ನವದೆಹಲಿ: ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ 2.0, ಪೋರ್ಟಲ್ ಸೋಮವಾರದಿಂದ ಆರಂಭವಾಗಿದೆ. ಇದು ಆನ್‌ಲೈನ್ ರಿಟರ್ನ್ಸ್ ಮತ್ತು ತೆರಿಗೆ ಪಾವತಿಯನ್ನು ಸುಲಭಗೊಳಿಸುತ್ತದೆ. ಹಿಂದೆ ಇದ್ದ 'https://incometaxindiaefiling.gov.in' ಬದಲು www.incometax.gov.in ಸೈಟ್ ಆರಂಭವಾಗಿದ್ದು, ವಿವಿಧ ಭಾಷೆಗಳಲ್ಲಿ ಲಭ್ಯವಿದೆ.
ತೆರಿಗೆದಾರರು ಡಿಎಸ್ ಸಿ (ಡಿಜಿಟಲ್ ಸಹಿ ಪ್ರಮಾಣ ಪತ್ರ) ಹೊಸದಾದ ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿಯನ್ನು ಪ್ರಾಥಮಿಕ ಸಂಪರ್ಕದ ಅಡಿಯಲ್ಲಿ ಮರು ನೋಂದಣಿ ಮಾಡಿಕೊಳ್ಳುವಂತೆ ಆದಾಯ ತೆರಿಗೆ ಇಲಾಖೆ ಹೇಳಿದೆ. ವೈಯಕ್ತಿಕ, ಕಂಪನಿ, ಕಂಪನಿಯೇತರ ಹೀಗೆ ವಿಭಿನ್ನ ರೀತಿಯ ತೆರಿಗೆ ವೃತ್ತಿದಾರರಿಗೆ ಪ್ರತ್ಯೇಕವಾದ ಟ್ಯಾಬ್ ಗಳನ್ನು ಈ ಫೋರ್ಟಲ್ ಹೊಂದಿದೆ. ಆದಾಯ ತೆರಿಗೆ ರಿಟರ್ನ್ಸ್ ನೋಂದಣಿ, ಮರುಪಾವತಿ ಸ್ಥಿತಿ ಮತ್ತು ತೆರಿಗೆ ಸ್ಲ್ಯಾಬ್‌ಗಳ ಸೂಚನೆಗಳನ್ನು ಪರಿಶೀಲಿಸಲು ತೆರಿಗೆದಾರರಿಗೆ ಇದು ಡ್ರಾಪ್-ಡೌನ್ ಮೆನು ಹೊಂದಿದೆ.
ಐ-ಟಿ ಇ-ಫೈಲಿಂಗ್ ಪೋರ್ಟಲ್‌ನ 8.46 ಕೋಟಿಗೂ ಹೆಚ್ಚು ವೈಯಕ್ತಿಕ ನೋಂದಾಯಿತ ಬಳಕೆದಾರರಿದ್ದಾರೆ. 2020-21ರ ಆರ್ಥಿಕ ವರ್ಷದಲ್ಲಿ ಸುಮಾರು 3.13 ಕೋಟಿ ಐಟಿ ರಿಟರ್ನ್ಸ್ ಗಳನ್ನು ಇ- ಪರಿಶೀಲನೆ ಮಾಡಲಾಗಿದೆ. ಹೊಸ ಪೋರ್ಟಲ್‌ನಲ್ಲಿ ಲಭ್ಯವಿರುವ ವಿವಿಧ ಸೇವೆಗಳನ್ನು ಅರ್ಥಮಾಡಿಕೊಳ್ಳಲು ವಿವರವಾದ ಬಳಕೆದಾರರ ಕೈಪಿಡಿಗಳು, FAQ ಗಳು ಮತ್ತು ವೀಡಿಯೊಗಳನ್ನು ಸಹ ಹೊಂದಿದೆ. ಅಲ್ಲದೇ, ಮಾರ್ಗದರ್ಶಿ ಸಹಾಯಕ್ಕಾಗಿ ಚಾಟ್‌ಬಾಟ್ ಮತ್ತು ಸಹಾಯವಾಣಿ ಒದಗಿಸಲಾಗಿದೆ.
ನೋಂದಾಯಿತ ಬಳಕೆದಾರರು ಒಮ್ಮೆ ಪೋರ್ಟಲ್‌ಗೆ ಲಾಗ್ ಇನ್ ಮಾಡಿದ ನಂತರ, ಡ್ಯಾಶ್‌ಬೋರ್ಡ್ ಇ-ಪ್ರೊಸೀಡಿಂಗ್‌ಗಳ ವಿವರಗಳು, ಏನಾದರೂ ಬೇಡಿಕೆಗಳಿದ್ದರೆ ಅದಕ್ಕೆ ಪ್ರತಿಕ್ರಿಯೆಗಳನ್ನು ತೋರಿಸುತ್ತದೆ. 'ಪೆಂಡಿಂಗ್ ಆಕ್ಸನ್' ಟ್ಯಾಬ್ ಅಡಿಯಲ್ಲಿ ವಾರ್ಷಿಕ ಮಾಹಿತಿ ಹೇಳುತ್ತದೆ. ಕುಂದುಕೊರತೆ ಮೆನು ತೆರಿಗೆದಾರರಿಗೆ ಯಾವುದೇ ಕುಂದುಕೊರತೆಗಳನ್ನು ಸಲ್ಲಿಸಲು ಮತ್ತು ಹಿಂದೆ ಸಲ್ಲಿಸಿದವುಗಳನ್ನು ವೀಕ್ಷಿಸಲು ಅನುಮತಿಸುತ್ತದೆ.
'ಮೈ ಪ್ರೊಫೈಲ್ ಮೆನು'ವಿನಲ್ಲಿ ತೆರಿಗೆದಾರರು, ತಮ್ಮ ವೈಯಕ್ತಿಕ ಮಾಹಿತಿಯನ್ನು ನೋಡಬಹುದು, ತಿದ್ದುಪಡಿ ಮಾಡಬಹುದಾಗಿದೆ. ಅಲ್ಲದೆ, ತೆರಿಗೆ ಪಾವತಿದಾರರು ತೆರಿಗೆ-ಸಂಬಂಧಿತ ಸೇವೆಗಳನ್ನು ಪಡೆಯಲು ಸಹಾಯ ಮಾಡಲು ಮೊಬೈಲ್ ಅಪ್ಲಿಕೇಶನ್ ಲಭ್ಯವಿದೆ. ತೆರಿಗೆದಾರರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಮತ್ತು ಮರುಪಾವತಿ ಕುರಿತ ದೂರುಗಳನ್ನು ಸಲ್ಲಿಸಲು ಇ-ಫಿಲ್ಲಿಂಗ್ ಪೋರ್ಟಲ್ ಬಳಸಿಕೊಳ್ಳಬಹುದಾಗಿದೆ.