ಕಾಸರಗೋಡು: ಜಿಲ್ಲಾಧಿಕಾರಿ ಕಚೇರಿಯಲ್ಲಿ ಇನ್ನು ಮುಂದೆ ರಾಜ್ಯ ಸರ್ಕಾರದ ಲಾಂಛನ ಕಂಗೊಳಿಸಲಿದೆ. ಇಲ್ಲಿನ ಪ್ರಧಾನ ಕಟ್ಟಡದ ಕ್ಲಾಕ್ ಟವರ್ ಬಳಿ ಬಂಗಾರದ ಬಣ್ಣದಲ್ಲಿ ಸರ್ಕಾರಿ ಲಾಂಛನ ಮುದ್ರಿತಗೊಂಡಿದೆ. ಧ್ವಜಸ್ತಂಭದ ಬಳಿಯ ಮಹಾತ್ಮಾಗಾಂಧಿ ಪ್ರತಿಮೆ ಮತ್ತು ಕಟ್ಟಡದ ಕ್ಲಾಕ್ ಜೊತೆಗೆ ಸರ್ಕಾರಿ ಲಾಂಛನವೂ ಸೇರಿ ಜಿಲ್ಲಾಧಿಕಾರಿ ಕಚೇರಿ ಹೆಚ್ಚಿನ ಆಕರ್ಷಣೆಗೆ ಕಾರಣವಾಘಿದೆ. 8 ಅಡಿ ಅಗಲ, 5 ಅಡಿ ಉದ್ದ ಹೊಂದಿರುವ ಕೇರಳ ಸರ್ಕಾರದ ಲಾಂಛನ ಸಿದ್ಧಗೊಂಡಿದೆ.
ಕಟ್ಟಡ ಮತ್ತು ಆವರಣ ಶೃಂಗರಿಸುವ ಅಂಗವಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ವಿಶೇಷ ಕಾಳಜಿಯೊಂದಿಗೆ ಕ್ಲಾಕ್ ಟವರ್ ಸಹಿತ ಈ ವ್ಯವಸ್ಥೆ ಜಾರಿಯಾಗಿದೆ. ಪ್ರಧಾನ ಪ್ರವೇಶ ದ್ವಾರ ಬಳಿಯೇ ಇರುವ ಫಿಟ್ ನೆಸ್‍ಪಾರ್ಕ್ ಕೂಡ ಆರಂಭಗೊಂಡಿದ್ದು ಸಾರ್ವಜನಿಕರನ್ನು ಜಿಲ್ಲಾಡಳಿತ ಕೇಂದ್ರದತ್ತ ಗಮನಸೆಳೆಯುವಂತೆ ಮಾಡಿದೆ. ಪ್ರತಿದಿನ 400 ಕ್ಕೂ ಅಧಿಕ ಮಂದಿ ಇಲ್ಲಿ ವ್ಯಾಯಾಮ ನಡೆಸುತ್ತಿದ್ದಾರೆ.
ಜಿಲ್ಲಾಧಿಕಾರಿ ಅವರ ವಿಶೇಷ ಮನವಿಯ ಮೇರೆಗೆ ಖತಾರ್ ನಲ್ಲಿ ಉದ್ಯಮಿಯಾಗಿರುವ, ಕ್ಯಾಪಿಟಲ್ ಆನ್ ಸಂಸ್ಥೆಯ ಮಾಲೀಕ ಖಾದರ್ ಅವರು ಸರ್ಕಾರಿ ಲಾಂಛನ ಕೊಡುಗೆಯಾಗಿ ನೀಡಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಇವರ ಸಹೋದರ ಅಬು ಪ್ಲಸ್ ಮಾರ್ಕ್ ಅವರು ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಸೈಮನ್ ಫೆನಾರ್ಂಡಿಸ್ ಅವರಿಗೆ ಲಾಂಛನವನ್ನು ಹಸ್ತಾಂತರಿಸಿದರು. ಜಿಲ್ಲಾ ಇನ್ಫಾರ್ಮೆಟಿಕ್ ಅಧಿಕಾರಿ ಕೆ.ರಾಜನ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಕಾರಿ ಇಂಜಿನಿಯರ್ ರವಿಕುಮಾರ್, ಓವರ್ ಸೀಯರ್ ರಾಜೇಶ್, ಪತ್ರಕರ್ತ ಟಿ.ಎ.ಶಾಫಿ ಮೊದಲಾದವರು ಉಪಸ್ಥಿತರಿದ್ದರು.