ಮುಳ್ಳೇರಿಯ: ಸ್ಟೇಜ್ ಆರ್ಟಿಸ್ಟ್ ವರ್ಕರ್ಸ್ ಅಸೋಸಿಯೇಷನ್ ಆಫ್ ಕೇರಳ(ಸವಾಕ್) ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಕಲಾವಿsದರಿಗೆ ನೀಡುವ ಕೋವಿಡ್ 19 ಸಾಂತ್ವನ ಕಿಟ್ ಕಾರಡ್ಕ ವಲಯ ಮಟ್ಟದ ವಿತರಣೆ ಇತ್ತೀಚೆಗೆ ನಡೆಯಿತು.
ಕಾರಡ್ಕ ವಲಯ ಅಧ್ಯಕ್ಷ ಎ.ಬಿ.ಮಧುಸೂದನ ಬಲ್ಲಾಳ್ ಅವರ ಅಧ್ಯಕ್ಷತೆಯಲ್ಲಿ ನಾಟೆಕ್ಕಲ್ಲು ನವ್ಯತ ಫ್ಯಾನ್ಸಿ ಸ್ಟೋರ್ ಪರಿಸರದಲ್ಲಿ ಕಾರಡ್ಕ ವಲಯದ ಕಲಾವಿದರಿಗೆ ಕಿಟ್ ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದ ಎ.ಬಿ.ಮಧುಸೂದನ ಬಲ್ಲಾಳ್ ಅವರು, ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ ಕ್ಷೇತ್ರಗಳಂತೆಯೇ ಕಲಾ ಕ್ಷೇತ್ರವೂ ಬಡವಾಗಿದೆ. ಕಲಾವಿದರು, ಅವರನ್ನು ಆಶ್ರಯಿಸಿರುವ ಕುಟುಂಬ ನಿರ್ಗತಿಕವಾಗುತ್ತಿದ್ದು, ಈ ನಿಟ್ಟಿನಲ್ಲಿ ಕಲಾವಿದರ ಸಂಘಟನೆಯಾದ ಸವಾಕ್ ಮೂಲಕ ಒಂದಷ್ಟು ನೆರವು ನೀಡಲು ಯತ್ನಿಸಿರುವುದು ಸಂಘಟನೆಯ ಕಳಕಳಿಯ ಪ್ರತೀಕ ಎಂದು ತಿಳಿಸಿದರು.
ಹಿರಿಯ ಯಕ್ಷಗಾನ ಕಲಾವಿದ ಚನಿಯಪ್ಪ ನಾಯ್ಕ್ ಎ.ಬಿ. ಮನೋಹರ ಬಳ್ಳಾಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅರ್ಪಿತಾ ಎಂ ಬಲ್ಲಾಳ್ ಸ್ವಾಗತಿಸಿ, ರಂಗಭೂಮಿ ಕಲಾವಿದ ಮೋಹನ ಬಲ್ಲಾಳ್ ವಂದಿಸಿದರು.