ನವದೆಹಲಿ: ಗಾಜಾ ಪಟ್ಟಿಯಲ್ಲಿ ನಡೆದಿರುವ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಲ್ಲಿ ಮತ ಚಲಾವಣೆಯಿಂದ ದೂರ ಉಳಿದಿರುವುದು ಹೊಸ ನಿಲುವಲ್ಲ ಎಂದು ಭಾರತ ಹೇಳಿದೆ.
ಈ ಹಿಂದೆಯೂ ಹಲವು ಸಂದರ್ಭಗಳಲ್ಲಿ ಭಾರತ ಇದೇ ವಿಷಯವಾಗಿ ಮತದಾನದಿಂದ ದೂರ ಉಳಿದಿದ್ದ ಉದಾಹರಣೆ ಇದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಭಾರತ ಯುಎನ್ ಹೆಚ್‌ಆರ್ ಸಿಯಲ್ಲಿ ಮತದಾನದಿಂದ ಹಿಂದೆ ಸರಿದಿದ್ದನ್ನು ಪ್ರಶ್ನಿಸಿರುವ ಪ್ಯಾಲೆಸ್ತೇನ್ ನ ವಿದೇಶಾಂಗ ಸಚಿವರು ಭಾರತದ ವಿದೇಶಾಂಗ ಸಚಿವರಿಗೆ ಪತ್ರ ಬರೆದಿದ್ದರು. ಈ ಸಂಬಂಧ ಕೇಳಲಾದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರರಾದ ಅರಿಂದಮ್ ಬಗ್ಚಿ ಭಾರತಕ್ಕೆ ಮಾತ್ರವಷ್ಟೇ ಅಲ್ಲದೇ ಮತದಾನದಿಂದ ಹಿಂದೆ ಸರಿದ ಎಲ್ಲಾ ದೇಶಗಳಿಗೂ ಪ್ಯಾಲೆಸ್ತೇನ್ ಪತ್ರ ಬರೆದಿದೆ ಎಂದು ಹೇಳಿದ್ದಾರೆ.
ಗಾಜಾ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಭಾರತ ಹಿಂದಿನಿಂದಲೂ ಅನುಸರಿಸುತ್ತಿರುವ ನಿಲುವನ್ನೇ ಈಗಲೂ ತೆಗೆದುಕೊಂಡಿದೆ, ಹೊಸ ನಿಲುವನ್ನು ತಳೆದಿಲ್ಲ ಎಂದು ಹೇಳಿದೆ. ಮೇ.11 ರಂದು ಇಸ್ರೇಲ್ ಹಾಗೂ ಹಮಾಸ್ ನಡುವಿನ ಸಂಘರ್ಷದಲ್ಲಿ 250 ಕ್ಕೂ ಹೆಚು ಮಂದಿ ಸಾವನ್ನಪ್ಪಿದ್ದರು.