆಯಿಂದ ಮನೆಗೆ ಹಿಂತಿರುಗುವ ದಾರಿ ಮಧ್ಯೆ ಮನೆ ಸಮೀಪ ನೆಲಕ್ಕೆ ಬಿದ್ದ ತಂತಿ ಸ್ಪರ್ಷಿಸಿ ಒಂದನೇ ತರಗತಿ ವಿದ್ಯಾರ್ಥಿನಿ ಅರ್ಪಿತಾ ಮೃತ ಪಟ್ಟಿದ್ದಳು.ಈ ದುರ್ಘಟನೆ ಮನಸ್ಸಿನಿಂದ ಮರೆ ಮಾಸುವ ಮುನ್ನ ಮತ್ತೊಂದು ವಿದ್ಯುತ್ ಅವಘಡ ಸಂಭವಿಸಿದೆ.ಅಂದು ಮಗುವಿನ ತಾಯಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದರು.