ಮಂಗಳೂರು: ಕೊರೊನಾದಿಂದ ದಕ್ಷಿಣ ಕನ್ನಡ ಜಿಲ್ಲೆಯ ನೆರಿಯಾ ಗ್ರಾಮ ತತ್ತರಿಸಿ ಹೋಗಿದ್ದು, ಇಡೀ ಗ್ರಾಮದಲ್ಲಿ 370ಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡಿವೆ. ಗ್ರಾಮದ ಸಿಯೋನ್ ಆಶ್ರಮವೊಂದರಲ್ಲೇ 200ಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳು ದೃಢಪಟ್ಟಿವೆ.
300ಕ್ಕೂ ಅಧಿಕ ಮಂದಿ ಇರುವ ಸಿಯೋನ್ ಆಶ್ರಮದಲ್ಲಿ 200ಕ್ಕೂ ಹೆಚ್ಚು ಜನರಿಗೆ ಪಾಸಿಟಿವ್ ಕಂಡುಬಂದಿದ್ದು, ಆಶ್ರಮ ಸಂಪೂರ್ಣ ಕೊರೊನಾ ಕಾರ್ಖಾನೆಯಾಗಿ ಬದಲಾಗಿದೆ. ಆಶ್ರಮದ ನಿರ್ವಹಣೆ, ಆಶ್ರಮದಲ್ಲಿರುವ ಗೋವುಗಳ ನಿರ್ವಹಣೆಗೂ ಸಿಬ್ಬಂದಿ ಇಲ್ಲದೆ ಅವ್ಯವಸ್ಥೆಯ ಆಗರವಾಗಿದೆ. ಕ್ರೈಸ್ತ ಧರ್ಮದ ಆಶ್ರಮವಾದರೂ ಇದೀಗ ನೆರಿಯಾ ಗ್ರಾಮದ ವಿಶ್ವ ಹಿಂದೂ ಪರಿಷತ್ ಆಶ್ರಮದ ನೆರವಿಗೆ ಧಾವಿಸಿ ಬಂದಿದ್ದು, ಪ್ರತಿನಿತ್ಯ 20ಕ್ಕೂ ಅಧಿಕ ಕಾರ್ಯಕರ್ತರು ಆಶ್ರಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕೊರೊನಾ ಸಂಕಷ್ಟದ ಕಾಲದಲ್ಲಿ ಧರ್ಮದ ಬೇಧವಿಲ್ಲದೆ ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತರು ನಿಸ್ವಾರ್ಥ ಸೇವೆ ಮಾಡಿದ್ದಾರೆ. ಸಿಯೋನ್ ಆಶ್ರಮ 200 ಸೋಂಕಿತರ ಪೈಕಿ 100ಕ್ಕೂ ಹೆಚ್ಚು ಜನ ಧರ್ಮಸ್ಥಳದ ರಜತಾದ್ರಿ ಕೊವೀಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನುಳಿದವರು ಸಿಯೋನ್ ಆಶ್ರದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಡೀ ಆಶ್ರಮವನ್ನು ವಿಎಚ್‌ಪಿ ಕಾರ್ಯಕರ್ತರು ಪಿಪಿಇ ಕಿಟ್ ಧರಿಸಿ ಸ್ಯಾನಿಟೈಸೇಷನ್ ಮಾಡಿದ್ದಾರೆ.
ಸ್ವಂತ ಖರ್ಚಿನಲ್ಲೇ ವಿಎಚ್‌ಪಿ ಕಾರ್ಯಕರ್ತರು ಸ್ಯಾನಿಟೈಸೇಷನ್ ಮಾಡಿದ್ದು, ಆಶ್ರಮವನ್ನು ಸ್ವಚ್ಛಗೊಳಿಸಿದ್ದಾರೆ. ಆಶ್ರಮದಲ್ಲಿ 80ಕ್ಕೂ ಹೆಚ್ಚು ಗೋವುಗಳಿದ್ದು, ಆಶ್ರಮದ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲಿ ಗೋವುಗಳಿಗೆ ಆಹಾರದ ಸಮಸ್ಯೆ ಎದುರಾಗಿತ್ತು.
ಕೊರೊನಾದಿಂದ ಸಿಯೋನ್ ಆಶ್ರಮ ಮುಕ್ತವಾಗುವವರೆಗೂ ಗೋವುಗಳ ಲಾಲನೆ-ಪಾಲನೆ ಮಾಡುವುದಾಗಿ ವಿಶ್ವ ಹಿಂದೂ ಪರಿಷತ್‌ನ ನೆರಿಯಾ ಘಟಕ ಜವಾಬ್ದಾರಿ ವಹಿಸಿಕೊಂಡಿದ್ದು, ಇಡೀ ಗೋವುಗಳ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿದ್ದಾರೆ. ಗೋವುಗಳನ್ನು ತೊಳೆದು, ಆರೋಗ್ಯ ಪರೀಕ್ಷೆಗಾಗಿ ಪಶು ವೈದ್ಯರ ನೆರವು ಪಡೆದಿದ್ದಾರೆ. ಗೋವುಗಳಿಗೆ ಮೇವಿನ ವ್ಯವಸ್ಥೆಯನ್ನೂ ಕಾರ್ಯಕರ್ತರು ಮಾಡಿದ್ದಾರೆ.
ಕೊರೊನಾ ಸಂದಿಗ್ಧತೆಯ ಕಾಲದಲ್ಲಿ ಜಾತಿ-ಧರ್ಮ ಭೇದವನ್ನು ಮರೆತು, ಕಷ್ಟದ ಕಾಲದಲ್ಲಿ ನೆರವಾಗುವ ಮೂಲಕ ಧಾರ್ಮಿಕ ಸಂಘಟನೆಗಳು ಮಾದರಿಯಾಗಿವೆ.